ADVERTISEMENT

ಪ್ಯಾಂಟ್‌ನೊಳಗೆ ಚಿನ್ನದ ಪೌಡರ್‌ ಲೇಪಿಸಿ ಸಾಗಣೆ: ಬಂಧನ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2023, 16:02 IST
Last Updated 2 ಅಕ್ಟೋಬರ್ 2023, 16:02 IST
ಪ್ಯಾಂಟ್‌ನೊಳಗೆ ಅಂಟಿನ ಸಹಾಯದಿಂದ ಲೇಪಿಸಿದ್ದ ಚಿನ್ನದ ಪೌಡರ್
ಪ್ಯಾಂಟ್‌ನೊಳಗೆ ಅಂಟಿನ ಸಹಾಯದಿಂದ ಲೇಪಿಸಿದ್ದ ಚಿನ್ನದ ಪೌಡರ್   

ಬೆಂಗಳೂರು: ಪ್ಯಾಂಟ್‌ನೊಳಗೆ ಚಿನ್ನದ ಪೌಡರ್ ಲೇಪಿಸಿ ಅಕ್ರಮವಾಗಿ ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

‘ಕೊಲಂಬೊದಿಂದ ಶ್ರೀಲಂಕಾ ಮಾರ್ಗವಾಗಿ ಅ.1ರಂದು ಬೆಂಗಳೂರಿನ ನಿಲ್ದಾಣಕ್ಕೆ ಬಂದಿಳಿದಿದ್ದ ಇಬ್ಬರು ಪ್ರಯಾಣಿಕರ ಬಳಿ 229.84 ಗ್ರಾಂ ತೂಕದ ಚಿನ್ನದ ಪೌಡರ್ ಪತ್ತೆಯಾಗಿದೆ. ಅಕ್ರಮ ಸಾಗಣೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಇಬ್ಬರೂ ಪ್ರಯಾಣಿಕರನ್ನು ಸೆರೆ ಹಿಡಿಯಲಾಗಿದೆ’ ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ.

‘ಯುಎಲ್ 171 ವಿಮಾನದಲ್ಲಿ ಬಂದಿದ್ದ ಆರೋಪಿಗಳು, ಅನುಮಾನಾಸ್ಪದ ರೀತಿಯಲ್ಲಿ ನಿಲ್ದಾಣದಿಂದ ಹೊರಗೆ ಬರುತ್ತಿದ್ದರು. ಅವರನ್ನು ವಶಕ್ಕೆ ಪಡೆದಿದ್ದ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದ್ದರು. ಆರಂಭದಲ್ಲಿ ಅವರ ಬಳಿ ಯಾವುದೇ ಚಿನ್ನ ಸಿಕ್ಕಿರಲಿಲ್ಲ. ಇಬ್ಬರನ್ನೂ ವಿಶೇಷ ಕೊಠಡಿಗೆ ಕರೆದೊಯ್ದು ತಪಾಸಣೆ ನಡೆಸಿದಾಗ, ಚಿನ್ನದ ಪೌಡರ್ ಲಭ್ಯವಾಯಿತು’ ಎಂದು ಹೇಳಿವೆ.

ADVERTISEMENT

‘ಪ್ರಯಾಣಿಕನೊಬ್ಬ ಧರಿಸಿದ್ದ ಪ್ಯಾಂಟ್ ಬಿಚ್ಚಿ ಎರಡು ಭಾಗವಾಗಿ ಕತ್ತರಿಸಲಾಯಿತು. ಪ್ಯಾಂಟ್‌ನೊಳಗಿನ ಭಾಗದಲ್ಲಿ ಅಂಟಿನ ಸಹಾಯದಿಂದ ಚಿನ್ನದ ಪೌಡರ್‌ ಲೇಪಿಸಿದ್ದು ಕಂಡುಬಂತು. ಪೌಡರ್ ಬಿಡಿಸಿ ತೂಕ ಮಾಡಿದಾಗ, 74.54 ಗ್ರಾಂ ಚಿನ್ನ ಸಿಕ್ಕಿತು’ ಎಂದು ಕಸ್ಟಮ್ಸ್ ಮೂಲಗಳು ತಿಳಿಸಿವೆ.

‘ಇನ್ನೊಬ್ಬ ಪ್ರಯಾಣಿಕ, ಪೇಸ್ಟ್ ರೂಪದಲ್ಲಿದ್ದ ಚಿನ್ನದ ಸಣ್ಣ ಉಂಡೆಗಳನ್ನು ಗುದದ್ವಾರದಲ್ಲಿ ಇರಿಸಿಕೊಂಡಿದ್ದ. ವೈದ್ಯರ ಸಹಾಯದಿಂದ 155.30 ಗ್ರಾಂ ತೂಕದ ಚಿನ್ನದ ಉಂಡೆಗಳನ್ನು ಹೊರಗೆ ತೆಗೆಸಲಾಗಿದೆ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.