ADVERTISEMENT

ಎಲ್ಲ ಮತದಾರರಿಗೆ ಕೈಗವಸು, ಸಿದ್ಧತೆ ಪರಿಶೀಲಿಸಿದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 21:32 IST
Last Updated 16 ಅಕ್ಟೋಬರ್ 2020, 21:32 IST
ಸಿದ್ಧತೆಗಳ ಕುರಿತು ನಗರ ಪೊಲೀಸ್ ಕಮಿಷನರ್ ಕಮಲ‌್ ಪಂತ್ ಮತ್ತು ಹೆಚ್ಚುವರಿ ಪೊಲೀಸ್ ಕಮಿಷನರ್ ಸೌಮೇಂದು ಮುಖರ್ಜಿ ಜತೆ ಚರ್ಚಿಸುತ್ತಿರುವ ಎನ್‌. ಮಂಜುನಾಥ ಪ್ರಸಾದ್
ಸಿದ್ಧತೆಗಳ ಕುರಿತು ನಗರ ಪೊಲೀಸ್ ಕಮಿಷನರ್ ಕಮಲ‌್ ಪಂತ್ ಮತ್ತು ಹೆಚ್ಚುವರಿ ಪೊಲೀಸ್ ಕಮಿಷನರ್ ಸೌಮೇಂದು ಮುಖರ್ಜಿ ಜತೆ ಚರ್ಚಿಸುತ್ತಿರುವ ಎನ್‌. ಮಂಜುನಾಥ ಪ್ರಸಾದ್   

ಬೆಂಗಳೂರು: ‘ರಾಜರಾಜೇಶ್ವರಿನಗರ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 4,62,027ಕ್ಕೆ ಏರಿಕೆಯಾಗಿದೆ. ಮತದಾನಕ್ಕೆ ಬರುವ ಎಲ್ಲರಿಗೂ ಕೈಗವಸುಗಳನ್ನು ನೀಡಲಾಗುವುದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುನಾಥ ಪ್ರಸಾದ್ ತಿಳಿಸಿದರು.

ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ತೆರೆಯಲಾಗುತ್ತಿರುವ ಮತ ಎಣಿಕಾ ಕೇಂದ್ರಕ್ಕೆ ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರೊಂದಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ‘ಮತದಾರರ ಪಟ್ಟಿಗೆ ಹೊಸದಾಗಿ 1,616 ಮಂದಿ ಸೇರ್ಪಡೆಯಾಗಿದ್ದಾರೆ. ಸದ್ಯ ಪಟ್ಟಿ ಅಂತಿಮಗೊಂಡಿದೆ’ ಎಂದು ಹೇಳಿದರು.

‘ಕ್ಷೇತ್ರದಲ್ಲಿ 678 ಮತಗಟ್ಟೆಗಳನ್ನು ತೆರೆಯಲಾಗುತ್ತಿದ್ದು, ಮತದಾನಕ್ಕೆ ಬರುವವರನ್ನು ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ನಡೆಸಲಾಗುವುದು. ಹ್ಯಾಂಡ್ ಸ್ಯಾನಿಟೈಸರ್ ನೀಡಲಾಗುವುದು. ಒಂದು ಕೈಗೆ ಮಾತ್ರ ಕೈಗವಸು ನೀಡಲಾಗುವುದು. ಅದನ್ನು ಹಾಕಿಕೊಂಡೇ ಸಹಿ ಮಾಡಬೇಕು ಮತ್ತು ಮತದಾನ ಮಾಡಬೇಕು’ ಎಂದರು.

ADVERTISEMENT

ನವೆಂಬರ್ 10ರಂದು ಮತ ಎಣಿಕೆ ನಡೆಯಲಿದ್ದು, ಮಧ್ಯಾಹ್ನ 12.30ರ ವೇಳೆಗೆ ಫಲಿತಾಂಶ ಲಭ್ಯವಾಗಲಿದೆ. ಈ ಹಿಂದೆ 14 ಟೇಬಲ್‌ಗಳನ್ನು ಎಣಿಕೆಗೆ ಅಳವಡಿಸಲಾಗುತ್ತಿತ್ತು. ಕೋವಿಡ್ ಇರುವ ಕಾರಣ ಈ ಸಂಖ್ಯೆಯನ್ನು 28ಕ್ಕೆ ಹೆಚ್ಚಿಸಲಾಗಿದೆ. ಪ್ರತಿ ಕೊಠಡಿಯಲ್ಲಿ 7 ಟೇಬಲ್‌ಗಳು ಇರಲಿವೆ. 24 ಸುತ್ತಿನಲ್ಲಿ ಎಣಿಕೆ ನಡೆಯಲಿದೆ ಎಂದು ವಿವರಿಸಿದರು.

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶುಕ್ರವಾರ ಪೂರ್ಣಗೊಂಡಿದ್ದು, ಒಟ್ಟು 27 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಎನ್. ಮಂಜುನಾಥ ಪ್ರಸಾದ್ ತಿಳಿಸಿದರು.

‘ಮತದಾನದ ದಿನ ಮತ್ತು ಎಣಿಕೆ ದಿನ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಗತ್ಯ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುವುದು’ ಎಂದು ಕಮಲ್ ಪಂತ್ ಹೇಳಿದರು.

ಬಿಬಿಎಂಪಿ ವಿಶೇಷ ಆಯುಕ್ತ ಜೆ.ಮಂಜುನಾಥ, ಜಂಟಿ ಆಯುಕ್ತ ನಾಗರಾಜ್, ಹೆಚ್ಚುವರಿ ಪೊಲೀಸ್ ಕಮಿಷನರ್ ಸೌಮೇಂದು ಮುಖರ್ಜಿ ಇದ್ದರು.

ಚುನಾವಣಾ ಸಮೀಕ್ಷೆಗಳ ಮೇಲೆ ನಿರ್ಬಂಧ

ನವಂಬರ್‌ 3 ರಂದು ನಡೆಯುವ ಶಿರಾ ಮತ್ತು ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಅಥವಾ ಮತಗಟ್ಟೆ ಸಮೀಕ್ಷೆಗಳನ್ನು ನ.3 ರ ಬೆಳಿಗ್ಗೆ 6 ರಿಂದ ನ.7 ರ ಸಂಜೆ 6ರವರೆಗೆ ಮಾಧ್ಯಮಗಳಲ್ಲಿ ಪ್ರಕಟಿಸುವಂತಿಲ್ಲ ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ವಿಧಾನಪರಿಷತ್ತಿನ ಚುನಾವಣೆಗೂ ಇದು ಅನ್ವಯವಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಬಿಹಾರ ರಾಜ್ಯದ ವಿಧಾನಸಭಾ ಚುನಾವಣೆ ಮತ್ತು ಇತರ ರಾಜ್ಯಗಳ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುವ ಕಾರಣ ಈ ಆದೇಶ ಹೊರಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.