ADVERTISEMENT

ಕಣ್ಣು ಕಳೆದುಕೊಂಡ ಬಾಲಕಿ

ಪಟಾಕಿ ಸದ್ದು ಅಷ್ಟಿರಲಿಲ್ಲ; ಹೀಗಿದ್ದೂ ಕಣ್ಣುಗಳಿಗೆ ಹಾನಿ ತಪ್ಪಲಿಲ್ಲ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2018, 19:46 IST
Last Updated 7 ನವೆಂಬರ್ 2018, 19:46 IST
   

ಬೆಂಗಳೂರು: ಮನೆ ಎದುರು ಹಚ್ಚಿಟ್ಟಿದ್ದ ‘ಹೂವಿನ ಕುಂಡ’ವನ್ನು ಪರೀಕ್ಷಿಸಲು ಹೋಗಿದ್ದ 13 ವರ್ಷದ ಬಾಲಕಿ ಸಾದಿಕಾ ಬಾನು ಶಾಶ್ವತವಾಗಿ ಒಂದು ಕಣ್ಣನ್ನು ಕಳೆದುಕೊಂಡಿದ್ದಾಳೆ.

‘ಸಾದಿಕಾ ತಂದೆ, ರದ್ದಿಪೇಪರ್‌ ವಹಿವಾಟು ನಡೆಸುತ್ತಾರೆ. ಅವರಿಗೆ ಮೂವರು ಹೆಣ್ಣು, ಇಬ್ಬರು ಗಂಡು ಮಕ್ಕಳು ಇದ್ದಾರೆ. ಹೈಸ್ಕೂಲ್ ಓದಿಸಲು ಸಾಧ್ಯವಾಗದೇ ಒಂದು ವರ್ಷದ ಹಿಂದೆಯಷ್ಟೆ ಆಕೆಯನ್ನು ಶಾಲೆ ಬಿಡಿಸಿದ್ದರು. ಪಟಾಕಿ ಹೊಡೆಯಲು ಹೋದಾಗ ಅಕಸ್ಮಾತಾಗಿ ಬಲಗಡೆ ಕಣ್ಣಿಗೆ ಪೆಟ್ಟಾಗಿದೆ’ ಎಂದು ಸಾದಿಕಾಳ ಮಾವ ಚಾಂದ್ ಹೇಳಿದರು.

‘ಮತ್ತೆ ಆಕೆಗೆ ಕಣ್ಣು ಬರಲು ಸಾಧ್ಯವೇ ಇಲ್ಲ ಎಂದು ವೈದ್ಯರು ಹೇಳಿದ್ದಾರೆ’ ಎಂದು ಅವರು ಗೋಳು ತೋಡಿಕೊಂಡರು. ಬೊಮ್ಮನಹಳ್ಳಿಯ ದಿವ್ಯಾ ಎಂಬ ಬಾಲಕಿಯ ಕಣ್ಣಿಗೂ ಪಟಾಕಿಯಿಂದ ಗಾಯವಾಗಿದೆ.

ADVERTISEMENT

‘ವಂಗಸಂದ್ರದ ಬಳಿ ಐದಾರು ಮಕ್ಕಳು ಪಟಾಕಿ ಹೊಡೆಯುತ್ತಿದ್ದರು. 8 ವರ್ಷದ ಮಗಳು, ಸಮೀಪದಲ್ಲಿಯೇ ಇದ್ದ ಅಂಗಡಿಗೆ ಹೋಗಿದ್ದಳು. ಅದೇ ಸಂದರ್ಭದಲ್ಲಿ ಪಟಾಕಿ ಸಿಡಿದಿದೆ. ಈಕೆಯ ಬಲಭಾಗದ ಕಣ್ಣಿಗೆ ಹಾನಿಯಾಗಿದೆ. ಆದರೆ ಹೆಚ್ಚು ತೊಂದರೆಯಾಗಿಲ್ಲ. ಕೆಲವು ದಿನಗಳ ಚಿಕಿತ್ಸೆ ಬಳಿಕ ಕಣ್ಣು ಸರಿಯಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ’ ಎಂದು ದಿವ್ಯಾ ಅವರ ತಾಯಿ ಹೇಳಿದರು.

