ADVERTISEMENT

ಹುಕ್ಕಾ ಬಾರ್‌ ನಿಷೇಧಕ್ಕೆ ಚಿಂತನೆ

ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2021, 18:38 IST
Last Updated 2 ಫೆಬ್ರುವರಿ 2021, 18:38 IST

ಬೆಂಗಳೂರು: ರಾಜ್ಯದಲ್ಲಿ ಹುಕ್ಕಾ ಬಾರ್‌ಗಳನ್ನು ನಿಷೇಧಿಸುವ ಚಿಂತನೆ ಇದೆ. ಈ ಕುರಿತು ನೆರೆಯ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿ, ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಂಗಳವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಹುಕ್ಕಾ ಬಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ಸ್ಥಳೀಯ ಸಂಸ್ಥೆಗಳ ಸಹಕಾರವೂ ಅಗತ್ಯ. ಮಾದಕವಸ್ತುಗಳ ಪೂರೈಕೆ ಮತ್ತು ಸೇವನೆ ವಿರುದ್ಧ ಅಭಿಯಾನಕ್ಕಾಗಿ ಪತ್ರಿಕೆಗಳು ಮತ್ತು ಸುದ್ದಿ ವಾಹಿನಿಗಳ ಜತೆಗೂ ಒಪ್ಪಂದ ಮಾಡಿಕೊಳ್ಳಲು ಗೃಹ ಇಲಾಖೆ ಸಿದ್ಧತೆ ನಡೆಸಿದೆ’ ಎಂದರು.

ಡ್ರಗ್ಸ್ ಜಾಲದ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. 2016ರಲ್ಲಿ ರಾಜ್ಯದಲ್ಲಿ 127 ಪ್ರಕರಣಗಳನ್ನು ಮಾತ್ರ ದಾಖಲಿಸಲಾಗಿತ್ತು. 2020ರಲ್ಲಿ 2,780 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸದನಕ್ಕೆ ತಿಳಿಸಿದರು.

ADVERTISEMENT

‘ಡ್ರಗ್ಸ್‌ಗೆ ಸಂಬಂಧಿಸಿದಂತೆ ಕೆಲವು ತಿಂಗಳ ಹಿಂದೆ ಆರಂಭವಾದ ಕಾರ್ಯಾಚರಣೆ ಈಗ ತಣ್ಣಗಾಗಿದೆ. ಮಾವಿನಹಣ್ಣು, ಅವರೇಕಾಯಿ ಬೆಳೆಯಂತೆ ಕಾರ್ಯಾಚರಣೆಯೂ ‘ಸೀಸನ್‌’ ಆಗಬಾರದು. ನಿರಂತರ ಕಾರ್ಯಾಚರಣೆ ನಡೆಸಬೇಕು’ ಎಂದು ಸೌಮ್ಯಾ ರೆಡ್ಡಿ ಆಗ್ರಹಿಸಿದರು.

ಆದೇಶ ಬದಲಾವಣೆಗೆ ಒಪ್ಪಿಗೆ: ‘ಪರಿಶಿಷ್ಟ ಜಾತಿಯ ಉಪ ಯೋಜನೆ (ಎಸ್‌ಸಿಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್‌ಪಿ) ಅನುದಾನವನ್ನು ಬೃಹತ್‌ ಕಾಮಗಾರಿಗಳಿಗೆ ಬಳಸಲು ಅವಕಾಶ ಕಲ್ಪಿಸುವುದಕ್ಕೆ ಸಂಬಂಧಿಸಿದ ಆದೇಶವನ್ನು ಬದಲಾವಣೆ ಮಾಡಲು ಆರ್ಥಿಕ ಇಲಾಖೆಯನ್ನು ಕೋರಲಾಗಿದೆ. ಆದೇಶ ಬಂದ ಬಳಿಕ ಈ ಕುರಿತು ಸ್ಪಷ್ಟ ನಿರ್ದೇಶನ ನೀಡಲಾಗುವುದು’ ಎಂದು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮತ್ತು ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ತಿಳಿಸಿದರು.

ಕಾಂಗ್ರೆಸ್‌ನ ಪ್ರಿಯಾಂಕ್ ಎಂ. ಖರ್ಗೆ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಎಸ್‌ಸಿಪಿ ಮತ್ತು ಟಿಎಸ್‌ಪಿ ಕಾಯ್ದೆಯ ಸೆಕ್ಷನ್‌ 7–ಡಿ ಅನ್ವಯ ಹಿಂದೆ ಹೊರಡಿಸಿದ್ದ ಆದೇಶಕ್ಕೆ ಬದಲಾವಣೆ ತರಲಾಗುವುದು’ ಎಂದರು.

ಕಲಬುರ್ಗಿ ಜಿಲ್ಲೆಯಲ್ಲಿ ಗುತ್ತಿಗೆದಾರರು ಶೇ 42ರಿಂದ ಶೇ 45ರವರೆಗೂ ಕಡಿಮೆ ದರ ನಮೂದಿಸಿ ಬಿಡ್‌ ಸಲ್ಲಿಸುತ್ತಿರುವ ವಿಷಯ ಪ್ರಸ್ತಾಪಿಸಿದ ಪ್ರಿಯಾಂಕ್‌, ಅಂತಹ ಟೆಂಡರ್‌ಗಳನ್ನು ರದ್ದು ಮಾಡುವಂತೆ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.