ADVERTISEMENT

ಬೆಂಗಳೂರು | ಪೆಟ್ರೋಲ್‌ ಟ್ಯಾಂಕ್ ಮೇಲೆ ಯುವತಿ: ಸವಾರ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 19 ಮೇ 2024, 16:15 IST
Last Updated 19 ಮೇ 2024, 16:15 IST
ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿಕೊಂಡು ಸವಾರಿ ಮಾಡಿದ್ದ ಆರೋಪಿ
ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿಕೊಂಡು ಸವಾರಿ ಮಾಡಿದ್ದ ಆರೋಪಿ   

ಬೆಂಗಳೂರು: ಬೈಕ್‌ನ ಪೆಟ್ರೋಲ್ ಟ್ಯಾಂಕ್‌ ಮೇಲೆ ಯುವತಿಯನ್ನು ಕೂರಿಸಿಕೊಂಡು ಅಪಾಯಕಾರಿ ರೀತಿಯಲ್ಲಿ ಚಾಲನೆ ಮಾಡಿದ್ದ ಆರೋಪದಡಿ ಸಿಲಂಬರಸನ್ (21) ಎಂಬುವವರನ್ನು ಹೆಬ್ಬಾಳ ಸಂಚಾರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಯಲಹಂಕದಿಂದ ಹೆಬ್ಬಾಳಕ್ಕೆ ಸಂಪರ್ಕ ಕಲ್ಪಿಸುವ ಕೊಡಿಗೇಹಳ್ಳಿ ಮೇಲ್ಸೇತುವೆಯಲ್ಲಿ ಯುವತಿ ಜೊತೆ ಆರೋಪಿ ಬೈಕ್‌ನಲ್ಲಿ ಸಂಚರಿಸಿದ್ದ. ಇದರ ವಿಡಿಯೊ ಚಿತ್ರೀಕರಿಸಿದ್ದ ಸಾರ್ವಜನಿಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಅದನ್ನು ಆಧರಿಸಿ ಆರೋಪಿಯನ್ನು ಪತ್ತೆ ಮಾಡಲಾಗಿದೆ. ಬೈಕ್ ಸಹ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಬೈಕ್‌ನ ಪೆಟ್ರೋಲ್ ಟ್ಯಾಂಕ್ ಮೇಲೆ ಯುವತಿಯನ್ನು ಕೂರಿಸಿಕೊಂಡಿದ್ದ ಆರೋಪಿ, ಅತಿ ವೇಗವಾಗಿ ಬೈಕ್ ಚಲಾಯಿಸಿದ್ದ. ಜತೆಗೆ, ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಇವರ ವರ್ತನೆಯಿಂದ ಸಾರ್ವಜನಿಕರ ಜೀವಕ್ಕೆ ಕುತ್ತು ಉಂಟಾಗುವ ಸಾಧ್ಯತೆ ಇತ್ತು’ ಎಂದು ತಿಳಿಸಿದರು.

ADVERTISEMENT

‘ವಿಡಿಯೊ ಗಮನಕ್ಕೆ ಬರುತ್ತಿದ್ದಂತೆ ಬೈಕ್‌ನ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯ ಚಾಲನಾ ಪರವಾನಗಿ ಜಪ್ತಿ ಮಾಡಲಾಗಿದ್ದು, ಅಮಾನತು ಮಾಡುವಂತೆ ಸಾರಿಗೆ ಇಲಾಖೆಗೆ ಪತ್ರ ಬರೆಯಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.