ADVERTISEMENT

ಬಸ್‌ನಲ್ಲಿ ಜನ ಸಂದಣಿ ಇದ್ದೆಡೆ ಚಿನ್ನಾಭರಣ ಕದಿಯುತ್ತಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 19:40 IST
Last Updated 11 ಜನವರಿ 2022, 19:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಸ್ ಪ್ರಯಾಣಿಕರ ಚಿನ್ನಾಭರಣ ಕಳವು ಮಾಡಿದ್ದ ಆರೋಪದಡಿ ಆನಂದ್ ಗಿರಿ ಎಂಬಾತನನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಯಾದ ಆರೋಪಿ ಆನಂದ್, ಹಲವು ತಿಂಗಳಿನಿಂದ ಕೃತ್ಯ ಎಸಗುತ್ತಿದ್ದ. ಆತನಿಂದ ₹ 16 ಲಕ್ಷ ಮೌಲ್ಯದ 306 ಗ್ರಾಂ ಚಿನ್ನಾಭರಣ ಹಾಗೂ 1 ಕೆ.ಜಿ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಚಾಮರಾಜನಗರದ ನಿವಾಸಿಯೊಬ್ಬರು ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಜ. 5ರಂದು ಬೆಂಗಳೂರಿಗೆ ಬಂದಿದ್ದರು. ಬಸ್ಸಿನಿಂದ ಇಳಿಯುವಾಗ ನೂಕುನುಗ್ಗಲು ಉಂಟಾಗಿತ್ತು. ಅದೇ ಸಂದರ್ಭದಲ್ಲೇ ಅವರ ಬ್ಯಾಗ್‌ನಲ್ಲಿದ್ದ ಚಿನ್ನಾಭರಣಗಳನ್ನು ಆರೋಪಿ ಕಳವು ಮಾಡಿದ್ದ. ಈ ಬಗ್ಗೆ ಪ್ರಕರಣ ದಾಖಲಾಗಿತ್ತು’ ಎಂದೂ ತಿಳಿಸಿದರು.

ADVERTISEMENT

‘ಬಸ್ ನಿಲ್ದಾಣ ಹಾಗೂ ಜನ ಸಂದಣಿ ಇರುವ ಸ್ಥಳಗಳಲ್ಲಿ ಆರೋಪಿ ಕೃತ್ಯ ಎಸಗುತ್ತಿದ್ದ. ಬೆಂಗಳೂರು ಹಾಗೂ ರಾಮನಗರದ ಹಲವೆಡೆ ಆತ ಕಳ್ಳತನ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.