ADVERTISEMENT

ಸರ್ಕಾರಿ ಜಮೀನು ಒತ್ತುವರಿಗೆ ಕಡಿವಾಣ: ಬಿ.ಎಸ್.ಯಡಿಯೂರಪ್ಪ

‘ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ ಅಡಿ ಕಾಮಗಾರಿಗೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 21:55 IST
Last Updated 8 ಮಾರ್ಚ್ 2020, 21:55 IST
ಬಿ.ಎಸ್.ಯಡಿಯೂರಪ್ಪ ದೀಪ ಬೆಳಗಿದರು. ರಾಜೀವ್‌ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ರಾಮಪ್ರಸಾದ್ ಮನೋಹರ್, ಆರ್‌.ಮಂಜುನಾಥ್‌, ವಿ.ಸೋಮಣ್ಣ, ಡಿ.ವಿ.ಸದಾನಂದ ಗೌಡ, ಆರ್‌.ಅಶೋಕ, ವಸತಿ ಇಲಾಖೆಯ ಕಾರ್ಯದರ್ಶಿ ಮನೋಜ್‌ ಕುಮಾರ್ ಮೀನಾ, ನಗರ ಜಿಲ್ಲಾ ಪಂಚಾಯತಿ ಅಧ್ಯಕ್ಷ ಜಿ.ಮರಿಸ್ವಾಮಿ ಇದ್ದರು
ಬಿ.ಎಸ್.ಯಡಿಯೂರಪ್ಪ ದೀಪ ಬೆಳಗಿದರು. ರಾಜೀವ್‌ ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ರಾಮಪ್ರಸಾದ್ ಮನೋಹರ್, ಆರ್‌.ಮಂಜುನಾಥ್‌, ವಿ.ಸೋಮಣ್ಣ, ಡಿ.ವಿ.ಸದಾನಂದ ಗೌಡ, ಆರ್‌.ಅಶೋಕ, ವಸತಿ ಇಲಾಖೆಯ ಕಾರ್ಯದರ್ಶಿ ಮನೋಜ್‌ ಕುಮಾರ್ ಮೀನಾ, ನಗರ ಜಿಲ್ಲಾ ಪಂಚಾಯತಿ ಅಧ್ಯಕ್ಷ ಜಿ.ಮರಿಸ್ವಾಮಿ ಇದ್ದರು   

ಪೀಣ್ಯ ದಾಸರಹಳ್ಳಿ: 'ಬೆಂಗಳೂರು ಹಾಗೂ ಹೊರವಲಯದಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಮೀನನ್ನು ವಶಕ್ಕೆ ಪಡೆಯಲು ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಗಾಣಿಗರಹಳ್ಳಿಯಲ್ಲಿ ‘ಒಂದು ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ಯಡಿ ರಾಜೀವ್‌ ಗಾಂಧಿ ವಸತಿ ನಿಗಮ ವತಿಯಿಂದ ದಾಸರಹಳ್ಳಿ ಕ್ಷೇತ್ರದ ಸರ್ವೆ ನಂ.74ರಲ್ಲಿ 932 ಬಹುಮಹಡಿ ಮನೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

'ಆ ಜಮೀನನ್ನು ಸರ್ಕಾರದ ವಶಕ್ಕೆ ಪಡೆದು ಬಡವರಿಗೆ ಮನೆ ಹಾಗೂ ಸಾರ್ವಜನಿಕ ಉದ್ದೇಶಕ್ಕೆ ಬಳಸಲು ಚಿಂತನೆ ನಡೆಸಲಾಗಿದೆ' ಎಂದರು.

ADVERTISEMENT

ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, 'ಯೋಜನೆಗಳನ್ನು ಘೋಷಿಸುವುದು, ಹೆಚ್ಚುಗಾರಿಕೆಯಲ್ಲಿ ಅನುಷ್ಠಾನಗೊಳಿಸುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿ' ಎಂದು ಹೇಳಿದರು.

