(ಚಿತ್ರ ಕೃಪೆ– @arpit_bhayani)
ಬೆಂಗಳೂರು: ಇಲ್ಲಿನ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಗೂಗಲ್ ತೊರೆದ ನಂತರ ತನ್ನ ಜೀವನದ ಕಹಿ ಕ್ಷಣಗಳನ್ನು ಕಳೆಯುತ್ತಿದ್ದೇನೆ ಎಂದು ಹೇಳಿದ್ದಾರೆ. ತಮ್ಮ ಹೊರಗಿನ ಚಟುವಟಿಕೆಗಳಿಂದಾಗಿ ಕೆಲಸ ಕಳೆದುಕೊಂಡಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ.
ಹೊರಗಿನ ಕೆಲವು ವಿಚಾರಗಳಲ್ಲಿ ತೊಡಗಿಸಿಕೊಂಡಿದ್ದು ಕಂಪನಿಗೆ ಗೊತ್ತಾಗಿ ನಾನು ಆ ಕಂಪನಿಯನ್ನು ತೊರೆಯಬೇಕಾಯಿತು. ಇದನ್ನು ಬಿಟ್ಟರೆ ಬೇರೆ ದಾರಿ ಇರಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಅರ್ಪಿತ್ ಭಯಾನಿ ಎಂಬುವವರು ಸಾಮಾಜಿಕ ಎಕ್ಸ್ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಗೂಗಲ್‌ನಲ್ಲಿ ತಮ್ಮ ಕೊನೆಯ ದಿನದ ಅನಿರೀಕ್ಷಿತ ಕ್ಷಣಗಳ ಬಗ್ಗೆ ಅವರು ಬರೆದುಕೊಂಡಿದ್ದಾರೆ.
ಇದು ಸಿಹಿ-ಕಹಿಯ ಕ್ಷಣ ಅಲ್ಲ, ಸಂಪೂರ್ಣವಾಗಿ ಕಹಿಯ ಕ್ಷಣ. ನಾನು ಗೂಗಲ್ ತೊರೆಯಲು ಯಾವುದೇ ಆಲೋಚನೆ ಹೊಂದಿರಲಿಲ್ಲ. ಆದರೆ, ನನಗೆ ಬೇರೆ ದಾರಿಯೇ ಇರಲಿಲ್ಲ. ಹೊರಗಿನ ಪ್ರಾಜೆಕ್ಟ್‌ಗಳನ್ನು ಮುಗಿಸಿಕೊಳ್ಳಲು ನಾನು ಕೆಲವು ಆನ್‌ಲೈನ್ ಕೋರ್ಸ್‌ಗಳಿಗೆ ಸೇರಿಕೊಂಡಿದ್ದೆ. ಇದು ನನಗೆ ಮುಳುವಾಯಿತು. ನಾನು ತುಂಬಾ ಪ್ರೀತಿಸುವ ಒಂದು ಕೆಲಸವನ್ನು ಬಿಡಲು ನನಗೆ ಬೇಸರವಾಗುತ್ತಿದೆ ಎಂದಿದ್ದಾರೆ.
ನಾನು ಒಬ್ಬ ಒಳ್ಳೆಯ ಕೆಲಸಗಾರನಾಗಿ, ಜವಾಬ್ದಾರಿಯುತವಾಗಿ ಕೆಲಸ ಮಾಡಿದ್ದೇನೆ. ಅದಕ್ಕಿಂತ ಹೆಚ್ಚಾಗಿ ಒಳ್ಳೆಯ ಜೊತೆಗಾರರ ಜತೆಗೆ ಕೆಲಸ ಮಾಡಿದ್ದೇನೆ. ಆದರೆ ಇನ್ನು ಒಳ್ಳೆಯ ವಿಚಾರಗಳನ್ನು ಕಲಿಯುವ ಅವಕಾಶವನ್ನು ಕಳೆದುಕೊಂಡೆ ಎಂದು ಬರೆದುಕೊಂಡಿದ್ದಾರೆ.
ಗೂಗಲ್‌ನಲ್ಲಿ ಎರಡು ವರ್ಷ ಕೆಲಸ ಮಾಡಿರುವ ಬಗ್ಗೆ ತೃಪ್ತಿಯಿದೆ. ಇದು ನನ್ನನ್ನು ಎಂಜಿನಿಯರ್ ಮತ್ತು ಆಪರೇಟರ್ ಆಗಿ ಬೆಳೆಯಲು ಸಹಾಯ ಮಾಡಿದೆ. ಈ 2 ವರ್ಷಗಳ ಕಾಲ ಅವಕಾಶ ನೀಡಿದ್ದಕ್ಕಾಗಿ ನಾನು ಗೂಗಲ್‌ಗೆ ಎಂದೆಂದಿಗೂ ಕೃತಜ್ಞನಾಗಿರುತ್ತೇನೆ ಎಂದೂ ಅವರು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.