ADVERTISEMENT

ಬಿಬಿಎಂಪಿ ಆಡಳಿತಾಧಿಕಾರಿ ಅವಧಿ ವಿಸ್ತರಿಸದ ಸರ್ಕಾರ

ಸಂವಿಧಾನದ ಕಲಂ 243 ಯು ಪ್ರಕಾರ 6 ತಿಂಗಳವರೆಗೆ ಮಾತ್ರ ಆಡಳಿತಾಧಿಕಾರಿ ನೇಮಕಕ್ಕೆ ಅವಕಾಶ * ಸೃಷ್ಟಿಯಾಗಿದೆ ಬಿಕ್ಕಟ್ಟು ?

ಪ್ರವೀಣ ಕುಮಾರ್ ಪಿ.ವಿ.
Published 11 ಮಾರ್ಚ್ 2021, 21:51 IST
Last Updated 11 ಮಾರ್ಚ್ 2021, 21:51 IST
   

ಬೆಂಗಳೂರು: ಬಿಬಿಎಂಪಿ ಚುನಾಯಿತ ಕೌನ್ಸಿಲ್‌ ಅವಧಿ ಮುಗಿಯುವುದರೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿರಬೇಕು. ಒಂದು ವೇಳೆ ಚುನಾವಣೆ ಮುಂದೂಡಿದರೂ ಗರಿಷ್ಠ ಆರು ತಿಂಗಳ ಅವಧಿಗೆ ಮಾತ್ರ ಆಡಳಿತಾಧಿಕಾರಿಯನ್ನು ನೇಮಿಸುವುದಕ್ಕೆ ಸಂವಿಧಾನದಲ್ಲಿ ಅವಕಾಶವಿದೆ.

ಆಡಳಿತಾಧಿಕಾರಿ ಗೌರವ್‌ ಗುಪ್ತ ಅವರು ಅಧಿಕಾರ ಸ್ವೀಕರಿಸಿ (ಅವರು 2020ರ ಸೆ 11ರಂದು ಅಧಿಕಾರ ಸ್ವೀಕರಿಸಿದ್ದರು) ಈಗಾಗಲೇ ಆರು ತಿಂಗಳುಗಳು ಕಳೆದಿವೆ. ಅವರನ್ನು ಈ ಹುದ್ದೆಯಲ್ಲಿ ಮುಂದುವರಿಸುವ ಬಗ್ಗೆ ಸರ್ಕಾರ ಇನ್ನೂ ಅಧಿಕೃತವಾಗಿ ಆದೇಶ ಹೊರಡಿಸಿಲ್ಲ. ಇದು ಬಿಕ್ಕಟ್ಟಿಗೆ ಕಾರಣವಾಗಿದೆ.

’ಸಂವಿಧಾನದ ಕಲಂ 243 ಯು‘ ಪ್ರಕಾರ ಬಿಬಿಎಂಪಿಯ ಚುನಾಯಿತ ಕೌನ್ಸಿಲ್‌ ಅನ್ನು ವಿಸರ್ಜಿಸಿದರೂ ಆರು ತಿಂಗಳ ಒಳಗೆ ಚುನಾಯಿತ ಕೌನ್ಸಿಲ್‌ ರಚನೆಯಾಗುವಂತೆ ನೋಡಿಕೊಳ್ಳಬೇಕು. 1976ರ ಕರ್ನಾಟಕ ಪೌರ ನಿಗಮಗಳ (ಕೆಎಂಸಿ) ಕಾಯ್ದೆಯಲ್ಲೂ ಈ ಅಂಶವನ್ನೇ ಅಳವಡಿಸಿಕೊಳ್ಳಲಾಗಿತ್ತು.

