ಬೆಂಗಳೂರು: ನಗರದ ದೇವಸ್ಥಾನಗಳು ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗಾಗಿ ಬಿಎಂಟಿಸಿ ಆರಂಭಿಸಿರುವ ‘ಬೆಂಗಳೂರು ದಿವ್ಯ ದರ್ಶನ’ ಯೋಜನೆಗೆ ಪ್ರಯಾಣಿಕರಿಂದ ಉತ್ತಮ ಸ್ಪಂದನ ದೊರೆತಿದೆ. ಶನಿವಾರ (ಜೂನ್ 7) ಒಂದೇ ದಿನಕ್ಕೆ 5 ಬಸ್‌ಗಳ ಆಸನಗಳು ಮುಂಗಡವಾಗಿ ಬುಕ್ ಆಗಿವೆ.
ಮೇ 31ಕ್ಕೆ ‘ದಿವ್ಯ ದರ್ಶನ’ ಆರಂಭವಾಗಿತ್ತು. ಮೆಜೆಸ್ಟಿಕ್‌ನ ಕೆಂಪೇಗೌಡ ನಿಲ್ದಾಣದಿಂದ ಹೊರಡುವ ಬಸ್ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ, ರಾಜರಾಜೇಶ್ವರಿ ದೇವಸ್ಥಾನ, ಶೃಂಗಗಿರಿ ಷಣ್ಮುಖ ದೇವಸ್ಥಾನ, ಶ್ರೀದೇವಿ ಕರುಮಾರಿ ಅಮ್ಮನವರ ದೇವಸ್ಥಾನ, ಓಂಕಾರ ಹಿಲ್ಸ್, ವಸಂತಪುರ ಇಸ್ಕಾನ್ ದೇವಸ್ಥಾನ, ಆರ್ಟ್ ಆಫ್ ಲಿವಿಂಗ್, ಬನಶಂಕರಿ ದೇವಸ್ಥಾನಗಳಿಗೆ ಭೇಟಿ ನೀಡಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ವಾಪಸ್ ಆಗುತ್ತದೆ.
ಬೆಳಿಗ್ಗೆ 8.30ಕ್ಕೆ ಹೊರಟು ಸಂಜೆ 6.05ಕ್ಕೆ ವಾಪಸ್ ಆಗುವುದರಿಂದ ಜನರು ‘ದಿವ್ಯ ದರ್ಶನ’ಕ್ಕೆ ಒಲವು ತೋರಿಸಿದ್ದರು. ಮೊದಲ ದಿನವೇ ನಾಲ್ಕು ಬಸ್, ಎರಡನೇ ದಿನವಾದ ಭಾನುವಾರ ನಾಲ್ಕು ಬಸ್‌ಗಳಲ್ಲಿ ಜನರು ಸಂಚರಿಸಿದ್ದರು. ಜನರ ಸ್ಪಂದನ ಗಮನಿಸಿದ ಬಿಎಂಟಿಸಿ ಅಧಿಕಾರಿಗಳು ವಾರಾಂತ್ಯ ಮತ್ತು ರಜಾದಿನಗಳಲ್ಲಿ ಮಾತ್ರವಲ್ಲದೆ, ವಾರದ ಎಲ್ಲ ದಿನಗಳಲ್ಲಿ ‘ಬೆಂಗಳೂರು ದಿವ್ಯ ದರ್ಶನ’ ನಡೆಸಲು ನಿರ್ಧರಿಸಿದರು.
‘ವಾರದ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇದ್ದು, ಒಂದು ಬಸ್ ಸಂಚರಿಸಿದೆ. ವಾರಾಂತ್ಯದಲ್ಲಿ ‘ದಿವ್ಯ ದರ್ಶನ’ಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದ್ದು, ಜೂನ್ 7ರಂದು ಪ್ರಯಾಣಿಸಲು ಈಗಾಗಲೇ ಐದು ಬಸ್‌ಗಳು ಬುಕ್ ಆಗಿವೆ. ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ’ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.
‘ನಾವು ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುವವರು. ಬೆಂಗಳೂರಿನಲ್ಲಿ ನೋಡಲು ಏನಿದೆ ಎಂದು ಎಲ್ಲರೂ ಹೇಳುವರು. ನಾವೂ ಹಾಗೇ ಭಾವಿಸಿದ್ದೆವು. ಕಬ್ಬನ್ ಪಾರ್ಕ್, ಬನ್ನೇಘಟ್ಟ ಸಹಿತ ಒಂದೆರಡು ಪ್ರದೇಶ ಬಿಟ್ಟರೆ ನೋಡುವಂತದ್ದೇನಿದೆ ಎಂಬುದು ನಮಗೂ ಗೊತ್ತಿರಲಿಲ್ಲ. ಈಶಾ ಫೌಂಡೇಷನ್ ಪ್ಯಾಕೇಜ್‌ನಲ್ಲಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದೇವೆ. ‘ಬೆಂಗಳೂರು ದಿವ್ಯ ದರ್ಶನ’ಕ್ಕೂ ತೆರಳುವ ಯೋಜನೆ ಹಾಕಿಕೊಂಡಿದ್ದೇವೆ’ ಎಂದು ರಾಜಾಜಿನಗರದ ನಿವಾಸಿ ಸುಗುಣ ತಿಳಿಸಿದರು.