ಏಳು ವರ್ಷದ ಮನೀಷ್‌ ಕೂಡ ಕಣ್ಣಿಗೆ ಗಾಯ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸರ್ಜರಿ ಮಾಡಬೇಕಿದೆ ಎಂದು ವೈದ್ಯರು ಹೇಳಿದರು.

ಈ ಮೂವರು ಮಕ್ಕಳು ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮಂಗಳವಾರದಿಂದ ಬುಧವಾರ ಸಂಜೆಯ ಹೊತ್ತಿಗೆ 8 ಮಕ್ಕಳು ಇಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಮರಳಿದ್ದಾರೆ. ನಾರಾಯಣ ನೇತ್ರಾಲಯದಲ್ಲಿ ಒಟ್ಟು ನಾಲ್ಕು ಮಕ್ಕಳು ಸಣ್ಣ–ಪುಟ್ಟ ಗಾಯಗಳಿಂದ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ನಾಲ್ಕು ಮಕ್ಕಳು ಚಿಕಿತ್ಸೆ ಪಡೆದಿದ್ದಾರೆ. ಒಟ್ಟು 18 ಮಕ್ಕಳು ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ.

‘ಈ ವರ್ಷ ಪಟಾಕಿಗೆ ಸಾಕಷ್ಟು ನಿರ್ಬಂಧ ಹೇರಲಾಗಿದೆ. ಆದರೂ ಈಗಾಗಲೇ 8 ಮಕ್ಕಳು ಚಿಕಿತ್ಸೆಗೆ ಬಂದಿದ್ದಾರೆ. ಮೂವರು ಗಂಭೀರ ಗಾಯಗಳಿಂದ ದಾಖಲಾಗಿದ್ದಾರೆ. ಹೋದ ವರ್ಷ ಈ ಹೊತ್ತಿಗೆ 20 ಪ್ರಕರಣಗಳು ಬಂದಿದ್ದವು. ನಮ್ಮ ನಿರೀಕ್ಷೆ ಪ್ರಕಾರ ಈ ವರ್ಷ ಪ್ರಕರಣಗಳ ಸಂಖ್ಯೆ ಶೂನ್ಯಕ್ಕೆ ಇಳಿಯಬೇಕಿತ್ತು. ನಮಗೆ ನಿರಾಸೆಯಾಗಿದೆ’ ಎಂದು ಮಿಂಟೊ ಆಸ್ಪತ್ರೆಯ ನಿರ್ದೇಶಕಿ ಡಾ.ಬಿ.ಎಲ್‌.ಸುಜಾತಾ ರಾಥೋಡ್‌ ಹೇಳಿದರು.

‘ಎಷ್ಟೇ ಪ್ರಚಾರ ಮಾಡಿದ್ದರೂ ಕಣ್ಣಿಗೆ ಹಾನಿಯಾದ ತಕ್ಷಣ ಮಕ್ಕಳನ್ನು ಕರೆದುಕೊಂಡು ಬರುತ್ತಿಲ್ಲ. ಬೆಳಗಿನವರೆಗೂ ಕಾಯುತ್ತಾರೆ. ಇಲ್ಲದಿದ್ದರೆ ಅವರೇ ಏನಾದರೂ ಚಿಕಿತ್ಸೆ ಮಾಡಿ ನಂತರ ಕರೆದುಕೊಂಡು ಬರುತ್ತಾರೆ’ ಎಂದು ಹೇಳಿದರು.

**

ಪಟಾಕಿ: ಬಾಲಕನಿಗೆ ಗಂಭೀರ ಗಾಯ

ಹೊಸಕೋಟೆ: ಪಟಾಕಿ ಸಿಡಿದ ಕಾರಣ ಸ್ಥಳೀಯ ನಿವಾಸಿ ಮುನಿರಾಜು ಅವರ ಪುತ್ರ ತನುಷ್ ಮುಖಕ್ಕೆ ಗಂಭೀರ ಗಾಯವಾಗಿದೆ.

ತಾಲ್ಲೂಕಿನ ನಂದಗುಡಿ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಐದನೇ ತರಗತಿ ಓದುತ್ತಿರುವ ತನುಷ್‌, ಮನೆ ಮುಂದೆ ಪಟಾಕಿ ಹಚ್ಚುತ್ತಿದ್ದಾಗ ಅದು ಸಿಡಿದಿದೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.