ಈಶ್ವರ ಖಂಡ್ರೆ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಹಿಂದಿನ ಬಿಬಿಎಂಪಿಯಲ್ಲಿ ತೆರೆಯಲಾಗಿದ್ದ ಅರಣ್ಯ ಶಾಖೆಯನ್ನು ಮರಳಿ ಪಡೆದು ಇಲಾಖೆಯ ಅಡಿಯಲ್ಲೇ ಜಿಬಿಎ ಅರಣ್ಯ ವಿಭಾಗವನ್ನು ರಚಿಸುವ ಕುರಿತು ಪರಿಶೀಲಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ವಿಸರ್ಜಿಸಿ ಈಗ ಜಿಬಿಎ ಅಡಿ 5 ನಗರ ಪಾಲಿಕೆಗಳನ್ನು ನಿರ್ಮಿಸಲಾಗಿದೆ. ಆದರೆ ಅರಣ್ಯ ಇಲಾಖೆಯಲ್ಲಿಯೇ ಸಿಬ್ಬಂದಿ ಕೊರತೆ ಇರುವುದರಿಂದ ಐದು ವಿಭಾಗಗಳಿಗೆ ಸಿಬ್ಬಂದಿ ನಿಯೋಜನೆ ಅಸಾಧ್ಯ. ಈ ಕಾರಣದಿಂದ ಹಾಲಿ ಇರುವ ಅರಣ್ಯ ವಿಭಾಗವನ್ನು, ಅರಣ್ಯ ಇಲಾಖೆಗೆ ವಾಪಸ್ ಪಡೆಯುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿರುವುದರಿಂದ ಪ್ರತ್ಯೇಕ ವಿಭಾಗವನ್ನು ಇಲಾಖೆ ಅಡಿಯಲ್ಲಿಯೇ ರೂಪಿಸುವ ಬಗ್ಗೆ ಪರಾಮರ್ಶೆ ನಡೆಸಿ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಅರಣ್ಯ ಪಡೆ) ಅವರಿಗೆ ಸೂಚಿಸಿದ್ದಾರೆ.
ಬೆಂಗಳೂರಿನಲ್ಲಿ ಮರಗಳ ಮಾಲಿಕತ್ವ ಮತ್ತು ನಿರ್ವಹಣೆ ಜವಾಬ್ದಾರಿ ಜಿಬಿಎಯದ್ದು. ಮರದ ಕೊಂಬೆ ಬಿದ್ದು ಸಾರ್ವಜನಿಕರು ಮೃತಪಟ್ಟರೆ ಇಲ್ಲವೇ ಗಾಯಗೊಂಡರೆ ಅರಣ್ಯ ವಿಭಾಗದ ಅಧಿಕಾರಿಗಳ ಮೇಲೆಯೇ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದು, ಇದು ಸಿಬ್ಬಂದಿಯ ಆತ್ಮಸ್ಥೈರ್ಯ ಕುಗ್ಗಿಸುತ್ತಿದೆ. ಇದಕ್ಕೂ ಹೊಸ ವಿಭಾಗದಲ್ಲಿ ಸ್ಪಷ್ಟ ಕ್ರಮಗಳನ್ನು ಉಲ್ಲೇಖಿಸುವಂತೆ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.