ADVERTISEMENT

ಆ್ಯಪ್ ಆಧಾರಿತ ಟ್ಯಾಕ್ಸಿ: ಸರ್ಕಾರದಿಂದ ಸಾಧ್ಯವೇ?

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2022, 18:15 IST
Last Updated 8 ಮಾರ್ಚ್ 2022, 18:15 IST
   

ಬೆಂಗಳೂರು: ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಆರಂಭವಾದ ಬಳಿಕ ಟ್ಯಾಕ್ಸಿ ಸೇವೆ ಸ್ವರೂಪವೇ ಬದಲಾಗಿ ಹೋಯಿತು. ಮೊದ ಮೊದಲು ಪ್ರಯಾಣಿಕರಿಗೆ ಕಡಿಮೆ ದರ, ಚಾಲಕರಿಗೆ ಉತ್ತಮ ಪ್ರೋತ್ಸಾಹ ಧನ ನೀಡುವ ಮೂಲಕ ಟ್ಯಾಕ್ಸಿ ಮಾರುಕಟ್ಟೆಯನ್ನೇ ಈ ಕಂಪನಿಗಳು ಕಬ್ಜ ಮಾಡಿಕೊಂಡವು.

ಬೆಂಗಳೂರಿನಲ್ಲಿ ಇದ್ದ ಟ್ಯಾಕ್ಸಿ ಸ್ಟ್ಯಾಂಡ್‌ಗಳು ಮೆಲ್ಲಗೆ ಕಣ್ಮರೆಯಾದವು. ನಗರದ ಟ್ಯಾಕ್ಸಿ ವಲಯವನ್ನು ಸಂಪೂರ್ಣವಾಗಿ ಆ್ಯಪ್ ಆಧಾರಿತ ಕಂಪನಿಗಳೇ ನಿರ್ವಹಿಸುತ್ತಿವೆ. ದಿನ ಕಳೆದಂತೆ ಪ್ರಯಾಣ ದರವೂ ಹೆಚ್ಚಾಯಿತು, ಚಾಲಕರಿಗೆ ನೀಡುತ್ತಿದ್ದ ಪ್ರೋತ್ಸಾಹಧನವೂ ಕಡಿಮೆಯಾಯಿತು.

ಆ್ಯಪ್ ಆಧಾರಿತ ಸೇವೆ ಬಿಟ್ಟು ಟ್ಯಾಕ್ಸಿ ನಿಲ್ದಾಣದಲ್ಲಿ ಕಾರು ನಿಲ್ಲಿಸಿಕೊಂಡು ಗ್ರಾಹಕರಿಗೆ ಕಾಯುವ ಅವಕಾಶವೇ ಈಗ ಇಲ್ಲವಾಗಿ ಹೋಗಿದೆ. ಆ್ಯಪ್ ಆಧಾರಿತ ಸೇವೆ ಒದಗಿಸುತ್ತಿರುವ ಕಂಪನಿಗಳು ನಿಗದಿಪಡಿಸುವ ದರವೇ ಅಂತಿಮವಾಗಿದೆ. ಸದ್ಯ ಈ ಕಂಪನಿಗಳ ಪರವಾನಗಿ ನವೀಕರಣ ಅರ್ಜಿಗಳು ಸಾರಿಗೆ ಇಲಾಖೆ ಮುಂದಿವೆ. ಈ ಸಂದರ್ಭದಲ್ಲಿ ಕಂಪನಿಗಳಿಗೆ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಬೇಕು, ಇಲ್ಲವೇ ಸರ್ಕಾರವೇ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸಬೇಕು ಎಂಬುದು ಕಾರು ಮಾಲೀಕರು ಮತ್ತು ಚಾಲಕರ ಬೇಡಿಕೆಯಾಗಿದೆ. ಈ ಕುರಿತು ಚಾಲಕರ ಸಂಘಟನೆಗಳು ‘ಪ್ರಜಾವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡಿವೆ.

ADVERTISEMENT

ನೀತಿ, ನಿಯಮದ ವ್ಯಾಪ್ತಿಗೆ ತರಬೇಕು

ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಹೇಗಿರಬೇಕು ಎಂಬುದಕ್ಕೆ ರಾಜ್ಯ ಸರ್ಕಾರ 2016ರಲ್ಲಿ ನೀತಿ ರೂಪಿಸಿದೆ. ಒಲಾ, ಉಬರ್ ಕಂಪನಿಗಳುಇ–ಕಾಮರ್ಸ್ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಈ ನೀತಿಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿವೆ. 2021ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸುತ್ತೋಲೆ ಹೊರಡಿಸಿ, ಈ ಕಂಪನಿಗಳು ಮೋಟಾರು ವಾಹನ ಕಾಯ್ದೆ ವ್ಯಾಪ್ತಿಯೊಳಗೆ ಇರಬೇಕು ಎಂದು ತಿಳಿಸಿದೆ. ಅದನ್ನು ಹೈಕೋರ್ಟ್‌ಗೆ ಸಲ್ಲಿಸಿ ತಡೆಯಾಜ್ಞೆ ತೆರವುಗೊಳಿಸಲು ಪ್ರಯತ್ನಿಸಬೇಕು. ಬೇರೆ ಕಂಪನಿಗಳಿಗೆ ಪರವಾನಗಿ ನೀಡದೆ ಸರ್ಕಾರವೇ ಆ್ಯಪ್ ಅಭಿವೃದ್ಧಿಪಡಿಸಿ ನಿರ್ವಹಿಸಲು ಕಾನೂನಿನ ತೊಡಕುಗಳಿವೆ. ಸರ್ಕಾರದ ಏಕಸೌಮ್ಯಕ್ಕೂ ಅವಕಾಶ ಆಗಲಿದೆ. ಆದ್ದರಿಂದ ಕೇಂದ್ರ ಸರ್ಕಾರದ ಸುತ್ತೋಲೆ ಪಾಲಿಸುವಂತೆ ಮಾಡಿದರೆ ಎಲ್ಲಾ ಸಮಸ್ಯೆಗಳಿಗೂ ಉತ್ತರ ಸಿಗಬಹುದು.

