ADVERTISEMENT

ಚಿನ್ನ ಕಳ್ಳಸಾಗಣೆ ಪ್ರಕರಣ | ನಟಿ ರನ್ಯಾ ರಾವ್‌ ವಿಚಾರಣೆ: ಐ.ಟಿಗೆ ಅನುಮತಿ

ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಆದೇಶ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 15:55 IST
Last Updated 11 ಜೂನ್ 2025, 15:55 IST
ರನ್ಯಾ ರಾವ್‌
ರನ್ಯಾ ರಾವ್‌   

ಬೆಂಗಳೂರು: ದುಬೈನಿಂದ ಚಿನ್ನ ಕಳ್ಳ ಸಾಗಣೆಯ ಪ್ರಕರಣದಲ್ಲಿ ಬಂಧಿತರಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿ ಇರುವ ನಟಿ ಹರ್ಷವರ್ಧನಿ ರನ್ಯಾ (ರನ್ಯಾ ರಾವ್‌) ಅವರ ಹಣಕಾಸು ವ್ಯವಹಾರದ ಕುರಿತು ತನಿಖೆ ನಡೆಸಲು ಆದಾಯ ತೆರಿಗೆ ಇಲಾಖೆ (ಐ.ಟಿ) ಮುಂದಾಗಿದೆ.

ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ನಡೆದ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ರನ್ಯಾ ಅವರನ್ನು ವಿಚಾರಣೆ ನಡೆಸಲು ಅನುಮತಿ ನೀಡುವಂತೆ ಕೋರಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಐ.ಟಿ ಅಧಿಕಾರಿಗಳು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಅನುಮತಿ ನೀಡಿದೆ.

ಜೈಲಿನ ವಿಶೇಷ ಕೊಠಡಿಯಲ್ಲೇ ಮೂರು ದಿನ ವಿಚಾರಣೆ ನಡೆಸಬಹುದು. ಬೆಳಿಗ್ಗೆ 10ರಿಂದ ಸಂಜೆ 5.30ರ ಒಳಗೆ ವಿಚಾರಣೆ ನಡೆಸಿ, ವಿಡಿಯೊ ರೆಕಾರ್ಡ್ ಮಾಡಿಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ADVERTISEMENT

ಆರೋಪಿಗಳಾದ ರನ್ಯಾ ಹಾಗೂ ತರುಣ್‌ ಕೊಂಡೂರು ರಾಜ್‌ ಅವರಿಗೆ ನಗರದ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯವು ಮೇ 20ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆದರೆ, ರನ್ಯಾ ಅವರ ವಿರುದ್ಧ ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳ ಸಾಗಣೆ ಚಟುವಟಿಕೆಗಳ ತಡೆ ಕಾಯ್ದೆಯ (ಕಾಫಿಫೋಸಾ) 3(1) ಸೆಕ್ಷನ್‌ ಅಡಿಯ‌ಲ್ಲಿ ಕಳೆದ ಏಪ್ರಿಲ್‌ 22ರಂದು ಬಂಧನದ ಆದೇಶ ಹೊರಡಿಸಿತ್ತು. ಕಾಫಿಪೋಸಾ ಪ್ರಕರಣದಲ್ಲಿ ಬಂಧನವಾದರೆ ಜಾಮೀನಿನ ಮೇಲೆ ಬಿಡುಗಡೆ ಸಾಧ್ಯವಿಲ್ಲ. ಹೀಗಾಗಿ, ಜಾಮೀನು ಸಿಕ್ಕರೂ ರನ್ಯಾ ಅವರಿಗೆ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಅಧಿಕಾರಿಗಳೂ ಹದಿನೈದು ದಿನಗಳ ಹಿಂದೆ ಹಲವು ಕಡೆ ದಾಳಿ ನಡೆಸಿ ತನಿಖೆ ನಡೆಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.