ADVERTISEMENT

ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ ಸೇರಿ ಇತರರಿಗೆ ₹277 ಕೋಟಿ ದಂಡ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 12:50 IST
Last Updated 2 ಸೆಪ್ಟೆಂಬರ್ 2025, 12:50 IST
ರನ್ಯಾ ರಾವ್‌
ರನ್ಯಾ ರಾವ್‌   

ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ₹277 ಕೋಟಿ ದಂಡ ಪಾವತಿಸಿ ಎಂದು ರೆವೆನ್ಯು ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) ನಟಿ ರನ್ಯಾ ರಾವ್, ಉದ್ಯಮಿ ತರುಣ್ ಕೊಂಡರಾಜು ಮತ್ತು ಇಬ್ಬರು ಆಭರಣ ವ್ಯಾಪಾರಿಗಳಿಗೆ ನೋಟಿಸ್‌ ನೀಡಿದೆ.

ಈ ನಾಲ್ವರು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 14.2 ಕೆ.ಜಿ.ಯಷ್ಟು ಚಿನ್ನ ಕಳ್ಳಸಾಗಣೆ ಮಾಡಿ, ಮಾರ್ಚ್‌ 3 ರಂದು ಡಿಆರ್‌ಐ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದರು. ಇವರಲ್ಲಿ ನಟಿ ರನ್ಯಾ ರಾವ್‌ಗೆ ಗರಿಷ್ಠ, ₹102 ಕೋಟಿ ದಂಡ ವಿಧಿಸಲಾಗಿದೆ.

ಚಿನ್ನಕಳ್ಳಸಾಗಣೆಯಲ್ಲಿ ಭಾಗಿಯಾದ ಆರೋಪದಲ್ಲಿ ಉದ್ಯಮಿ ತರುಣ್‌ ಕೊಂಡರಾಜು, ಕಳ್ಳಸಾಗಣೆಯ ಚಿನ್ನ ಮಾರಾಟ ಮಾಡಿದ ಮತ್ತು ಹವಾಲಾ ಮೂಲಕ ಹಣ ಕಳುಹಿಸಿದ ಆರೋಪದಲ್ಲಿ ಆಭರಣ ವ್ಯಾಪಾರಿ ಸಾಹಿಲ್‌ ಸಖಾರಿಯಾ ಜೈನ್‌ ಮತ್ತು ಭರತ್‌ ಕುಮಾರ್‌ ಜೈನ್‌ ಅವರನ್ನು ಡಿಆರ್‌ಐ ಬಂಧಿಸಿತ್ತು. ಇವರೆಲ್ಲ ನಗರದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದಾರೆ.

ADVERTISEMENT

ಡಿಆರ್‌ಐ ಮುಂಬೈ ವಿಭಾಗದ ಅಧಿಕಾರಿಗಳು ಮಂಗಳವಾರ ಕೇಂದ್ರ ಕಾರಾಗೃಹಕ್ಕೆ ತೆರಳಿ, ನಾಲ್ವರು ಅಪರಾಧಿಗಳಿಗೂ ನೋಟಿಸ್‌ ನೀಡಿದ್ದಾರೆ. ಜತೆಗೆ ಅವರ ವಿರುದ್ಧದ ಆರೋಪಗಳು ಮತ್ತು ಅವುಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ನೋಟಿಸ್‌ನೊಂದಿಗೆ ನೀಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

‘2024ರ ನವೆಂಬರ್‌ನಿಂದ 2025ರ ಫೆಬ್ರುವರಿ ನಡುವೆ ರನ್ಯಾ ನಾಲ್ಕು ಬಾರಿ ಚಿನ್ನ ಕಳ್ಳಸಾಗಣೆ ಮಾಡಿದ್ದು, ಒಟ್ಟು 49.6 ಕೆ.ಜಿ.ಯಷ್ಟು ಚಿನ್ನವನ್ನು ದುಬೈನಿಂದ ಬೆಂಗಳೂರಿಗೆ ತಂದಿದ್ದರು. ಅಷ್ಟೂ ಚಿನ್ನವನ್ನು ಸಾಹಿಲ್‌ ₹40.07 ಕೋಟಿಗೆ ಮಾರಾಟ ಮಾಡಿ, ಅದರಲ್ಲಿ ₹38.35 ಕೋಟಿಯನ್ನು ಹವಾಲಾ ಮೂಲಕ ದುಬೈಗೆ ಕಳುಹಿಸಿದ್ದ. ಚಿನ್ನದ ಮಾರುಕಟ್ಟೆ ಮೌಲ್ಯ, ಆಮದು ತೆರಿಗೆಯನ್ನು ಒಳಗೊಂಡು ದಂಡ ನಿರ್ಧರಿಸಲಾಗಿದೆ’ ಎಂದು ಡಿಆರ್‌ಐ ಮೂಲಗಳು ಮಾಹಿತಿ ನೀಡಿವೆ.

‘ಕಳ್ಳಸಾಗಣೆಯ ಚಿನ್ನವನ್ನು ವಸೂಲಿ ಮಾಡಬೇಕಿದ್ದು, ಅದು ಲಭ್ಯವಿಲ್ಲದೇ ಇದ್ದರೆ ಆರೋಪಿಗಳಿಂದ ಅದರ ಮೊತ್ತವನ್ನು ವಸೂಲಿ ಮಾಡಬಹುದಾಗಿದೆ. ಇಲ್ಲಿ ಪೂರ್ಣ ಪ್ರಮಾಣದ ಚಿನ್ನ ಲಭ್ಯವಿರದ ಕಾರಣಕ್ಕೆ, ದಂಡ ಪಾವತಿಸುವಂತೆ ನೋಟಿಸ್‌ ನೀಡಲಾಗಿದೆ. ಆರೋಪಿಗಳು ದಂಡ ಪಾವತಿಸಿದರೂ ಅವರ ವಿರುದ್ಧದ ಅಪರಾಧ ಪ್ರಕರಣಗಳು ಮುಂದುವರಿಯಲಿವೆ’ ಎಂದು ಮೂಲಗಳು ವಿವರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.