ADVERTISEMENT

ನೀರು ಬಳಕೆ ನಿಯಂತ್ರಣಕ್ಕೆ ಕಾನೂನು: ಡಿ.ಕೆ. ಶಿವಕುಮಾರ್‌

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2023, 16:13 IST
Last Updated 14 ಡಿಸೆಂಬರ್ 2023, 16:13 IST
ಡಿ.ಕೆ ಶಿವಕುಮಾರ್‌
ಡಿ.ಕೆ ಶಿವಕುಮಾರ್‌   

ವಿಧಾನಸಭೆ: ಬೃಹತ್‌ ನೀರಾವರಿ ಕಾಲುವೆಗಳಿಂದ ನೇರವಾಗಿ ನೀರೆತ್ತುವುದನ್ನು ನಿಯಂತ್ರಿಸಲು ಹೊಸ ಕಾನೂನು ತರಲಾಗುವುದು ಎಂದು ಜಲಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಬಿಜೆಪಿಯ ಬಿ.ಪಿ. ಹರೀಶ್‌ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ‘ಕಾಲುವೆಗಳಿಗೆ ನೇರವಾಗಿ ಮೋಟಾರ್‌ ಅಳವಡಿಸಿ ನೀರೆತ್ತುವುದು ಮತ್ತು ಕಾಲುವೆಗಳ ಪಕ್ಕದಲ್ಲೇ ಕೊಳವೆ ಬಾವಿಗಳನ್ನು ಕೊರೆಯುವುದರಿಂದ ಕೊನೆಯ ಭಾಗಕ್ಕೆ ನೀರು ಹರಿಸಲು ಆಗುತ್ತಿಲ್ಲ. ಆದ್ದರಿಂದ ಹೊಸ ಕಾನೂನು ಜಾರಿಗೊಳಿಸಿ ಕಾಲುವೆಗಳಿಗೆ ನೇರವಾಗಿ ಪಂಪ್‌ ಅಳವಡಿಸುವುದು ಮತ್ತು ಸಮೀಪದಲ್ಲಿ ಕೊಳವೆ ಬಾವಿ ಕೊರೆಯುವುದನ್ನು ನಿರ್ಬಂಧಿಸುವ ಪ್ರಸ್ತಾವವಿದೆ’ ಎಂದರು.

ಎತ್ತಿನಹೊಳೆ ಯೋಜನೆಯಲ್ಲಿ ಈ ರೀತಿಯ ನಿರ್ಬಂಧ ಹೇರುವುದು ಅನಿವಾರ್ಯವಾಗಿದೆ. ಅಲ್ಲಿನ ಕಾಲುವೆಗಳಿಗೆ ಪಂಪ್‌ಸೆಟ್‌ ಅಳವಡಿಸಿ ನೀರೆತ್ತುವುದನ್ನು ನಿಷೇಧಿಸಲಾಗುವುದು. ಕಾಲುವೆಯಿಂದ ಒಂದು ಕಿಲೋಮೀಟರ್‌ ದೂರದವರೆಗೆ ಕೊಳವೆ ಬಾವಿ ಕೊರೆಯದಂತೆ ನಿರ್ಬಂಧ ಹೇರುವುದಕ್ಕೂ ಯೋಚಿಸಲಾಗಿದೆ. ವಿಧಾನಮಂಡಲದ ಮುಂದಿನ ಅಧಿವೇಶನದಲ್ಲೇ ಈ ಕುರಿತ ಮಸೂದೆಯನ್ನು ಮಂಡಿಸಲಾಗುವುದು ಎಂದು ತಿಳಿಸಿದರು.

ADVERTISEMENT

ಹರಿಹರ ತಾಲ್ಲೂಕಿನ ಬೈರನಪಾದ ಏತ ನೀರಾವರಿ ಯೋಜನೆ ಕಾಮಗಾರಿಗೆ ತ್ವರಿತವಾಗಿ ಚಾಲನೆ ನೀಡಬೇಕೆಂಬ ಹರೀಶ್ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಭದ್ರಾ ಮೇಲ್ದಂಡೆ ಯೋಜನೆಗೆ ₹ 5,000 ಕೋಟಿ ಅನುದಾನ ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಘೋಷಿಸಿದ್ದರು. ಆ ಅನುದಾನ ದೊರೆತರೆ ಯೋಜನೆ ಪೂರ್ಣಗೊಳಿಸಬಹುದು. ಎಲ್ಲರೂ ಒಟ್ಟಾಗಿ ದೆಹಲಿಗೆ ಹೋಗಿ ಒತ್ತಾಯಿಸೋಣ’ ಎಂದರು.

‘ಈ ಬಾರಿಯೂ ಸೇರಿದಂತೆ ಮೂರು ಬಾರಿ ನಮ್ಮ ಕ್ಷೇತ್ರದ ಶಾಸಕರು ವಿರೋಧ ಪಕ್ಷದಲ್ಲೇ ಇದ್ದೇವೆ. ಹೀಗಾಗಿ ಬೈರನಪಾದ ಯೋಜನೆ ಅನುಷ್ಠಾನದ ಬಗ್ಗೆ ನಮ್ಮ ಕ್ಷೇತ್ರದ ಜನರಲ್ಲಿ ಅನುಮಾನ ಮೂಡಿದೆ’ ಎಂದು ಹರೀಶ್‌ ಹೇಳಿದರು. ‘ಹಾಗಿದ್ದರೆ ಈ ಕಡೆ ಬರುವ ಬಗ್ಗೆ ನೀವೇ ನಿರ್ಧರಿಸಿ’ ಎಂದು ಶಿವಕುಮಾರ್‌ ಆಹ್ವಾನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.