‘ಸೋಮವಾರದಿಂದ ಶುಕ್ರವಾರದವರೆಗೆ ಕೆಲಸ ಇರುತ್ತದೆ. ಶನಿವಾರ, ಭಾನುವಾರ ಬೈಕ್‌ನಲ್ಲಿ ಸುತ್ತಾಡುತ್ತಿದ್ದೆವು. ಬಿಎಂಟಿಸಿಯವರು ವಿವಿಧ ಪ್ಯಾಕೇಜ್‌ಗಳನ್ನು ಮಾಡಿರುವುದು ನಮಗೆ ಅನುಕೂಲವಾಗಿದೆ’ ಎಂದು ಟೆಕಿ ಮಹೇಶ್ ತಿಳಿಸಿದರು.
‘ಕಡಿಮೆ ವೆಚ್ಚದಲ್ಲಿ ಸಂಚಾರ ನಮ್ಮ ಗುರಿ’
ಕಡಿಮೆ ವೆಚ್ಚದಲ್ಲಿ ನಗರದ ಒಳಗಿನ ಮತ್ತು ನಗರಕ್ಕೆ ಸಮೀಪದ ಪ್ರವಾಸಿತಾಣಗಳಿಗೆ ಆಸಕ್ತರನ್ನು ಕರೆದೊಯ್ಯುವುದು ನಮ್ಮ ಉದ್ದೇಶ. ಅದಕ್ಕಾಗಿ ವಿವಿಧ ಪ್ಯಾಕೇಜ್‌ಗಳನ್ನು ರೂಪಿಸಲಾಗಿದೆ. ಈಶಾ ಫೌಂಡೇಷನ್ ಪ್ಯಾಕೇಜ್ ದಿವ್ಯದರ್ಶನಗಳಿಗೆ ಉತ್ತಮ ಸ್ಪಂದನೆ ದೊರಕಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಆರ್. ತಿಳಿಸಿದರು.
ಮೂರು ಪ್ಯಾಕೇಜ್
ನಗರದಲ್ಲಿ ಬಿಎಂಟಿಸಿ ಮೂರು ಪ್ಯಾಕೇಜ್‌ಗಳನ್ನು ಮಾಡಿದೆ. ಅದರಲ್ಲಿ ‘ಬೆಂಗಳೂರು ದರ್ಶಿನಿ’ ಹಳೇ ಯೋಜನೆಯಾಗಿದೆ. ನಗರದ ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಈ ಯೋಜನೆಯಡಿ ಪ್ರತಿ ತಿಂಗಳು ಸುಮಾರು 1000 ಜನರು ಪ್ರಯಾಣಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರದ ಭೋಗ ನಂದೀಶ್ವರ ದೇವಸ್ಥಾನ ಕಣಿವೆ ಬಸವಣ್ಣ ದೇವಸ್ಥಾನ ಸರ್.ಎಂ. ವಿಶ್ವೇಶ್ವರಯ್ಯ ಮ್ಯೂಸಿಯಂ ಮತ್ತು ಸಮಾಧಿ ರಂಗಸ್ಥಳ ರಂಗನಾಥ ಸ್ವಾಮಿ ದೇವಸ್ಥಾನ ಮತ್ತು ಈಶಾ ಫೌಂಡೇಷನ್‌ಗೆ ಭೇಟಿ ನೀಡುವ ‘ಈಶಾ ಫೌಂಡೇಷನ್’ ಪ್ಯಾಕೇಜ್‌ನಲ್ಲಿ ಪ್ರತಿ ತಿಂಗಳು ಸರಾಸರಿ 5000 ಜನರು ಪ್ರವಾಸ ಮಾಡುತ್ತಿದ್ದಾರೆ.
‘ಬೆಂಗಳೂರು ದಿವ್ಯ ದರ್ಶನ’ ಹೊಸ ಯೋಜನೆಯಾಗಿದೆ. ಪ್ಯಾಕೇಜ್‌ಗಳ ಮಾಹಿತಿಗಾಗಿ ಮತ್ತು ಮುಂಗಡವಾಗಿ ಕಾಯ್ದಿರಿಸಲು www.mybmtc.com ಮತ್ತು www.ksrtc.in ಸಂಪರ್ಕಿಸಬಹುದು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.