ADVERTISEMENT

ಅತ್ತಿಬೆಲೆ ಚೆಕ್‌ಪೋಸ್ಟ್ ಜಮೀನು ಟ್ರಕ್‌ ಟರ್ಮಿನಲ್‌ಗೆ ನೀಡಿ: CMಗೆ ರೆಡ್ಡಿ ಪತ್ರ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2024, 16:04 IST
Last Updated 28 ಆಗಸ್ಟ್ 2024, 16:04 IST
<div class="paragraphs"><p>ಸಚಿವ ರಾಮಲಿಂಗಾರೆಡ್ಡಿ</p></div>

ಸಚಿವ ರಾಮಲಿಂಗಾರೆಡ್ಡಿ

   

ಬೆಂಗಳೂರು: ಹಳೇ ಮದ್ರಾಸ್‌ ರಸ್ತೆಯಲ್ಲಿ ಅತ್ತಿಬೆಲೆ ಚೆಕ್‌ಪೋಸ್ಟ್‌ ಬಳಿ ವಾಣಿಜ್ಯ ತೆರಿಗೆ ಇಲಾಖೆ ಸ್ವಾಧೀನದಲ್ಲಿರುವ 25 ಎಕರೆ ಜಮೀನನ್ನು ಡಿ. ದೇವರಾಜ ಅರಸು ಟ್ರಕ್‌ ಟರ್ಮಿನಲ್‌ಗೆ ಹಸ್ತಾಂತರಿಸುವಂತೆ ಕೋರಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ತಮಿಳುನಾಡು ಹಾಗೂ ಕರ್ನಾಟಕದ ನಡುವೆ ಸಂಚರಿಸುವ ವಾಣಿಜ್ಯ ಮತ್ತು ಸರಕು ಸಾಗಾಣಿಕೆ ವಾಹನಗಳ ಸರಕುಗಳನ್ನು ಪರಿಶೀಲನೆ ಮಾಡಿ, ವಾಣಿಜ್ಯ ತೆರಿಗೆ ವಸೂಲಿಗಾಗಿ ಅತ್ತಿಬೆಲೆಯಲ್ಲಿ ಚೆಕ್‌ಪೋಸ್ಟ್‌ ಸ್ಥಾಪಿಸಲಾಗಿತ್ತು. ಚೆಕ್‌ಪೋಸ್ಟ್‌ ಬಳಿಯೇ 25 ಎಕರೆ ಪ್ರದೇಶದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು ಕಚೇರಿ ತೆರೆದಿತ್ತು. ಅಲ್ಲೇ ಲಾರಿಗಳ ನಿಲುಗಡೆಯನ್ನೂ ಮಾಡಲಾಗುತ್ತಿತ್ತು. 

ADVERTISEMENT

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ನಂತರ ಈ ಚೆಕ್‌ಪೋಸ್ಟ್‌ ಮತ್ತು ಇಲ್ಲಿ ವಾಣಿಜ್ಯ ತೆರಿಗೆ ಕಚೇರಿಯ ಅಗತ್ಯ ಇಲ್ಲದಾಯಿತು. ಉಪಯೋಗವಿಲ್ಲದಂತಾದ ಈ ಪ್ರದೇಶವನ್ನು ಏಳು ವರ್ಷಗಳಿಂದ ಕೆಲವು ಖಾಸಗಿ ವ್ಯಕ್ತಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ.

ಅತ್ತಿಬೆಲೆ ಸುತ್ತಮುತ್ತ ಕರ್ನಾಟಕ ಗೃಹ ಮಂಡಳಿಯಿಂದ ಸೂರ್ಯನಗರ ವಸತಿ ಬಡಾವಣೆ, ಕೆಲವು ಖಾಸಗಿ ಬಡಾವಣೆಗಳು ನಿರ್ಮಾಣಗೊಳ್ಳುತ್ತಿವೆ. ಜಿಗಣಿ, ಬೊಮ್ಮಸಂದ್ರ, ಅತ್ತಿಬೆಲೆ ಕೈಗಾರಿಕಾ ಪ್ರದೇಶಗಳಿವೆ. ಇಲ್ಲಿಗೆ ಕಚ್ಚಾವಸ್ತುಗಳನ್ನು, ನಿರ್ಮಾಣ ಸಾಮಗ್ರಿಗಳನ್ನು ಸಾಗಿಸಲು ಟ್ರಕ್‌, ಲಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುತ್ತಿವೆ. ಇದರಿಂದ ಸರಕು ಸಾಗಾಣಿಕೆ ಮತ್ತು ಇತರೆ ಲಾರಿಗಳ ನಿಲುಗಡೆಗೆ ಜಾಗದ ಅವಶ್ಯಕತೆ ಉಂಟಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯ ಸ್ವಾಧೀನದಲ್ಲಿರುವ 25 ಎಕರೆ ಜಮೀನನ್ನು ₹ 1 ರ ದರದಲ್ಲಿ ಗುತ್ತಿಗೆ  ಆಧಾರದಲ್ಲಿ ಡಿ. ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಸುಪರ್ದಿಗೆ ವಹಿಸಬೇಕು. ಜೊತೆಗೆ ಚೆಕ್‌ಪೋಸ್ಟ್‌ ಜಾಗವನ್ನು ಮರಳು ಸಂಗ್ರಹ ಮಾಡಲು ನೀಡಬೇಕು ಎಂದು ಸಚಿವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಡಿ. ದೇವರಾಜ ಅರಸು ಟ್ರಕ್‌ ಟರ್ಮಿನಲ್‌ಗೆ ಈ ಜಮೀನು ನೀಡಿದರೆ ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಯೊಂದಿಗೆ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರಲಿದೆ. ಈ ಜಮೀನಿನಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಚಟುವಟಿಕೆಗಳಿಗೂ ತಡೆಬೀಳಬಹುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.