ADVERTISEMENT

ತಂತ್ರಜ್ಞಾನ, ಡಿಜಿಟಲ್‌ ವ್ಯವಸ್ಥೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ: ಗೆಹಲೋತ್‌

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 18:19 IST
Last Updated 24 ಫೆಬ್ರುವರಿ 2026, 18:19 IST
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಯಿ ಪ್ರಕಾಶ್, ಬ್ರಿಗೇಡಿಯರ್‌ ಬಿ.ಎಂ.ಕಾರ್ಯಪ್ಪ, ಎನ್‌.ತಿಪ್ಪೇಸ್ವಾಮಿ, ಪ್ರಭಾಕರ ಕೋರೆ, ಸತ್ಯರೂಪ್‌ ಸಿದ್ಧಾಂತ ಅವರನ್ನು ಸನ್ಮಾನಿಸಲಾಯಿತು. ಥಾವರಚಂದ್ ಗೆಹಲೋತ್, ಬಿ.ಎಸ್. ಪಾಟೀಲ, ನಿರ್ಮಲಾನಂದನಾಥ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಯಿ ಪ್ರಕಾಶ್, ಬ್ರಿಗೇಡಿಯರ್‌ ಬಿ.ಎಂ.ಕಾರ್ಯಪ್ಪ, ಎನ್‌.ತಿಪ್ಪೇಸ್ವಾಮಿ, ಪ್ರಭಾಕರ ಕೋರೆ, ಸತ್ಯರೂಪ್‌ ಸಿದ್ಧಾಂತ ಅವರನ್ನು ಸನ್ಮಾನಿಸಲಾಯಿತು. ಥಾವರಚಂದ್ ಗೆಹಲೋತ್, ಬಿ.ಎಸ್. ಪಾಟೀಲ, ನಿರ್ಮಲಾನಂದನಾಥ ಸ್ವಾಮೀಜಿ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು   

ಯಲಹಂಕ: ‘ರಾಜ್ಯವು ತಂತ್ರಜ್ಞಾನ ಮತ್ತು ಡಿಜಿಟಲ್ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಗಮನಾರ್ಹ ಕೊಡುಗೆಯನ್ನು ನೀಡುತ್ತಿದ್ದು, ಮಾಹಿತಿ ತಂತ್ರಜ್ಞಾನ, ಸಕ್ರಿಯ ಸೇವೆಗಳು, ಎಲೆಕ್ಟ್ರಾನಿಕ್ಸ್ ಯಂತ್ರೋಪಕರಣಗಳು, ಏರೋಸ್ಪೇಸ್ ಹಾಗೂ ಜೈವಿಕ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ’ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಹೇಳಿದರು.

ವ್ಯಾಪ್ಸ್‌ ಟೆಕ್ನೋಸಾಫ್ಟ್‌ ಸಂಸ್ಥೆಯ ರಜತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ವ್ಯಾಪ್ಸ್‌ ಟೆಕ್ನೋಸಾಫ್ಟ್‌ನ 25 ವರ್ಷದ ಪಯಣವು ನಿರಂತರ ಕಠಿಣ ಪರಿಶ್ರಮ, ನಾವೀನ್ಯ, ಗುಣಮಟ್ಟ ಮತ್ತು ನಂಬಿಕೆಯ ಸಂಕೇತವಾಗಿದೆ. ಶಿಕ್ಷಣ ಮತ್ತು ತಂತ್ರಜ್ಞಾನ ಎಂಬ ರಾಷ್ಟ್ರ ನಿರ್ಮಾಣದ ಸೂಕ್ಷ್ಮ ಕ್ಷೇತ್ರಗಳಲ್ಲಿ ಈ ಸೇವೆಯು ಕೇವಲ ಕಾರ್ಪೊರೇಟ್ ಸಾಧನೆಯಲ್ಲ, ಅದು ಭಾರತದ ಅಭಿವೃದ್ಧಿ ಪ್ರಯಾಣಕ್ಕೆ ಮಹತ್ವದ ಕೊಡುಗೆಯಾಗಿದೆ’ ಎಂದರು.

‘ಪ್ರಸ್ತುತ ಯುಗವು ವೈಜ್ಞಾನಿಕ ಪ್ರಗತಿ, ಡಿಜಿಟಲ್ ಕ್ರಾಂತಿ ಮತ್ತು ಜ್ಞಾನಾಧಾರಿತ ಆರ್ಥಿಕತೆಯಿಂದ ಗುರುತಿಸಲ್ಪಟ್ಟಿದೆ. ಇಂತಹ ಪರಿವರ್ತನಾತ್ಮಕ ಕಾಲಘಟ್ಟದಲ್ಲಿ ಶೈಕ್ಷಣಿಕ ಹಾಗೂ ಐಟಿ ವಲಯಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಈ ಸಂಸ್ಥೆಯು ಶ್ರಮಿಸುತ್ತಿದೆ’ ಎಂದು ತಿಳಿಸಿದರು.

ADVERTISEMENT

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಮಾತನಾಡಿ, ‘ಸಾಫ್ಟ್‌ವೇರ್ ಕ್ಷೇತ್ರದ ಜೊತೆಗೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿಯೂ ಸಂಸ್ಥೆ ಸಾಧನೆ ಮಾಡುತ್ತಿರುವುದು ಶ್ಲಾಘನೀಯ’ ಎಂದರು.

ವ್ಯಾಪ್ಸ್ ಟೆಕ್ನಾಲಜೀಸ್ ಲಿಮಿಟೆಡ್‌ನ ಮುಖ್ಯಸ್ಥ ಆರ್‌.ಸಿದ್ದೇಶ್ ಕುಮಾರ್ ಮಾತನಾಡಿ, ‘ಎಐ-ವ್ಯಾಪ್ʼ ಎಂಬ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಸಂಸ್ಥೆಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. 2009ರಲ್ಲಿ ಆರಂಭವಾದ ಸಂಸ್ಥೆಯು ಹಲವು ಕ್ಷೇತ್ರಗಳಲ್ಲಿ ತನ್ನದೇ ಆದ ಗುರುತು ಮೂಡಿಸಿದೆ’ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ವೀರಸಿಂಹಾಸನ ಸಂಸ್ಥಾನಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕೆಎಲ್‌ಇ ಸಂಸ್ಥೆಗಳ ಅಧ್ಯಕ್ಷ ಪ್ರಭಾಕರ್ ಕೋರೆ, ಹಿರಿಯ ನಿರ್ದೇಶಕ ಸಾಯಿ ಪ್ರಕಾಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.