ADVERTISEMENT

1 ಕೆ.ಜಿ. 280 ಗ್ರಾಂ ಚಿನ್ನಾಭರಣ ಜಪ್ತಿ

ಕಳ್ಳತನ; ಆರೋಪಿಗಳ ಬಂಧನ, ಪಿಸ್ತೂಲ್ ಪತ್ತೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2021, 14:05 IST
Last Updated 25 ಫೆಬ್ರುವರಿ 2021, 14:05 IST

ಬೆಂಗಳೂರು: ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿ ಕಳ್ಳತನ ಎಸಗುತ್ತಿದ್ದ ಆರೋಪದಡಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ದೆಹಲಿಯ ಖುರ್ಷಿದ್ ಖಾನ್ (41) ಹಾಗೂ ವೀರೇಂದ್ರಕುಮಾರ್ (46) ಬಂಧಿತರು. ಅವರಿಂದ ₹ 61.50 ಲಕ್ಷ ಮೌಲ್ಯದ 1 ಕೆ.ಜಿ 280 ಗ್ರಾಂ ಚಿನ್ನಾಭರಣ ಜಪ‍್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

‘ಉತ್ತರ ಪ್ರದೇಶದ ಖುರ್ಷಿದ್ ಖಾನ್, ದೆಹಲಿಯಲ್ಲಿ ನೆಲೆಸಿದ್ದ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹೋಗಿ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದ. ಕಳ್ಳತನ ಪ್ರಕರಣದಲ್ಲಿ ಆತನನ್ನು ಬಂಧಿಸಿದ್ದ ದೆಹಲಿ ಹಾಗೂ ಹರಿಯಾಣ ಪೊಲೀಸರು, ಜೈಲಿಗೂ ಕಳುಹಿಸಿದ್ದರು. ಜಾಮೀನು ಮೇಲೆ ಹೊರಬಂದಿದ್ದ ಆತ, ಪುನಃ ಕೃತ್ಯ ಎಸಗಲಾರಂಭಿಸಿದ್ದ’ ಎಂದೂ ತಿಳಿಸಿದರು.

ADVERTISEMENT

‘ಬೆಂಗಳೂರಿನ ಜೀವನ್‌ಬಿಮಾನಗರ, ಕೆಂಗೇರಿ, ಜ್ಞಾನಭಾರತಿ, ಕೆ.ಜಿ.ನಗರ, ಹನುಮಂತನಗರ, ವಿಜಯನಗರ, ಮೈಕೊ ಲೇಔಟ್, ಸುಬ್ರಮಣ್ಯ ನಗರ, ಬ್ಯಾಡರಹಳ್ಳಿ ಹಾಗೂ ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯ ಕೆಲ ಮನೆಗಳಲ್ಲೂ ಆರೋಪಿ ಖುರ್ಷಿದ್ ಖಾನ್ ಕಳ್ಳತನ ಮಾಡಿದ್ದ.’

’ಕಳ್ಳತನ ಮಾಡಿದ್ದ ಚಿನ್ನಾಭರಣಗಳನ್ನು ಖುರ್ಷಿದ್‌ಖಾನ್, ಆರೋಪಿ ವೀರೇಂದ್ರಕುಮಾರ್‌ಗೆ ಮಾರುತ್ತಿದ್ದ. ಅದರಿಂದ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ. ಕದ್ದ ಚಿನ್ನಾಭರಣ ಖರೀದಿಸುತ್ತಿದ್ದ ಆರೋಪದಡಿ ವೀರೇಂದ್ರಕುಮಾರ್‌ನನ್ನು ಬಂಧಿಸಲಾಗಿದೆ’ ಎಂದೂ ಪೊಲೀಸರು ಹೇಳಿದರು.

ಆರೋಪಿಗಳ ಬಳಿ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳು ಪತ್ತೆಯಾಗಿದ್ದು, ಅವುಗಳನ್ನೂ ಜಪ್ತಿ ಮಾಡಲಾಗಿದೆ. ಕಳ್ಳತನ ವೇಳೆ ಯಾರಾದರೂ ಅಡ್ಡಬಂದರೆ, ಪಿಸ್ತೂಲ್ ತೋರಿಸಿ ಬೆದರಿಸುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.