–ಕೆ. ರಾಧಾಕೃಷ್ಣ ಹೊಳ್ಳ, ಕರ್ನಾಟಕ ರಾಜ್ಯ ಟ್ರಾವೆಲ್ಸ್‌ ಮಾಲೀಕರ ಸಂಘದ ಅಧ್ಯಕ್ಷ

ಆ್ಯಪ್ ನಿರ್ವಹಣೆ– ಸರ್ಕಾರಕ್ಕೆ ಕಷ್ಟವಾಗದು

ನೂರಾರು ಕೋಟಿ ನಷ್ಟದಲ್ಲಿರುವ ಬಿಎಂಟಿಸಿಯನ್ನೇ ಸರ್ಕಾರ ನಿರ್ವಹಣೆ ಮಾಡುತ್ತಿದೆ. ವರಮಾನ ಬರಬಹುದಾದ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸಲು ಕಷ್ಟವೇನು ಆಗುವುದಿಲ್ಲ. ಖಾಸಗಿ ವ್ಯವಸ್ಥೆಯಲ್ಲಿ ರೋಸಿ ಹೋಗಿರುವ ಕಾರು ಮಾಲೀಕರು ಮತ್ತು ಚಾಲಕರು ಸರ್ಕಾರದ ವ್ಯವಸ್ಥೆಯೊಳಕ್ಕೆ ಬರಲಿದ್ದಾರೆ. ಸ್ಪರ್ಧೆಯೊಂದು ಇದ್ದರೆ ದರ ಏರಿಳಿತಕ್ಕೆ ಈ ಕಂಪನಿಗಳು ಅಷ್ಟಾಗಿ ಮುಂದಾಗುವುದಿಲ್ಲ. ಸರ್ಕಾರವೇ ನೇರವಾಗಿ ನಿರ್ವಹಣೆ ಮಾಡದಿದ್ದರೂ, ಹೊರಗುತ್ತಿಗೆ ವ್ಯವಸ್ಥೆ ಮೂಲಕ ಟ್ಯಾಕ್ಸಿ ಸೇವೆ ನಿರ್ವಹಿಸಲು ಅವಕಾಶ ಇದೆ. ಇದರಿಂದ ಸರ್ಕಾರಕ್ಕೂ ಹೆಸರು ಬರಲಿದೆ, ಪ್ರಯಾಣಿಕರು ಮತ್ತು ಕಾರು ಚಾಲಕರಿಗೂ ಅನುಕೂಲ ಆಗಲಿದೆ. ಈ ಸಂಬಂಧ ಸಾರಿಗೆ ಸಚಿವರನ್ನು ಮತ್ತೊಮ್ಮೆ ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ.

–ತನ್ವೀರ್ ಪಾಷಾ, ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ

ಸರ್ಕಾರವೇ ಆ್ಯಪ್ ನಿರ್ವಹಿಸಲಿ

ಲಕ್ಷಾಂತರ ಬಂಡವಾಳ ಹಾಕಿ ಕಾರು ಖರೀದಿ ಮಾಡಿದ್ದೇವೆ. 10 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಆಟೋರಿಕ್ಷಾ ಮತ್ತು ಟ್ಯಾಕ್ಸಿ ನಂಬಿಕೊಂಡಿವೆ. ಸಣ್ಣಪುಟ್ಟ ವ್ಯತ್ಯಾಸ ಇದ್ದರೂ ಪೊಲೀಸರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ನಮ್ಮ ಹೊಟ್ಟೆ ಮೇಲೆ ಹೊಡೆಯುತ್ತಾರೆ. ಒಲಾ–ಉಬರ್ ಕಂಪನಿಗಳ ಪರವಾನಗಿ ನವೀಕರಣ ಮಾಡುವ ಬದಲು ಸರ್ಕಾರವೇ ಆ್ಯಪ್ ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡುವುದು ಸೂಕ್ತ. ಆಗ ಚಾಲಕರಿಗೂ ತೊಂದರೆಯಾಗುವುದಿಲ್ಲ, ಪ್ರಯಾಣಿಕರಿಗೂ ಹೊರೆಯಾಗುವುದಿಲ್ಲ. ಅದಕ್ಕೆ ಕಾನೂನಿನಲ್ಲಿ ತೊಡಕುಗಳಿದ್ದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಪರಿಶೀಲಿಸಿ ಸರಿಪಡಿಸಬೇಕಾಗುತ್ತದೆ. ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯವ ವ್ಯವಸ್ಥೆಯನ್ನಂತೂ ಸರ್ಕಾರ ಸಂಪೂರ್ಣ ತಡೆಗಟ್ಟಬೇಕು.

–ಜವರೇಗೌಡ, ಟ್ಯಾಕ್ಸಿ ಮತ್ತು ಆಟೋರಿಕ್ಷಾ ಮಾಲೀಕರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.