
ಬೆಂಗಳೂರು: ಕೆಲಸಕ್ಕಿದ್ದ ಮನೆಯಲ್ಲಿ ಕಳ್ಳತನ ಮಾಡಿದ್ದ ಆರೋಪದಡಿ ಮಹಿಳೆಯೊಬ್ಬರನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದು, ₹12 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
‘ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮಹಿಳೆ, ಕೊಡಿಗೇಹಳ್ಳಿಯ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ಫ್ಲ್ಯಾಟ್‌ನಲ್ಲಿ ಕೆಲಸಕ್ಕೆ ಇದ್ದರು’ ಎಂದು ಪೊಲೀಸರು ಹೇಳಿದರು.
‘ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆರೋಪಿ, ಅಸಲಿ ಚಿನ್ನಾಭರಣ ಕದಿಯುತ್ತಿದ್ದರು. ನಂತರ, ಅದೇ ಸ್ಥಳದಲ್ಲಿ ನಕಲಿ ಚಿನ್ನಾಭರಣ ಇರಿಸುತ್ತಿದ್ದರು. ಎಂಟು ತಿಂಗಳಿನಿಂದ ಮಹಿಳೆ ಕೃತ್ಯ ಎಸಗುತ್ತಿದ್ದರು. ನಕಲಿ ಚಿನ್ನವನ್ನೇ ಅಸಲಿ ಎಂಬುದಾಗಿ ನಂಬಿ ಮಾಲೀಕರು ಸುಮ್ಮನಾಗಿದ್ದರು.’
‘ಮನೆ ಮಾಲೀಕರು ಇತ್ತೀಚೆಗೆ ಸಂಬಂಧಿಕರೊಬ್ಬರ ಕಾರ್ಯಕ್ರಮಕ್ಕೆ ಹೊರಟಿದ್ದರು. ಚಿನ್ನಾಭರಣ ಧರಿಸಿದ್ದರು. ಆದರೆ, ಚಿನ್ನಾಭರಣ ವಿನ್ಯಾಸದಲ್ಲಿ ಬದಲಾವಣೆ ಇರುವುದನ್ನು ಗಮನಿಸಿದ್ದರು. ಮಳಿಗೆಯೊಂದಕ್ಕೆ ತೆರಳಿ ಪರಿಶೀಲಿಸಿದ್ದರು. ಅವಾಗಲೇ, ನಕಲಿ ಚಿನ್ನವೆಂಬುದು ಗೊತ್ತಾಗಿತ್ತು. ಕೆಲಸದ ಮಹಿಳೆ ಮೇಲೆಯೇ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು’ ಎಂದು ಪೊಲೀಸರು ಹೇಳಿದರು.
‘ಕೆಲಸ ಬಿಟ್ಟು ತಮ್ಮೂರಿಗೆ ಹೋಗಿದ್ದ ಮಹಿಳೆಯನ್ನು ಬಂಧಿಸಿ ನಗರಕ್ಕೆ ಕರೆತರಲಾಗಿದೆ. ₹12 ಲಕ್ಷ ಮೌಲ್ಯದ 150 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.