ADVERTISEMENT

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ: ಐದು ಪಾಲಿಕೆಗಳ ಗೆಲುವಿಗೆ ಬಿಜೆಪಿ ಕಾರ್ಯತಂತ್ರ

ಪಕ್ಷದ ಉಸ್ತುವಾರಿ ರಾಮ್‌ ಮಾಧವ್ ನೇತೃತ್ವದಲ್ಲಿ ಪೂರ್ವ ತಯಾರಿ ಸಭೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 17:34 IST
Last Updated 7 ಫೆಬ್ರುವರಿ 2026, 17:34 IST
ರಾಮ್‌ ಮಾಧವ್, ಸತೀಶ್‌ ಪೂನಿಯಾ, ಸಂಜಯ್‌ ಉಪಾಧ್ಯಾಯ ಅವರನ್ನು ಬಿ.ವೈ.ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಸ್ವಾಗತಿಸಿದರು.
ರಾಮ್‌ ಮಾಧವ್, ಸತೀಶ್‌ ಪೂನಿಯಾ, ಸಂಜಯ್‌ ಉಪಾಧ್ಯಾಯ ಅವರನ್ನು ಬಿ.ವೈ.ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಸ್ವಾಗತಿಸಿದರು.   

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಲು, ಮುಂಬೈ ಮಾದರಿಯಲ್ಲಿ ಗೆಲುವು ಸಾಧಿಸಲು ಅಗತ್ಯ ಕಾರ್ಯತಂತ್ರ ರೂಪಿಸುವ ಕುರಿತು ಬಿಜೆಪಿ ನಾಯಕರು ಶನಿವಾರ ಸುದೀರ್ಘ ಚರ್ಚೆ ನಡೆಸಿದರು.

ಜಿಬಿಎ ವ್ಯಾಪ್ತಿಯ ಚುನಾವಣೆಗಾಗಿ ನೇಮಕಗೊಂಡಿರುವ ಪಕ್ಷದ ಉಸ್ತುವಾರಿ ರಾಮ್‌ ಮಾಧವ್, ಸಹ-ಉಸ್ತುವಾರಿಗಳಾದ ಸತೀಶ್‌ ಪೂನಿಯಾ, ಸಂಜಯ್‌ ಉಪಾಧ್ಯಾಯ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪೂರ್ವ ತಯಾರಿ ಸಭೆ ನಡೆಯಿತು.

ಪಕ್ಷದ ನಿಷ್ಠಾವಂತ, ಜನಾನುರಾಗಿ, ಕಾಂಗ್ರೆಸ್‌ ವಿರುದ್ಧ ಸೆಣಸಬಲ್ಲ ನಾಯಕತ್ವದ ಗುಣ ಇರುವ ಕಾರ್ಯಕರ್ತರನ್ನು ಕಣಕ್ಕೆ ಇಳಿಸಲು ಹಾಗೂ ಅದಕ್ಕಾಗಿ ಅಂತಹ ಕಾರ್ಯಕರ್ತರರ ಪಟ್ಟಿ ಸಿದ್ಧಪಡಿಸಲು ಸಭೆ ನಿರ್ಧರಿಸಿತು.

ADVERTISEMENT

ಸಭೆಯ ನಂತರ ಈ ಕುರಿತು ಮಾಹಿತಿ ನೀಡಿದ ವಿಜಯೇಂದ್ರ, ‘ಕಾಂಗ್ರೆಸ್‌ ಪಕ್ಷದ ತಂತ್ರ- ಕುತಂತ್ರದ ನಡುವೆಯೂ ಐದೂ ನಗರ ಪಾಲಿಕೆಗಳಲ್ಲೂ ಗೆಲುವು ಸಾಧಿಸಲು ಅಗತ್ಯ ಕಾರ್ಯತಂತ್ರ ಸಿದ್ಧಪಡಿಸಲಾಗುವುದು. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನೂ ಶೀಘ್ರ ಆರಂಭಿಸಲಾಗುವುದು. ವಾರ್ಡ್‌ವಾರು ಅಭ್ಯರ್ಥಿಗಳ ಆಯ್ಕೆಗೂ ಮೊದಲು ಜೆಡಿಎಸ್‌ ನಾಯಕರ ಜತೆ ಚರ್ಚಿಸಿ, ಅವರ ಅಭಿಪ್ರಾಯ ಪಡೆಯಲಾಗುವುದು’ ಎಂದರು.   

ಫೆ.28 ಮತ್ತು ಮಾರ್ಚ್ 1ರಂದು ಐದು ಪಾಲಿಕೆಗಳ ಪ್ರತ್ಯೇಕ ಸಭೆ ಕರೆಯಲು ನಿರ್ಧರಿಸಲಾಗಿದೆ. ಸಭೆಯಲ್ಲಿ ಪಕ್ಷದ ಹಿರಿಯ ನಾಯಕರು ಇರುತ್ತಾರೆ. ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ, ಸಲಹೆ ಪಡೆಯಲಾಗುವುದು. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕುರಿತು ಚರ್ಚೆ ಮಾಡಿ, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಪಕ್ಷದ ಪ್ರಧಾನ ಕಾರ್ಯದರ್ಶಿ ನಂದೀಶ್‌ ರೆಡ್ಡಿ, ತಮ್ಮೇಶ್ ಗೌಡ, ಶಾಸಕ ಸಿ.ಕೆ. ರಾಮಮೂರ್ತಿ ಉಪಸ್ಥಿತರಿದ್ದರು.

ಮತಪತ್ರದ (ಬ್ಯಾಲೆಟ್‌) ಬದಲು ವಿದ್ಯುನ್ಮಾನ ಯಂತ್ರಗಳನ್ನೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ  ಬಳಸಲು ಕೋರಿ ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗುವುದು.
– ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
ಪ್ರತಿ ನಗರ ಪಾಲಿಕೆಗೂ ತಲಾ ಒಬ್ಬರು ಉಸ್ತುವಾರಿಗಳನ್ನು ನೇಮಿಸುವುದು ಐದು ಪಾಲಿಕೆಗಳಲ್ಲೂ ಗೆಲುವು ಸಾಧಿಸಲು ಅಗತ್ಯ ಕಾರ್ಯತಂತ್ರ ರೂಪಿಸಲಾಗುವುದು.
– ಆರ್‌.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
‘ಬಿಜೆಪಿ ಅವಧಿಯ ಕೆಲಸಗಳೇ ಶ್ರೀರಕ್ಷೆ’
ಬಿಜೆಪಿ ಆಡಳಿತದಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್‌.ಯಡಿಯೂರಪ್ಪ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿಗೆ ನೀಡಿದ ಆದ್ಯತೆ ಅನುದಾನ ಅಭಿವೃದ್ಧಿ ಕಾರ್ಯಗಳು ಬಿಜೆಪಿಗೆ ವರದಾನವಾಗಿವೆ. ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಸಹಕಾರಿಯಾಗಲಿವೆ ಎಂದು ವಿಜಯೇಂದ್ರ ಹೇಳಿದರು. ‘ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು ನಗರದ ರಸ್ತೆ ಗುಂಡಿ ಘನತ್ಯಾಜ್ಯ ವಿಲೇವಾರಿ ಸಮಸ್ಯೆಗಳನ್ನು ಜನರ ಮುಂದಿಟ್ಟು ಮತ ಕೇಳುತ್ತೇವೆ. ರಾಜ್ಯ ಸರ್ಕಾರದ ವೈಫಲ್ಯ ಬಿಜೆಪಿಯ ಗೆಲುವಿನ ದಾರಿಯನ್ನು ಸುಗಮಗೊಳಿಸಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.