ADVERTISEMENT

ನಗದು ಎಂದುಕೊಂಡು ಚಿನ್ನದ ಗಟ್ಟಿ ದೋಚಿದರು...

₹2.56 ಕೋಟಿ ಮೌಲ್ಯದ 5.59 ಕೆ.ಜಿ. ಚಿನ್ನದ ಗಟ್ಟಿ ಸುಲಿಗೆ: 7 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 19:45 IST
Last Updated 1 ಡಿಸೆಂಬರ್ 2021, 19:45 IST
 ಚಿನ್ನದ ಗಟ್ಟಿ
ಚಿನ್ನದ ಗಟ್ಟಿ    

ಬೆಂಗಳೂರು: ಚಿನ್ನದ ವ್ಯಾಪಾರಿಯೊಬ್ಬರನ್ನು ಅಡ್ಡಗಟ್ಟಿ ಅವರ ಬಳಿ ಇದ್ದ ₹2.56 ಕೋಟಿ ಮೌಲ್ಯದ 5.59 ಕೆ.ಜಿ. ಚಿನ್ನದ ಗಟ್ಟಿಗಳನ್ನು ದೋಚಿಕೊಂಡು ಪರಾರಿಯಾಗಿದ್ದ ಏಳು ಆರೋಪಿಗಳನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.‌

‘ಸರ್ವಜ್ಞನಗರದ ಮೊಹಮ್ಮದ್ ಫರ್ಹಾನ್ ಯಾನೆ ಶಹಬಾಜ್‌ (23), ನಾಗವಾರ ಮುಖ್ಯರಸ್ತೆಯ ಮೊಹಮ್ಮದ್ ಹುಸೇನ್ (35), ವೆಂಕಟೇಶಪುರದ ಮೊಹಮ್ಮದ್ ಆರಿಫ್ (34) ಹಾಗೂ ಅಂಜುಂ (39), ಕುಶಾಲನಗರದ ಶಾಹಿದ್ ಅಹಮ್ಮದ್ (24), ಆರ್‌.ಟಿ.ನಗರದ ಉಮೇಶ್ (54) ಮತ್ತು ಗೋವಿಂದಪುರದ ಸುಹೈಲ್‌ ಬೇಗ್ (24) ಬಂಧಿತರು. ಇವರಿಂದ ₹ 2.25 ಕೋಟಿ ಮೌಲ್ಯದ 4.98 ಕೆ.ಜಿ.ಗಟ್ಟಿ, ಕೃತ್ಯಕ್ಕೆ ಬಳಸಿದ್ದ ಲಾಂಗ್‌ ಹಾಗೂ ಬೈಕ್‌ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಚಿನ್ನದ ಗಟ್ಟಿ ವ್ಯಾಪಾರಿಯಾಗಿದ್ದ ಸಿದ್ದೇಶ್ವರ್‌ ಸಿಂಗ್‌ ಎಂಬುವರು ಸಂಸ್ಕಾರ್‌ ಎಂಟರ್‌ಪ್ರೈಸಸ್‌ ಹೆಸರಿನ ಅಂಗಡಿ ನಡೆಸುತ್ತಿದ್ದರು. ನ.19ರ ರಾತ್ರಿ 8.30ರ ಸುಮಾರಿಗೆ ಅಂಗಡಿಯ ಕೆಲಸಗಾರ ಸೂರಜ್‌ ಜೊತೆ ಬೈಕ್‌ನಲ್ಲಿ ಕ್ವೀನ್ಸ್‌ ರಸ್ತೆ ಬಳಿಯ ಅಟ್ಟಿಕಾ ಗೋಲ್ಡ್‌ ಕಂಪನಿಗೆ ಹೋಗಿ ಚಿನ್ನದ ಗಟ್ಟಿಗಳನ್ನು ಖರೀದಿಸಿ ಅಂಗಡಿಗೆ ಹಿಂತಿರುಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಆರೋಪಿಗಳು ಅವರನ್ನು ತಡೆದಿದ್ದರು. ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಮುಂದಾದಾಗ ಇಬ್ಬರೂ ಬೈಕ್‌ನಿಂದ ಕೆಳಕ್ಕೆ ಬಿದ್ದಿದ್ದರು. ಈ ವೇಳೆ ಆರೋಪಿಗಳು ಗಟ್ಟಿ ತುಂಬಿದ ಸೂಟ್‌ಕೇಸ್‌ ಕಸಿದು ಪರಾರಿಯಾಗಿದ್ದರು’ ಎಂದು ವಿವರಿಸಿದ್ದಾರೆ.

ADVERTISEMENT

‘ಆರೋಪಿಗಳ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಘಟನೆ ನಡೆದ ಸ್ಥಳದ ಸುತ್ತಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ಪರಿಶೀಲಿಸಿದಾಗ ಆರೋಪಿಗಳ ಕುರಿತು ಸುಳಿವು ಸಿಕ್ಕಿತ್ತು’ ಎಂದು ಹೇಳಿದ್ದಾರೆ.

‘ಆರೋಪಿಉಮೇಶ್, ಅಟ್ಟಿಕಾ ಗೋಲ್ಡ್‌ ಕಂಪನಿಯ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಆತ ಅಲ್ಲಿಗೆ ಬರುವವರ ಚಲನವಲನಗಳ ಮೇಲೆ ನಿಗಾ ಇಡುತ್ತಿದ್ದ. ಸಿದ್ದೇಶ್ವರ್‌ ಮತ್ತು ಸೂರಜ್‌ ಸೂಟ್‌ಕೇಸ್‌ ತೆಗೆದುಕೊಂಡು ಹೋಗುತ್ತಿದ್ದುದನ್ನು ಗಮನಿಸಿದ್ದ ಆತ ಮಾಹಿತಿಯನ್ನು ಇತರರಿಗೆ ಮುಟ್ಟಿಸಿದ್ದ. ಅದರಲ್ಲಿ ದೊಡ್ಡ ಮೊತ್ತದ ಹಣ ಇರಬಹುದು ಎಂದು ಭಾವಿಸಿದ್ದ ಆರೋಪಿಗಳು ಸುಲಿಗೆ ಮಾಡಲು ಸಂಚು ರೂಪಿಸಿದ್ದರು’ ಎಂದು ಮಾಹಿತಿ ನೀಡಿದರು.

‘ಬಂಧಿತ ಆರೋಪಿಗಳ ಪೈಕಿ ಇಬ್ಬರ ವಿರುದ್ಧ ಕಾಡುಗೊಂಡನಹಳ್ಳಿ ಠಾಣೆಯಲ್ಲಿ (ಕೆ.ಜಿ.ಹಳ್ಳಿ) ಕೊಲೆ ಪ್ರಕರಣಗಳು ದಾಖಲಾಗಿವೆ’ ಎಂದಿದ್ದಾರೆ.

ಬಹುಮಾನ ಘೋಷಣೆ: ಪ್ರಕರಣ ಬೇಧಿಸಿರುವ ಹಲಸೂರು ಗೇಟ್‌ ಠಾಣೆ ಪೊಲೀಸರ ತಂಡಕ್ಕೆ ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ₹70 ಸಾವಿರ ನಗದು ಬಹುಮಾನ ಪ್ರಕಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.