ADVERTISEMENT

ಬನ್ನೇರುಘಟ್ಟದಲ್ಲಿ ಸುರಂಗ: ಕೈಬಿಡಲು ತೀರ್ಮಾನ

ಸ್ಯಾಟಲೈಟ್‌ ಟೌನ್‌ ರಿಂಗ್‌ ರಸ್ತೆ(ಎಸ್‌ಟಿಟಿಆರ್‌) ಯೋಜನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 19:46 IST
Last Updated 5 ಜನವರಿ 2023, 19:46 IST
ಬನ್ನೇರುಘಟ್ಟ
ಬನ್ನೇರುಘಟ್ಟ   

ಬೆಂಗಳೂರು: ನಗರದ ಸುತ್ತಮುತ್ತ ಹಾದು ಹೋಗುವ ಸ್ಯಾಟಲೈಟ್‌ ಟೌನ್‌ ರಿಂಗ್‌ ರಸ್ತೆಯು(ಎಸ್‌ಟಿಟಿಆರ್‌) ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಹಾದು ಹೋಗುವುದನ್ನು ತಪ್ಪಿಸಲು ತೀರ್ಮಾನಿಸಲಾಗಿದೆ.

ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ಈ ಹೆದ್ದಾರಿ ಯೋಜನೆಯು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ಹಾದು ಹೋಗಲಿದೆ. ಮುಂಬೈ–ನವದೆಹಲಿ ಮಾರ್ಗದಲ್ಲಿ ಅರಣ್ಯ ಪ್ರದೇಶ ಎದುರಾಗಿತ್ತು. ಅಲ್ಲಿಯೂ ಅರಣ್ಯಕ್ಕೆ ತೊಂದರೆ ಆಗದಂತೆ ಸುರಂಗ ಕೊರೆದು ರಸ್ತೆ ನಿರ್ಮಿಸಲಾಗಿದೆ. ಅದೇ ಮಾದರಿಯನ್ನು ಇಲ್ಲಿಯೂ ಅನುಸರಿಸಲು ಸಾಧ್ಯವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ನಿತಿನ್‌ ಗಡ್ಕರಿ ಅವರು ಗುರುವಾರ ಬೆಳಿಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು. ಆದರೆ, ಸಂಜೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವಿಷಯ ಚರ್ಚಗೆ ಬಂದು ಕೈಬಿಡಲು ಸಭೆ ತೀರ್ಮಾನಿಸಿದೆ.

ADVERTISEMENT

ಯಾವುದೇ ಕಾರಣಕ್ಕೂ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಹೆದ್ದಾರಿ ನಿರ್ಮಿಸಬಾರದು ಎಂದು ರಾಜ್ಯ ವನ್ಯಜೀವಿ ಸಮಿತಿ ಅಭಿಪ್ರಾಯಪಟ್ಟಿದೆ. ಆದ್ದರಿಂದ ಈ ಪ್ರಸ್ತಾಪ ಕೈಬಿಟ್ಟು, ದೂರವಾದರೂ ಉದ್ಯಾನದ ವ್ಯಾಪ್ತಿಯಿಂದ ಹೊರಭಾಗದಲ್ಲಿ ರಸ್ತೆ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

288 ಕಿಲೋ ಮೀಟರ್ ಉದ್ದದ ಈ ರಿಂಗ್ ರಸ್ತೆಯು ತಮಿಳುನಾಡಿನಲ್ಲೂ 45 ಕಿಲೋ ಮೀಟರ್‌ ರಸ್ತೆ ಹಾದು ಹೋಗಲಿದೆ. ಒಟ್ಟಾರೆ ₹17 ಸಾವಿರ ಕೋಟಿ ಮೊತ್ತದ ಯೋಜನೆಯಲ್ಲಿ ಈಗಾಗಲೇ ₹6 ಸಾವಿರ ಕೋಟಿ ಮೊತ್ತದಲ್ಲಿ 136 ಕಿಲೋ ಮೀಟರ್‌ ಮಾರ್ಗಕ್ಕೆ ಟೆಂಡರ್ ಪ್ರಕ್ರಿಯೆ ನಡೆದಿದೆ. 2025ಕ್ಕೆ ಯೋಜನೆ ಪೂರ್ಣಗೊಳಿಸುವ ಉದ್ದೇಶವಿದೆ ಎಂದು ವಿವರಿಸಿದರು.

ಈ ರಸ್ತೆಯು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಸೂಕ್ಷ್ಮ ವಲಯದಲ್ಲಿ 8.1 ಕಿಲೋ ಮೀಟರ್ ಸೇರಿ ಒಟ್ಟು 28 ಕಿಲೋ ಮೀಟರ್ ಹಾದು ಹೋಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಪೌರಾಡಳಿತ ಸಚಿವ ಎಂಟಿಬಿ ನಾಗರಾಜ, ಸಂಸದ ಮುನಿಸ್ವಾಮಿ ಇದ್ದರು.

