ADVERTISEMENT

ಭಕ್ತರ ಚಿನ್ನಾಭರಣ ಕದಿಯುತ್ತಿದ್ದ ಮಹಿಳೆ ಬಂಧನ: ₹ 20 ಲಕ್ಷ ಮೌಲ್ಯದ ಒಡವೆ ವಶ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 22:51 IST
Last Updated 31 ಆಗಸ್ಟ್ 2021, 22:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇವರ ದರ್ಶನಕ್ಕೆಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿ ಅಲ್ಲಿನ ಭಕ್ತರ ಚಿನ್ನಾಭರಣಗಳನ್ನು ಕದ್ದು ನಗರಕ್ಕೆ ಬಂದು ನೆಲೆಸಿದ್ದ ಮಹಿಳೆಯನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಮತಾ ಬಂಧಿತ ಮಹಿಳೆ. ಆಕೆಯಿಂದ ₹20.2 ಲಕ್ಷ ಮೌಲ್ಯದ ಒಟ್ಟು 439.32 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

‘ಯಶವಂತಪುರ 1ನೇ ಮುಖ್ಯರಸ್ತೆಯಲ್ಲಿರುವ ಎಸ್‌.ಕೆ.ಜ್ಯುವೆಲ್ಲರಿ ಸಮೀಪ ಆಗಸ್ಟ್ 25ರ ರಾತ್ರಿ 10.20ರ ಸುಮಾರಿಗೆ ಮಹಿಳೆ ಹಾಗೂ ಪುರುಷನೊಬ್ಬ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಗಸ್ತಿನಲ್ಲಿದ್ದ ಸಿಬ್ಬಂದಿ ಸ್ಥಳಕ್ಕೆ ಹೋದ ಕೂಡಲೇ ಅವರಿಬ್ಬರು ಪರಾರಿಯಾಗಲು ಪ್ರಯತ್ನಿಸಿದರು. ಇದರಿಂದ ಅನುಮಾನಗೊಂಡ ಸಿಬ್ಬಂದಿ ಮಹಿಳೆಯನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಆಕೆಯ ಜೊತೆಗಿದ್ದ ವ್ಯಕ್ತಿ ತಪ್ಪಿಸಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ತಾನು ಆಂಧ್ರಪ್ರದೇಶದವಳು ಎಂಬುದನ್ನು ಮಹಿಳೆ ಒಪ್ಪಿಕೊಂಡಿದ್ದಾಳೆ. ಕದ್ದ ಆಭರಣಗಳನ್ನು ಬೆಂಗಳೂರಿನ ವಿವಿಧ ಅಂಗಡಿಗಳಲ್ಲಿ ಗಿರವಿ ಇಟ್ಟಿರುವ ಮಾಹಿತಿಯನ್ನು ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾಳೆ. ಗಿರವಿ ಇಟ್ಟಿರುವ ಕುರಿತ 10 ರಸೀದಿಗಳು ಆಕೆಯ ಬಳಿ ಸಿಕ್ಕಿವೆ. 4 ಗ್ರಾಂ ತೂಕದ ಎರಡು ಚಿನ್ನದ ಉಂಗುರಗಳು ಹಾಗೂ ಸರದಲ್ಲಿ ಪೋಣಿಸುವ ಚಿನ್ನದ ಚಿಕ್ಕ ಗುಂಡುಗಳನ್ನೂ ವಶಕ್ಕೆ ಪಡೆಯಲಾಗಿದೆ’ ಎಂದಿದ್ದಾರೆ.

‘ಎರಡು ವರ್ಷಗಳ ಹಿಂದೆ ಗಂಡನನ್ನು ಕಳೆದುಕೊಂಡಿದ್ದ ಮಹಿಳೆ, ಪರಿಚಿತ ವ್ಯಕ್ತಿಯೊಂದಿಗೆ ಇತ್ತೀಚೆಗೆ ವಿವಾಹವಾಗಿದ್ದಳು. ಆಗಸ್ಟ್ 19ರಂದು ಇಬ್ಬರೂ ಧರ್ಮಸ್ಥಳಕ್ಕೆ ಹೋಗಿ ದೇವರ ದರ್ಶನ ಪಡೆದಿದ್ದರು. ಮರುದಿನ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗಿದ್ದರು. ಉಪಹಾರ ಸೇವಿಸಲು ಹೋಟೆಲ್‌ವೊಂದಕ್ಕೆ ತೆರಳಿದ್ದ ಈ ದಂಪತಿ, ಪಕ್ಕದ ಟೇಬಲ್‌ ಬಳಿ ಇಟ್ಟಿದ್ದ ನೀಲಿ ಬಣ್ಣದ ಬ್ಯಾಗ್‌ ಕದ್ದಿದ್ದರು. ಅದರಲ್ಲಿದ್ದ ಗಂಟಿನಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳಿದ್ದವು. ಅಲ್ಲಿಂದ ಬೆಂಗಳೂರಿಗೆ ಬಂದಿದ್ದ ಇಬ್ಬರೂ ಲಗ್ಗೆರೆಯ ಮಾರಮ್ಮ ದೇವಸ್ಥಾನದ ಸಮೀಪ ಕೊಠಡಿಯೊಂದನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದರು’ ಎಂದು ಹೇಳಿದ್ದಾರೆ.

‘ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಮಹಾದೇವ್‌ ಎಂಬಾತನ ಪತ್ತೆ ಕಾರ್ಯ ಪ್ರಗತಿಯಲ್ಲಿದೆ. ಕುಕ್ಕೆ ಸುಬ್ರಹ್ಮಣ್ಯ ಪೊಲೀಸರಿಗೂ ಮಾಹಿತಿ ರವಾನಿಸಲಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.