ADVERTISEMENT

ಪ್ರಸ್ತುತ 2020ರ ಬಿಬಿಎಂಪಿ ಕಾಯ್ದೆ ಅನ್ವಯ ಪಾಲಿಕೆಯ ಆಡಳಿ ನಿರ್ವಹಿಸಲಾಗುತ್ತಿದೆ. ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 126ರ ಪ್ರಕಾರ ಚುನಾಯಿತ ಕೌನ್ಸಿಲ್‌ ವಿಸರ್ಜಿಸಲು ಸರ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಪಾಲಿಕೆಯನ್ನು ವಿಸರ್ಜಿಸಿದರೆ ಆ ದಿನಾಂಕದಿಂದ ಆರು ತಿಂಗಳ ಒಳಗೆ ಕೌನ್ಸಿಲ್‌ ಅನ್ನು ಪುನರ್ರಚಿಸಬೇಕು ಎಂದು ಸೆಕ್ಷನ್‌ 126 (7) ಹೇಳುತ್ತದೆ. ಪಾಲಿಕೆಯನ್ನು ವಿಸರ್ಜಿಸಿದರೆ, ಅಧಿಸೂಚನೆ ಹೊರಡಿಸುವ ಮೂಲಕ ವಿಸರ್ಜನೆಯ ಅವಧಿಗೆ ಆಡಳಿತಾಧಿಕಾರಿಯನ್ನು ನೇಮಿಸುವುದಕ್ಕೆ ಬಿಬಿಎಂಪಿ ಕಾಯ್ದೆಯ ಸೆಕ್ಷನ್‌ 127 ಅವಕಾಶ ಕಲ್ಪಿಸುತ್ತದೆ. ಅಗತ್ಯ ಬಿದ್ದರೆ ಆಡಳಿತಾಧಿಕಾರಿಯ ಅವಧಿಯನ್ನು ಮೊಟಕುಗೊಳಿಸಲು ಅಥವಾ ವಿಸ್ತರಿಸುವುದಕ್ಕೂ ಈ ಸೆಕ್ಷನ್‌ ಅವಕಾಶ ಕಲ್ಪಿಸುತ್ತದೆ.

ಬಿಬಿಎಂಪಿಯ ಚುನಾಯಿತ ಕೌನ್ಸಿಲ್‌ನ ಅವಧಿ 2020ರ ಸೆ. 10ಕ್ಕೆ ಪೂರ್ಣಗೊಂಡಿತ್ತು. ಸರ್ಕಾರ ಅದರ ಅವಧಿ ಪೂರ್ಣಗೊಳ್ಳುವ ಮುನ್ನ ಚುನಾಯಿತ ಕೌನ್ಸಿಲ್‌ ಅನ್ನು ವಿಸರ್ಜಿಸಿಲ್ಲ. ಆದರೆ, 2020ರ ಸೆ.10ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಅಧಿಸೂಚನೆ ಹೊರಡಿಸುವ ಮೂಲಕ ಬಿಬಿಎಂಪಿಯ ಆಡಳಿತಾಧಿಕಾರಿಯ ಹೊಸ ಹುದ್ದೆಯನ್ನು ಸೃಷ್ಟಿಸಿತ್ತು. ಮುಂದಿನ ಆದೇಶದವರೆಗೆ ಗೌರವ್‌ ಗುಪ್ತ ಅವರು ಆಡಳಿತಾಧಿಕಾರಿಯಾಗಿ ಮುಂದುವರಿಯಲಿದ್ದಾರೆ ಎಂದು ಆ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.

‘ಸಂವಿಧಾನದ ಪ್ರಕಾರ ಚುನಾಯಿತ ಕೌನ್ಸಿಲ್‌ ವಿಸರ್ಜನೆಯಾಗಿ ಆರು ತಿಂಗಳ ಒಳಗೆ ಚುನಾವಣೆ ನಡೆಸಬೇಕು. ಆಡಳಿತಾಧಿಕಾರಿಯನ್ನು ನೇಮಿಸಿದಾಗ ಅವರ ಅಧಿಕಾರಾವಧಿಯನ್ನು ಮುಂದುವರಿಸುವ ಅಧಿಕಾರವನ್ನು ಬಿಬಿಎಂಪಿ ಕಾಯ್ದೆ ಸರ್ಕಾರಕ್ಕೆ ನೀಡಿದೆ. ಆದರೆ, ಅಧಿಕಾರಾವಧಿ ಮುಂದುವರಿಸಲು ಸರ್ಕಾರ ಹೊಸ ಅಧಿಸೂಚನೆ ಹೊರಡಿಸಬೇಕಾಗುತ್ತದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

‘ಆರು ತಿಂಗಳಿಗಿಂತ ಹೆಚ್ಚು ಅವಧಿಗೆ ಆಡಳಿತಾಧಿಕಾರಿ ನೇಮಕಕ್ಕೆ ಸಂವಿಧಾನದಲ್ಲಿ ಅವಕಾಶ ಇಲ್ಲ ನಿಜ. ಆದರೆ, ಬಿಬಿಎಂಪಿ ಕಾಯ್ದೆಯಲ್ಲಿ ಇದಕ್ಕೆ ಅವಕಾಶ ಮಾಡಿಕೊಳ್ಳಲಾಗಿದೆ. ಈ ಕಾಯ್ದೆಯನ್ನು ಯಾರಾದರೂ ನ್ಯಾಯಾಲಯದಲ್ಲಿ ಪ್ರಶ್ನಿಸಿ ಈ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬೇಕಷ್ಟೇ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪಾಲಿಕೆಯ ಮಾಜಿ ಸದಸ್ಯರೊಬ್ಬರು ಹೇಳಿದರು.

