ADVERTISEMENT

ಸಮ ಸಮಾಜಕ್ಕಾಗಿ ವೇತನದ ಶೇ 5 ನೀಡಿ: ಸಚಿವ ಎಚ್.ಸಿ. ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2025, 23:51 IST
Last Updated 20 ಫೆಬ್ರುವರಿ 2025, 23:51 IST
ಎಚ್.ಸಿ. ಮಹದೇವಪ್ಪ
ಎಚ್.ಸಿ. ಮಹದೇವಪ್ಪ   

ಬೆಂಗಳೂರು: ರಾಜ್ಯದಲ್ಲಿ 2.5 ಲಕ್ಷ ಎಸ್.ಸಿ, ಎಸ್.ಟಿ ಸರ್ಕಾರಿ ನೌಕರರಿದ್ದಾರೆ. ವೇತನದ ಶೇ 5ರಷ್ಟು ನೀಡಿದರೆ ಸಮುದಾಯದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದು. ಸಮ ಸಮಾಜ ನಿರ್ಮಿಸಬಹುದು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಕೇಂದ್ರ ಸಂಘದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತ್ಯೇಕ ನಿಧಿ ಸ್ಥಾಪಿಸಿ, ಜನಪ್ರತಿನಿಧಿಗಳು, ಅಧಿಕಾರಿಗಳು ಒಳಗೊಂಡಂತೆ ಎಲ್ಲರೂ ಶೇ 5 ವಂತಿಗೆ ನೀಡಿದರೆ ಸಮಾಜದಲ್ಲಿ ವಿಸ್ಮಯ ಸೃಷ್ಟಿಸಬಹುದು. ನಿಷ್ಠುರತೆ, ದೃಢತೆ, ಬದ್ಧತೆ ಇದ್ದಾಗ ಮಾತ್ರ ಜನಸಾಮಾನ್ಯರಿಗೆ ನ್ಯಾಯ ಒದಗಿಸಲು ಸಾಧ್ಯವಾಗಲಿದೆ. ತುಳಿತಕ್ಕೆ ಒಳಗಾದವರ ಪರ ವಿದ್ಯಾವಂತರು ನಿಲ್ಲಬೇಕು ಎಂದು ಹೇಳಿದರು.

ADVERTISEMENT

ದಲಿತ ಮಂತ್ರಿಗಳೇ ಇಲ್ಲದೇ ಸರ್ಕಾರಗಳು ನಡೆದ ನಿದರ್ಶನಗಳಿವೆ. ಪ್ರಜಾಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದ್ದು, ಪ್ರಜಾತಂತ್ರ ಆಶಯಗಳಿಗೆ ಸೋಲಾಗುತ್ತಿದೆ. ಹೀಗಾಗಿ ಸಮುದಾಯದಲ್ಲಿ ತಿಳಿವಳಿಕೆ ಮೂಡಿಸುವ ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು.

‘ನಮ್ಮ ಸರ್ಕಾರ ಈ ಹಿಂದೆ ಜಾರಿಗೆ ತಂದ ಬಡ್ತಿಯಲ್ಲಿ ಮೀಸಲಾತಿ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಇದು ಮಹತ್ವದ ಬೆಳವಣಿಗೆಯಾಗಿದ್ದು, ಇದು ನಮ್ಮ ನೆಲದ ಕಾನೂನು’ ಎಂದು ಹೇಳಿದರು.

ಕೇಂದ್ರ ಸಂಘದ ರಾಜ್ಯಾಧ್ಯಕ್ಷ ಜಿ.ಪಿ. ದೇವರಾಜ್ ಮಾತನಾಡಿ, ‘ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಮೀಸಲಾತಿ ಜಾರಿ ಘಟಕಕ್ಕೆ ಯಾವುದೇ ಶಕ್ತಿಯಿಲ್ಲ. ಇದು ಹಲ್ಲು ಕಿತ್ತ ಹಾವಿನಂತಾಗಿದ್ದು, ಇದನ್ನು ಜಾರಿ ನಿರ್ದೇಶನಾಲಯ ಮಾದರಿಯಲ್ಲಿ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಿ, ಅಗತ್ಯ ಸಿಬ್ಬಂದಿ ನೇಮಿಸಬೇಕು. ಜೊತೆಗೆ ಬಡ್ತಿ, ಮೀಸಲಾತಿಯಿಂದ ವಂಚಿತ ಸಿಬ್ಬಂದಿಗೆ ನ್ಯಾಯ ಒದಗಿಸಲು ವಸತಿ ನಿಲಯಗಳಲ್ಲಿ ಪ್ರತ್ಯೇಕವಾದ ಕಲ್ಯಾಣಾಧಿಕಾರಿಗಳನ್ನು ನೇಮಿಸಬೇಕು’ ಎಂದು ಆಗ್ರಹಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿಎಸ್‌ಪಿ/ಟಿಎಸ್‌ಪಿ ನೋಡಲ್ ಏಜೆನ್ಸಿ ಸಲಹೆಗಾರ ಇ. ವೆಂಕಟಯ್ಯ, ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಕೆ. ರಾಜೇಶ್ ಕುಮಾರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.