ADVERTISEMENT

ಯುವತಿಗೆ ಬ್ಲ್ಯಾಕ್‌ಮೇಲ್; ₹ 4.50 ಲಕ್ಷ ಕಿತ್ತ ಸಹಪಾಠಿ

​ಪ್ರಜಾವಾಣಿ ವಾರ್ತೆ
Published 15 ಮೇ 2020, 19:33 IST
Last Updated 15 ಮೇ 2020, 19:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಫೋಟೊವೊಂದನ್ನುಇಟ್ಟುಕೊಂಡು ಯುವತಿಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತ ₹ 4.50 ಲಕ್ಷ ವಸೂಲಿ ಮಾಡಿರುವ ಆರೋಪದಡಿ ಅಬ್ದುಲ್ ಜಾವೀದ್ ಎಂಬಾತನ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

‘ಬ್ಲ್ಯಾಕ್‌ಮೇಲ್ ಹಾಗೂ ಸುಲಿಗೆ ಸಂಬಂಧ 20 ವರ್ಷದ ಯುವತಿ ದೂರು ನೀಡಿದ್ದಾರೆ. ಆಕೆಯ ಕಾಲೇಜು ಸಹಪಾಠಿ ಎನ್ನಲಾಗಿರುವ ಅಬ್ದುಲ್ ಜಾವೀದ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ವಿಚಾರಣೆ ನಡೆಸಬೇಕಿದೆ’ ಎಂದು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಹೇಳಿದರು.

‘ಮೂರು ವರ್ಷಗಳ ಹಿಂದೆ ಯುವತಿ ಹಾಗೂ ಆರೋಪಿಗೆ ಪರಿಚಯವಾಗಿತ್ತು. ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ತನ್ನ ತಂದೆ ಕಾಲೇಜೊಂದರಲ್ಲಿ ಅಧಿಕಾರಿ ಎಂದು ಆರೋಪಿ ಸುಳ್ಳು ಹೇಳಿದ್ದ. ಆಗಾಗ ಯುವತಿ ಮನೆಗೆ ಹೋಗಿ ಬರುತ್ತಿದ್ದ. ಹಣಕಾಸಿನ ತೊಂದರೆ ಇರುವುದಾಗಿ ಹೇಳಿ ಯುವತಿ ಪೋಷಕರ ಬಳಿ ₹ 40 ಸಾವಿರ ಸಾಲ ಪಡೆದಿದ್ದ. ನಿಗದಿತ ಸಮಯಕ್ಕೆ ಹಣ ವಾಪಸು ಕೊಟ್ಟು ನಂಬಿಕೆ ಗಿಟ್ಟಿಸಿಕೊಂಡಿದ್ದ’ ಎಂದರು.

ADVERTISEMENT

‘ಯುವತಿ ಜೊತೆಗೆ ಸಲುಗೆ ಬೆಳೆಸಿಕೊಂಡಿದ್ದ ಆರೋಪಿ, ಹೋಟೆಲ್ ಹಾಗೂ ಉದ್ಯಾನ ಸೇರಿ ಹಲವೆಡೆ ಸುತ್ತಾಡಿದ್ದ. ಅದೇ ವೇಳೆಯೇ ಯುವತಿ ಜೊತೆಗಿನ ಫೋಟೊಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ.’

‘ಯುವತಿ ಬಳಿ ಹಣವಿರುವುದು ಆರೋಪಿಗೆ ಗೊತ್ತಿತ್ತು. ಹೀಗಾಗಿಯೇ ಆತ, ಸಲುಗೆ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಹೇಳಿ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದ. ನಂತರ, ಹಣಕ್ಕೆ ಬೇಡಿಕೆ ಇಟ್ಟು ಯುವತಿಯಿಂದ ₹ 4.50 ಲಕ್ಷ ವಸೂಲಿ ಮಾಡಿದ್ದ’ ಎಂದೂ ಪೊಲೀಸರು ಹೇಳಿದರು.

‘ಹಣ ಪಡೆದ ಬಳಿಕವೂ ಆರೋಪಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ತೆರೆದು ಫೋಟೊಗಳನ್ನು ಅಪ್‌ಲೋಡ್ ಮಾಡಿದ್ದ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.