ಡಬಲ್ ಡೆಕ್ಕರ್ ಮೇಲ್ಸೇತುವೆ

ಎಸ್‌ಟಿಆರ್‌ಆರ್‌ನಲ್ಲಿ ಡಬಲ್ ಡೆಕ್ಕರ್ ಮೇಲ್ಸೇತುವೆಗಳನ್ನು ನಿರ್ಮಿಸಲು ಅವಕಾಶ ಇರಿಸಿಕೊಳ್ಳುವಂತೆ ಎನ್‌ಎಚ್‌ಎಐ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗಡ್ಕರಿ ಹೇಳಿದರು.

ಈ ರಸ್ತೆಗಳಲ್ಲಿ ಮುಂದಿನ 10 ವರ್ಷದ ಬಳಿಕ ಭೂಸ್ವಾಧೀನ ಕಷ್ಟವಾಗಲಿದೆ. ದಟ್ಟಣೆ ಸಮಸ್ಯೆ ನಿವಾರಣೆಗೆ ಡಬಲ್ ಡೆಕ್ಕರ್ ಸೇತುವೆಗಳು ಅನುಕೂಲ ಆಗಲಿವೆ. ಸರಕು ಸಾಗಣೆ ವಾಹನಗಳನ್ನು ಮೇಲ್ಸೇತುವೆಗಳ ಮೇಲೆ ಸಂಚರಿಸಲು ಅವಕಾಶ ನೀಡಿದರೆ ಸಮಸ್ಯೆಗೆ ಪರಿಹಾರ ದೊರಕಿಸಲು ಸಾಧ್ಯ ಎಂದರು.

ರಸ್ತೆ ಅಭಿವೃದ್ಧಿಗೆ ತ್ಯಾಜ್ಯ ಬಳಕೆ

ನಗರದಲ್ಲಿ ನಿತ್ಯ ಉತ್ಪಾದನೆಯಾಗುವ ತ್ಯಾಜ್ಯವನ್ನೂ ರಸ್ತೆ ನಿರ್ಮಾಣಕ್ಕೆ ಕಚ್ಚಾ ವಸ್ತುವಾಗಿ ಬಳಕೆ ಮಾಡಿಕೊಳ್ಳಲು ಚಿಂತನೆ ನಡೆದಿದೆ ಎಂದು ಗಡ್ಕರಿ ತಿಳಿಸಿದರು.

ಬೇರ್ಪಡಿಸಿದ ತ್ಯಾಜ್ಯವನ್ನು ವ್ಯವಸ್ತಿತವಾಗಿ ಸಂಸ್ಕರಿಸಿ ರಸ್ತೆಗೆ ಬಳಸಲು ಸಾಧ್ಯವೇ ಎಂದು ಪರಿಶೀಲಿಸಲಾಗುತ್ತಿದೆ ಎಂದರು.

‌ಸ್ಕೈಬಸ್ ಪರಿಚಯಿಸಲು ಅಧ್ಯಯನ

ಬೆಂಗಳೂರು ನಗರಕ್ಕೆ ಸ್ಕೈಬಸ್ ಪರಿಚಯಿಸುವ ಬಗ್ಗೆ ಅಧ್ಯಯನ ನಡೆದಿದೆ ಎಂದು ನಿತಿನ್ ಗಡ್ಕರಿ ತಿಳಿಸಿದರು.

ದೇಶದಲ್ಲೇ ಮೊದಲ ಪ್ರಯತ್ನ ಆಗಿರುವುದರಿಂದ ಹಲವು ಸವಾಲುಗಳು ಎದುರಾಗುತ್ತಿವೆ. ಸಂಪೂರ್ಣ ದೇಶೀಯವಾಗಿಯೇ ನಿರ್ಮಿಸುವ ಉದ್ದೇಶ ಇದೆ. ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಟ್ಟದ ಸಹಕಾರವನ್ನೂ ಪಡೆಯಲಾಗುವುದು ಎಂದರು.

ಕೇಬಲ್ ಕಾರ್ ತಂತ್ರಜ್ಞಾನಕ್ಕೂ ಬೇಡಿಕೆ ಇದೆ. ದೇಶದಾದ್ಯಂತ 280 ಪ್ರಸ್ತಾವನೆಗಳು ಬಂದಿವೆ. ಅದರಲ್ಲಿ ಕರ್ನಾಟಕದ 15 ಪ್ರಸ್ತಾವನೆಗಳೂ ಸೇರಿವೆ. ಕಾರ್ಯಸಾಧ್ಯತೆ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ಎಸ್‌ಟಿಆರ್‌ಆರ್‌ ಸಂಪರ್ಕಿಸುವ ಪಟ್ಟಣಗಳು

ದಾಬಸ್‌ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸುಲಿಬೆಲೆ, ಹೊಸಕೋಟೆ, ಸರ್ಜಾಪುರ, ಅತ್ತಿಬೆಲೆ, ಆನೇಕಲ್, ತಟ್ಟೆಕೆರೆ, ಕನಕಪುರ, ರಾಮನಗರ, ಮಾಗಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.