ADVERTISEMENT

ಒಂದು ಕೆ.ಜಿ. ಚಿನ್ನಾಭರಣ ಕದ್ದಿದ್ದ ಕೆಲಸದವರ ಬಂಧನ

ಲಾಕರ್‌ ಸಮೇತ ಪರಾರಿಯಾಗಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 24 ಮೇ 2021, 21:37 IST
Last Updated 24 ಮೇ 2021, 21:37 IST
ಚಂದನ್
ಚಂದನ್   

ಬೆಂಗಳೂರು: ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯ ಮನೆಯೊಂದರಲ್ಲಿ ಚಿನ್ನಾಭರಣ ಹಾಗೂ ನಗದು ಕದ್ದು ಪರಾರಿಯಾಗಿದ್ದ ಆರೋಪದಡಿ ಮಹಿಳೆ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

‘ಛತ್ತೀಸ್‌ಗಢದ ಸುನೈನಾ (25), ಅಸ್ಸಾಂನ ಮೀನ್‌ಹಾಜುದ್ದೀನ್ ಬಾರ್‌ಬುಯ್ಯ (27) ಹಾಗೂ ಬಿಹಾರದ ಚಂದನ್‌ ಕುಮಾರ್ ಮೊಹತೋ ಅಲಿಯಾಸ್ ಚಂದನ್ (19) ಬಂಧಿತರು. ಅವರಿಂದ 1 ಕೆ.ಜಿ 5 ಗ್ರಾಂ ತೂಕದ ಚಿನ್ನಾಭರಣ, 21 ಬೆಳ್ಳಿ ನಾಣ್ಯಗಳು, ₹ 55,000 ನಗದು, ಕಾರು, ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಇವುಗಳ ಒಟ್ಟು ಮೌಲ್ಯ ₹ 50 ಲಕ್ಷ’ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ಹೇಳಿದರು.

ಮನೆ ಕೆಲಸಕ್ಕೆ ಸೇರಿ ಕೃತ್ಯ: ‘ಆರೋಪಿಗಳಾದ ಸುನೈನಾ ಹಾಗೂ ಚಂದನ್, ಮಾರತ್ತಹಳ್ಳಿ ಠಾಣೆ ವ್ಯಾಪ್ತಿಯ ನಿವಾಸಿ ನಿತಿನ್ ಅಗರವಾಲ್ ಎಂಬುವರ ಮನೆಯಲ್ಲಿ ಕೆಲಸಕ್ಕೆ ಇದ್ದರು. ಅದೇ ಸಮಯದಲ್ಲಿ ಚಿನ್ನಾಭರಣ ಹಾಗೂ ನಗದು ಇದ್ದ ಲಾಕರ್ ನೋಡಿದ್ದರು’ ಎಂದು ದೇವರಾಜ್ ತಿಳಿಸಿದರು.

ADVERTISEMENT

‘ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಲಾಕರ್‌ ಕದ್ದು ಆರೋಪಿಗಳು ಪರಾರಿಯಾಗಿದ್ದರು. ಈ ಬಗ್ಗೆ ಮನೆ ಮಾಲೀಕ ದೂರು ನೀಡಿದ್ದರು. ಅಷ್ಟರಲ್ಲೇ ಆರೋಪಿಗಳು ಬೆಂಗಳೂರು ತೊರೆದಿದ್ದರು. ಲಾಕರ್‌ನಲ್ಲಿದ್ದ ಚಿನ್ನಾಭರಣವನ್ನು ಆರೋಪಿ ಮೀನ್‌ಹಾಜುದ್ದೀನ್‌ಗೆ ನೀಡಿ ಮಾರಾಟ ಮಾಡಲು ತಿಳಿಸಿದ್ದರು.’

‘ಬೆಂಗಳೂರು ಹಾಗೂ ಅಸ್ಸಾಂನಲ್ಲಿ ಚಿನ್ನಾಭರಣ ಮಾರಿದ್ದ ಮೀನ್‌ಹಾಜುದ್ದೀನ್, ಹಣವನ್ನು ಸುನೈನಾ ಹಾಗೂ ಚಂದನ್‌ಗೆ ನೀಡಿದ್ದ. ನಂತರ ಹಣವನ್ನು ಆರೋಪಿಗಳು ಹಂಚಿಕೊಂಡಿದ್ದರು’ ಎಂದೂ ದೇವರಾಜ್ ವಿವರಿಸಿದರು.

‘ಕೃತ್ಯದ ನಂತರ ಮನೆ ಕೆಲಸದವರು ನಾಪತ್ತೆಯಾಗಿದ್ದರಿಂದ ಅವರ ಮೇಲೆ ಅನುಮಾನ ಬಂದಿತ್ತು. ಆದರೆ, ಸುಳಿವು ಸಿಕ್ಕಿರಲಿಲ್ಲ. ವಿಶೇಷ ತಂಡದ ಪೊಲೀಸರು, ಆರೋಪಿಗಳ ವಿಳಾಸ ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದೂ ಅವರು ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.