ಬಿಬಿಎಂಪಿ ಚುನಾವಣೆ: ಇನ್ನೂ ತೂಗುಯ್ಯಾಲೆಯಲ್ಲಿ
ಬಿಬಿಎಂಪಿ ಚುನಾವಣೆ ಮುಂದೂಡಿದ್ದನ್ನು ಪ್ರಶ್ನಿಸಿ ಬಿಬಿಎಂಪಿಯ ಈ ಹಿಂದಿನ ಸದಸ್ಯರಾಗಿದ್ದ ಎಂ. ಶಿವರಾಜು ಮತ್ತು ಅಬ್ದುಲ್ ವಾಜಿದ್ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ 198 ವಾರ್ಡ್‌ಗಳಿಗೆ ತ್ವರಿತವಾಗಿ ಚುನಾವಣೆ ನಡೆಸಲು 2020ರ ಡಿ. 4ರಂದು ಆದೇಶಿಸಿತ್ತು. ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸುವ ಹಾಗೂ ಅದರ ಪ್ರಕಾರವೇ ಚುನಾವಣೆ ನಡೆಸಲು ಅವಕಾಶ ಕಲ್ಪಿಸಬೇಕು ಎಂಬ ಸರ್ಕಾರದ ವಾದವನ್ನು ಹೈಕೋರ್ಟ್‌ ಒಪ್ಪಿರಲಿಲ್ಲ.

ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಈ ನಡುವೆ, ಸರ್ಕಾರ ‘2020ರ ಬಿಬಿಎಂಪಿ ಕಾಯ್ದೆ’ಯನ್ನು 2021ರ ಜ. 11ರಿಂದ ಜಾರಿಗೊಳಿಸಿದೆ. ಬಿಬಿಎಂಪಿಗೆ ಶೀಘ್ರವೇ ಚುನಾವಣೆಯ ನಡೆಯುತ್ತದೋ ಇಲ್ಲವೋ ಎಂಬುದು ಸುಪ್ರೀಂ ಕೋರ್ಟ್‌ ತಳೆಯುವ ತೀರ್ಮಾನವನ್ನು ಆಧರಿಸಿದೆ.

ಬಿಬಿಎಂಪಿ ಕಾಯ್ದೆ ಊರ್ಜಿತವಲ್ಲ: ‘ರಾಜ್ಯ ಸರ್ಕಾರ ಯಾವುದೇ ಹೊಸ ಕಾಯ್ದೆ ರಚಿಸಿದಾಗ ರಾಷ್ಟ್ರಪತಿ ಅಂಕಿತವಿಲ್ಲದೇ ಅದನ್ನು ಜಾರಿಗೊಳಿಸಲಾಗದು. ಆದರೆ, ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ಮುಂದೂಡಬೇಕು ಎಂಬ ಏಕೈಕ ಕಾರಣಕ್ಕೆ ರಾಜ್ಯಪಾಲರ ಅಂಕಿತವಾದ ತಕ್ಷಣವೇ ಬಿಬಿಎಂಪಿ ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಕಾಯ್ದೆ ಊರ್ಜಿತವಲ್ಲ’ ಎಂದು ಆರೋಪಿಸುತ್ತಾರೆ ಎಂ.ಶಿವರಾಜ್‌.

‘ಬಿಬಿಎಂಪಿ ಚುನಾವಣೆ ಮುಂದೂಡಿದ್ದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಇದೇ 17ರಂದು ನಿಗದಿಯಾಗಿದೆ. ನಾವು ಬಿಬಿಎಂಪಿ ಕಾಯ್ದೆ ಜಾರಿಯಲ್ಲಿ ಆಗಿರುವ ಲೋಪವನ್ನು ಸುಪ್ರೀಂ ಕೋರ್ಟ್‌ ಗಮನಕ್ಕೆ ತರುತ್ತೇವೆ. ಚುನಾವಣೆಯನ್ನು ಮತ್ತಷ್ಟು ಮುಂದೂಡುವ ಸರ್ಕಾರದ ಪ್ರಯತ್ನ ಈಡೇರಲು ಅವಕಾಶ ನೀಡುವುದಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.