ADVERTISEMENT

20 ಸಾವಿರ ನವೋದ್ಯಮ ಸ್ಥಾಪನೆ ಗುರಿ: ಡಿಸಿಎಂ ಡಾ.ಸಿ.ಎನ್‌. ಅಶ್ವತ್ಥ್ ನಾರಾಯಣ

ಲಘು ಉದ್ಯೋಗ ಭಾರತಿಯಿಂದ 'ಟೆಕ್ ಭಾರತ್' ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 17 ಜನವರಿ 2020, 11:30 IST
Last Updated 17 ಜನವರಿ 2020, 11:30 IST
ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ್ ನಾರಾಯಣ
ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ್ ನಾರಾಯಣ   

ಬೆಂಗಳೂರು: ರಾಜ್ಯದಲ್ಲಿ 2022ರ ವೇಳೆಗೆ 20 ಸಾವಿರ ನವೋದ್ಯಮ ಸ್ಥಾಪಿಸುವ ಗುರಿ ಇಟ್ಟುಕೊಳ್ಳಲಾಗಿದೆ' ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥ್ ನಾರಾಯಣ ಹೇಳಿದರು‌.

ನಗರದಲ್ಲಿ ಶುಕ್ರವಾರ ಲಘು ಉದ್ಯೋಗ ಭಾರತಿ ಆಯೋಜಿಸಿರುವ 'ಟೆಕ್ ಭಾರತ್' ಸಮ್ಮೇಳನದಲ್ಲಿ ಮಾತನಾಡಿದ ಅವರು, 'ಈ ವರ್ಷ ರಾಜ್ಯದಲ್ಲಿ 9000 ನವೋದ್ಯಮಗಳು ಸ್ಥಾಪನೆಯಾಗಲಿವೆ. ಇದಕ್ಕೆ ಬೇಕಾದ ಎಲ್ಲ ನೆರವನ್ನು ರಾಜ್ಯಸರ್ಕಾರ ನೀಡುತ್ತಿದೆ'.'ದೇಶದಲ್ಲೇ ಮೊದಲ ಬಾರಿಗೆ ನವೋದ್ಯಮ ನೀತಿ ರೂಪಿಸಿದ್ದು ಕರ್ನಾಟಕ ಸರ್ಕಾರ. ರಾಜ್ಯದಲ್ಲಿ ಒಟ್ಟು 57 ಇನ್ ಕ್ಯುಬೇಷನ್ ಕೇಂದ್ರಗಳಿಗೆ ಒಟ್ಟು ₹70 ಕೋಟಿ ನೆರವು ಒದಗಿಸಲಾಗಿದೆ' ಎಂದರು.

'ನವೋದ್ಯಮ ಸ್ಥಾಪಿಸುವ ವೇಳೆ ಎದುರಾಗುವ ಕಾನೂನು ಅಡೆ-ತಡೆಗಳನ್ನು ಬಗೆಹರಿಸಲು ಕರ್ನಾಟಕ ಅನ್ವೇಷಣಾ ಪ್ರಾಧಿಕಾರ ರಚಿಸಲಾಗಿದೆ. ಅಲ್ಲದೆ, ಎಲ್ಲ ರೀತಿಯ ವಿನಾಯ್ತಿಗಳನ್ನು ನವೋದ್ಯಮ ಸ್ಥಾಪನೆಗೆ ನೀಡಲಾಗುತ್ತಿದೆ. ಮುಖ್ಯವಾಗಿ ಆಳ ತಂತ್ರಜ್ಞಾನ ಆಧಾರಿತ ನವೋದ್ಯಮಗಳಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ' ಎಂದು ಹೇಳಿದರು.

ADVERTISEMENT

ಸಂಸದ ತೇಜಸ್ವಿ ಸೂರ್ಯ, 'ತಂತ್ರಜ್ಞಾನ ಪ್ರಗತಿಗೆ ಪೂರಕವಾದ ಹಲವು ನೀತಿಗಳನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ. ವಿದೇಶಿ ಕಂಪನಿಗಳು ಹೆಚ್ಚು ಬಂಡವಾಳ ಹೂಡುತ್ತಿವೆ. ಬಂಡವಾಳ ಆಕರ್ಷಿಸುವ ನಿಟ್ಟಿನಲ್ಲಿ ದೇಶ ಮುಂಚೂಣಿಯಲ್ಲಿದೆ' ಎಂದರು.

ದೇಶದ ಸರ್ಕಾರಿ ಇ ಮಾರ್ಕೆಟ್ (ಜೆಮ್) ಪೋರ್ಟಲ್ ನ ಸಿಇಒ, ತಳೀನ್ ಕುಮಾರ್, 'ದೇಶದಲ್ಲಿಯೇ ಈಗ ನವೋದ್ಯಮ ಸ್ಥಾಪನೆಗೆ ಅತ್ಯಂತ ಸೂಕ್ತವಾದ ಸ್ಥಳ ಬೆಂಗಳೂರು‌. ತಾಂತ್ರಿಕವಾಗಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರ ಇದು. ದೇಶದ 32 ಪ್ರಸಿದ್ಧ ಕಂಪನಿಗಳ ಪೈಕಿ 14 ಕಂಪನಿಗಳು ಬೆಂಗಳೂರು ಮೂಲದವು ' ಎಂದು ತಿಳಿಸಿದರು.

ರಾಜ್ಯದಲ್ಲಿ ನವೋದ್ಯಮ ಸ್ನೇಹಿ ವಾತಾವರಣ ಇದೆ. ಉದ್ಯೋಗಾವಕಾಶ ಸೃಷ್ಟಿ ಮತ್ತು ಆರ್ಥಿಕ ಪ್ರಗತಿಯಲ್ಲಿ ಇವುಗಳ ಕೊಡುಗೆ ದೊಡ್ಡದಿದೆ.ದೇಶದಲ್ಲಿ ಪ್ರತಿ ತಿಂಗಳು ಒಂದು ಸಾವಿರ ನವೋದ್ಯಮಗಳು ಸ್ಥಾಪನೆಯಾಗುತ್ತಿವೆ. ಸರ್ಕಾರದ ನೇರ ಭಾಗವಹಿಸುವಿಕೆ ಈ ಪ್ರಕ್ರಿಯೆಯಲ್ಲಿದೆಎಂದರು.

ಸಮಾವೇಶದಲ್ಲಿ 600 ಕ್ಕೂ ಹೆಚ್ಚು ನವೋದ್ಯಮಗಳ ಮಳಿಗೆಯನ್ನು ಹಾಕಲಾಗಿತ್ತು‌. ಉತ್ತಮ ತಂತ್ರಜ್ಞಾನ ಮತ್ತು ಯೋಜನೆ ಹೊಂದಿರುವ ಇಬ್ಬರಿಗೆ ಅಥವಾ ನವೋದ್ಯಮಕ್ಕೆ ತಲಾ ₹1 ಲಕ್ಷ ಬಹುಮಾನ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.