ADVERTISEMENT

ತಲೆದಂಡ ನಾಟಕದಲ್ಲಿ ಧರ್ಮಕಾರಣದ ಒಳನೋಟ ಅಭಿವ್ಯಕ್ತಿ: ಸಿ. ಬಸವಲಿಂಗಯ್ಯ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 15:37 IST
Last Updated 12 ಫೆಬ್ರುವರಿ 2026, 15:37 IST
ಗಿಡಕ್ಕೆ ನೀರೆರೆಯುವ ಮೂಲಕ ಸಿ. ಬಸವಲಿಂಗಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ವೈ.ಎಂ. ರಾಜೇಶ್ವರಿ, ಕೆ.ಬಿ. ಕಿರಣ್ ಸಿಂಗ್, ಮಾನಸ ಹಾಗೂ ರೇಖಾ ಸಿನ್ಹಾ ಉಪಸ್ಥಿತರಿದ್ದರು 
ಪ್ರಜಾವಾಣಿ ಚಿತ್ರ
ಗಿಡಕ್ಕೆ ನೀರೆರೆಯುವ ಮೂಲಕ ಸಿ. ಬಸವಲಿಂಗಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ವೈ.ಎಂ. ರಾಜೇಶ್ವರಿ, ಕೆ.ಬಿ. ಕಿರಣ್ ಸಿಂಗ್, ಮಾನಸ ಹಾಗೂ ರೇಖಾ ಸಿನ್ಹಾ ಉಪಸ್ಥಿತರಿದ್ದರು  ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸಮಕಾಲೀನ ಜಾಗತಿಕ ಪರಿಸ್ಥಿತಿಯ ಧರ್ಮಕಾರಣ ಹಾಗೂ ರಾಜಕಾರಣದ ಒಳನೋಟವನ್ನು ‘ತಲೆದಂಡ’ ನಾಟಕ ಅತ್ಯಂತ ಸಮರ್ಥವಾಗಿ ಅಭಿವ್ಯಕ್ತಿಸಿದೆ’ ಎಂದು ರಂಗಕರ್ಮಿ ಸಿ. ಬಸವಲಿಂಗಯ್ಯ ಹೇಳಿದರು.

ನಾಟಕಕಾರ ಗಿರೀಶ ಕಾರ್ನಾಡ ಅವರ 88ನೇ ಜನ್ಮದಿನದ ಅಂಗವಾಗಿ ಕನ್ನಡ ಪುಸ್ತಕ ಪ್ರಾಧಿಕಾರವು ಜೈನ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಅಂಗಳದಲ್ಲಿ ತಿಂಗಳ ಪುಸ್ತಕ’ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು. 

‘ಚಾರಿತ್ರಿಕ ಹಾಗೂ ಪೌರಾಣಿಕ ಪಾತ್ರಗಳ ಮೂಲಕ ಸಮಕಾಲೀನ ವಿದ್ಯಮಾನಗಳಿಗೆ ಮುಖಾಮುಖಿಯಾಗುವುದು ಗಿರೀಶ ಕಾರ್ನಾಡ ಅವರ ನಾಟಕಗಳ ವೈಶಿಷ್ಟ್ಯವಾಗಿದೆ. ಅದರಲ್ಲಿಯೂ ‘ತಲೆದಂಡ’ವು ಕಾರ್ನಾಡ ಅವರು ಸೃಷ್ಟಿಸಿದ ಅದ್ಭುತ ನಾಟಕಗಳಲ್ಲಿ ಒಂದಾಗಿದೆ. ಜಾತಿ ನಿರ್ಮೂಲನೆಗೆ ಪ್ರಯತ್ನಿಸುವುದೇ ಅಪರಾಧ ಎಂದು ಪರಿಗಣಿಸಲಾದ ಸಾಮಾಜಿಕ ವ್ಯವಸ್ಥೆಯಲ್ಲಿ, ಉದ್ಯೋಗ ಮತ್ತು ಜಾತಿ ಸಮೀಕರಣವನ್ನು ತಮ್ಮದೇ ದೃಷ್ಟಿಯಲ್ಲಿ ಈ ನಾಟಕ ವಿಶ್ಲೇಷಿಸುತ್ತದೆ. ಉತ್ತರ ಕರ್ನಾಟಕದ ಹಾಡು–ಭಾಷೆಯಲ್ಲಿ ಗಟ್ಟಿ ಸಂಭಾಷಣೆಗಳ ಮೂಲಕ ಈ ನಾಟಕ ಕಟ್ಟಿಕೊಡುವ ಅನುಭೂತಿ ವಿಶಿಷ್ಟವಾದದ್ದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

‘ಯಾವುದೇ ನಾಟಕ ಪ್ರದರ್ಶನವಾಗದೆ ಇದ್ದರೆ, ರಂಗದ ಮೇಲೆ ಅಭಿವ್ಯಕ್ತಿಗೊಳ್ಳದೆ ಹೋದರೆ ಅದು ವ್ಯರ್ಥವಾಗುತ್ತದೆ. ಗಿರೀಶ ಕಾರ್ನಾಡ ಅವರ ನಾಟಕಗಳು ದೇಶದ ವಿವಿಧ ಭಾಷೆಗಳ ರಂಗಭೂಮಿಗಳಲ್ಲಿ ಪ್ರದರ್ಶನಗೊಂಡಿದ್ದು, ಇದು ಅವರ ನಾಟಕಗಳ ಮಹತ್ವವನ್ನು ಸಾರಿ ಹೇಳುತ್ತದೆ’ ಎಂದರು.

ಪ್ರಾಧಿಕಾರದ ಅಧ್ಯಕ್ಷ ಮಾನಸ, ‘ಸಾಹಿತ್ಯ ಮತ್ತು ಲಲಿತ ಕಲೆಗಳು ಯುವ ಪೀಳಿಗೆಗೆ ಅತ್ಯಂತ ಅಗತ್ಯ. ಇಂದಿನ ಜನಾಂಗ ಸಾಹಿತ್ಯದ ಬಳಿ ಬರದೆ ಹೋದರೆ, ನಾವೇ ಅವರಿರುವ ಜಾಗಕ್ಕೆ ಸಾಹಿತ್ಯವನ್ನು ಕೊಂಡೊಯ್ಯಬೇಕಿದೆ. ಆ ನಿಟ್ಟಿನಲ್ಲಿ ಪ್ರಾಧಿಕಾರ ಕಾರ್ಯಕ್ರಮಗಳನ್ನು ರೂಪಿಸಿ ಪುಸ್ತಕ ಪ್ರೀತಿ ಬಿತ್ತಲು ಪ್ರಯತ್ನಿಸುತ್ತಿದೆ’ ಎಂದರು.

ಜೈನ್ ವಿಶ್ವವಿದ್ಯಾಲಯದ ಭಾಷಾ ವಿಭಾಗದ ಮುಖ್ಯಸ್ಥೆ ರೇಖಾ ಸಿನ್ಹಾ, ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ. ಕಿರಣ್ ಸಿಂಗ್, ಭಾಷಾ ವಿಭಾಗದ ಸಂಯೋಜಕಿ ವೈ.ಎಂ. ರಾಜೇಶ್ವರಿ ಉಪಸ್ಥಿತರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.