
ಚಿನ್ನ
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಗ್ರಾಹಕನ ಸೋಗಿನಲ್ಲಿ ಚಿನ್ನಾಭರಣ ಮಳಿಗೆಗೆ ಬಂದ ಕಿಡಿಗೇಡಿಯೊಬ್ಬ ಮಾಲೀಕನ ಗಮನ ಬೇರೆಡೆ ಸೆಳೆದು ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ನಾಗಸಂದ್ರ ಬಳಿಯ ಮಂಜುನಾಥ್ ನಗರದಲ್ಲಿ ನಡೆದಿದೆ.
ಮಂಜುನಾಥ್ ನಗರದ ಪೂರನ್ ಚಿನ್ನಾಭರಣ ಮಳಿಗೆಯಲ್ಲಿ ಕಳವು ನಡೆದಿದ್ದು, ಮಾಲೀಕ ವಿನೋದ್ ದೂರು ಕೊಟ್ಟಿದ್ದಾರೆ. ಆರೋಪಿಯು ಸುಮಾರು 18 ಗ್ರಾಂ ತೂಕದ ಚಿನ್ನದ ಉಂಗುರ ಕದ್ದು ಪರಾರಿಯಾಗಿದ್ದಾನೆ ಎಂದು ಬಾಗಲಗುಂಟೆ ಠಾಣೆ ಪೊಲೀಸರು ತಿಳಿಸಿದ್ದಾರೆ.
ಗ್ರಾಹಕನ ಸೋಗಿನಲ್ಲಿ ಪೂರನ್ ಮಳಿಗೆಗೆ ಬಂದಿದ್ದ ಕಿಡಿಗೇಡಿ, ಉಂಗುರ ತೋರಿಸುವಂತೆ ಕೇಳಿದ್ದಾನೆ. ವಿನೋದ್, ಕೆಲ ಉಂಗುರಗಳನ್ನು ತೋರಿಸಿದ ಬಳಿಕ ಒಂದು ಉಂಗುರವನ್ನು ಆಯ್ಕೆ ಮಾಡಿ ತೂಕ ಹಾಕಿ ಕೊಡುವಂತೆ ಕೇಳಿದ್ದಾನೆ. ವಿನೋದ್, ತೂಕ ಹಾಕಲು ಒಳಗೆ ಹೋದಾಗ ಕಿಡಿಗೇಡಿ, ಒಡವೆ ಬಾಕ್ಸ್‌ನಲ್ಲಿನ ಮತ್ತೊಂದು ಉಂಗುರವನ್ನು ಕದ್ದು, ಅದರ ಬದಲು ನಕಲಿ ಚಿನ್ನದ ಉಂಗುರ ಇಟ್ಟಿದ್ದಾನೆ. ಮಾಲೀಕ ಉಂಗುರ ತೂಕ ಹಾಕಿಕೊಂಡು ಬಂದ ನಂತರ ಕಿಡಿಗೇಡಿ ಉಂಗುರ ಬೇಡವೆಂದು ಹೇಳಿ ಹೊರಟು ಹೋಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ದಿನದ ವ್ಯಾಪಾರ ಮುಗಿದ ನಂತರ ಒಡವೆ ಬಾಕ್ಸ್‌ನಲ್ಲಿನ ಉಂಗುರಗಳ ತಪಾಸಣೆ ಮಾಡಿದಾಗ ನಕಲಿ ಚಿನ್ನದ ಉಂಗುರ ಪತ್ತೆಯಾಗಿದೆ. ಅನುಮಾನಗೊಂಡ ಅವರು ಮಳಿಗೆಯ ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದಾಗ ಕಳವು ಮಾಡಿರುವುದು ಗೊತ್ತಾಗಿದೆ. ಆರೋಪಿಯ ಮುಖಚರ್ಯೆ ಮಳಿಗೆಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ಜಾಡು ಹಿಡಿದು ಆತನ ಪತ್ತೆಗೆ ಕ್ರಮ ಕೈಗೊಂಡಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.