ವಸತಿ ಸಚಿವ ವಿ.ಸೋಮಣ್ಣ, ‘ಮುಂದಿನ ವರ್ಷದೊಳಗೆ ಐದು ಸಾವಿರಕ್ಕಿಂತ ಹೆಚ್ಚಿನ ಬಹುಮಹಡಿ ವಸತಿ ಗೃಹಗಳನ್ನು ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ. ಈ ವಸತಿ ಗೃಹಗಳನ್ನು ಬಡವರಿಗೆ ತಲುಪಿಸುವ ಜವಾಬ್ದಾರಿ ಇಲ್ಲಿನ ಸ್ಥಳೀಯ ಜನ ಪ್ರತಿನಿಧಿಗಳಿಗಿದ್ದು, ಅವರು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಮತ್ತು ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸುವ ಕಾರ್ಯದಲ್ಲಿ ಭಾಗವಹಿಸಬೇಕು’ ಎಂದರು.

ಆನೇಕಲ್‍ನಲ್ಲಿ ಐದು ಸಾವಿರ, ಯಶವಂತಪುರ ವ್ಯಾಪ್ತಿಯಲ್ಲಿ ಎಂಟು ಸಾವಿರ ಬಹುಮಹಡಿ ಮನೆಗಳನ್ನು ನಿರ್ಮಿಸಲು ಈಗಾಗಲೇ ಯೋಜನೆ ಸಿದ್ಧವಾಗಿದೆ ಎಂದರು.

ಕಂದಾಯ ಸಚಿವ ಆರ್. ಅಶೋಕ, ‘ಕಂದಾಯ ಇಲಾಖೆಯಿಂದ ವಸತಿ ಇಲಾಖೆಗೆ ಈಗಾಗಲೇ 2,500 ಎಕರೆ ಹಸ್ತಾಂತರಿಸಲಾಗಿದೆ. ಒತ್ತುವರಿ ಭೂಮಿ ತೆರವುಗೊಳಿಸಿದ ನಂತರ ಮೂರು ವರ್ಷಗಳಲ್ಲಿ 10 ಸಾವಿರ ಎಕರೆಯನ್ನು ವಿವಿಧ ಉದ್ದೇಶಗಳಿಗಾಗಿ ಇತರೆ ಇಲಾಖೆಗಳಿಗೆ ಹಸ್ತಾಂತರಿಸುವ ಗುರಿ ಹೊಂದಲಾಗಿದೆ’ ಎಂದರು.

ಶಾಸಕ ಆರ್.ಮಂಜುನಾಥ್, ‘ಇದು ಕಂದಾಯ ಬಡಾವಣೆಗಳಿಂದ ಕೂಡಿರುವ ಮಧ್ಯಮ ಹಾಗೂ ಬಡಕುಟುಂಬಗಳೇ ಹೆಚ್ಚು ವಾಸವಿರುವ ಕ್ಷೇತ್ರ. ರಾಜ್ಯದ 22 ಜಿಲ್ಲೆಗಳಿಂದ ಉದ್ಯೋಗ ಅರಸಿ ಬಂದಿರುವ ವಲಸಿಗರು ಹೆಚ್ಚು ನೆಲೆಸಿದ್ದಾರೆ. ಇವರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕಿದ್ದು, ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಅನುದಾನ ನೀಡಬೇಕು' ಎಂದು ಮನವಿ ಮಾಡಿದರು.

‘ಚಿಕ್ಕಬಾಣಾವರ ಹಾಗೂ ಸೋಮಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 46 ಸಾವಿರ ಜನಸಂಖ್ಯೆ ಇದ್ದು, ಮೂಲಸೌಕರ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಎರಡೂ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಿ ಪುರಸಭೆ ರಚಿಸಬೇಕು' ಎಂದರು.

ಅಂಕಿ ಅಂಶಗಳು

796:30 ಚ.ಮೀ. (1 ಬಿಎಚ್‌ಕೆ) ಮನೆಗಳು

136:45 ಚ.ಮೀ. (2 ಬಿಎಚ್‌ಕೆ) ಮನೆಗಳು

₹ 88.62 ಕೋಟಿ:ಯೋಜನಾ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.