
ಜಿಬಿಎ
ಬೆಂಗಳೂರು: ‘ನಗರ ಪಾಲಿಕೆಗಳ ಆಡಳಿತ ವ್ಯವಸ್ಥೆಗೆ ಅವಶ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಕಲ್ಪಿಸಿಕೊಟ್ಟ ನಂತರವೇ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಸಾಧ್ಯ’ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಹೇಳಿದ್ದಾರೆ.
‘ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಪೈಕಿ, ಕೇಂದ್ರ ನಗರ ಪಾಲಿಕೆಯನ್ನು ಹೊರತುಪಡಿಸಿದರೆ ಇನ್ನುಳಿದ ನಾಲ್ಕು ನಗರ ಪಾಲಿಕೆಗಳಿಗೆ ಕೇಂದ್ರ ಕಚೇರಿ ಕಟ್ಟಡಗಳನ್ನು ನಿರ್ಮಿಸಿದ ಮೇಲಷ್ಟೇ ಚುನಾವಣೆ ನಡೆಸಲು ಸಾಧ್ಯ. ನಾಲ್ಕು ನಗರ ಪಾಲಿಕೆಗಳಿಗೆ ಕಟ್ಟಡ ನಿರ್ಮಿಸಲು ಸ್ಥಳ ನಿಗದಿಪಡಿಸಿದ್ದರೂ, ಆ ಸ್ಥಳಗಳನ್ನು ಕಂದಾಯ ಇಲಾಖೆ ಮೂಲಕ ಜಿಬಿಎಗೆ ಹಸ್ತಾಂತರ ಮಾಡುವ ಪ್ರಕ್ರಿಯೆ ಆರಂಭ ಆಗಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
‘ನಾಲ್ಕು ನಗರ ಪಾಲಿಕೆಗಳಿಗೆ ಕಟ್ಟಡ ನಿರ್ಮಿಸಲು ಗುರುತಿಸಿರುವ ಸ್ಥಳಗಳನ್ನು ಜಿಬಿಎಗೆ ಹಸ್ತಾಂತರಿಸಿ, ಆಯಾ ನಗರ ಪಾಲಿಕೆಗಳ ಕಟ್ಟಡ ನಿರ್ಮಾಣಕ್ಕೆ ಕಾಯ್ದೆಯಂತೆ ಟೆಂಡರ್ ಕರೆದು, ಕಾರ್ಯಾದೇಶ ನೀಡಲು ಕನಿಷ್ಠ ಮೂರು ತಿಂಗಳು ಬೇಕಾಗುತ್ತದೆ. ಈ ಕಟ್ಟಡ ನಿರ್ಮಾಣ ಮಾಡಲು ಕನಿಷ್ಠ ಎರಡು ವರ್ಷಗಳ ಅಗತ್ಯವಿದೆ. ನಂತರ ಅವುಗಳಿಗೆ ಪೀಠೋಪಕರಣ ಹಾಗೂ ಅಗತ್ಯ ಉಪಕರಣಗಳನ್ನು ಅಳವಡಿಸಲು ಆರು ತಿಂಗಳಾದರೂ ಬೇಕು’ ಎಂದು ವಿವರಿಸಿದ್ದಾರೆ.
‘ಮೇಯರ್ ಕೊಠಡಿ, ಕೌನ್ಸಿಲ್ ಸಭಾಂಗಣ, ಅಧಿಕಾರಿಗಳ ಕಚೇರಿ ಕೊಠಡಿ, ಸ್ಥಾಯಿ ಸಮಿತಿಗಳಿಗೆ ಕೊಠಡಿಗಳು ಇರಬೇಕು. ಐದು ನಗರ ಪಾಲಿಕೆಗಳಿಗೆ ಎ ಶ್ರೇಣಿಯಿಂದ ಡಿ ಶ್ರೇಣಿಯವರೆಗೆ 6,350ಕ್ಕೂ ಹೆಚ್ಚು ಸಿಬ್ಬಂದಿ ಅಗತ್ಯವಿದೆ. ಈ ಮೂಲಸೌಕರ್ಯಗಳು ಸಿದ್ಧವಿರದೆ ನಗರ ಪಾಲಿಕೆಗಳಿಗೆ ಚುನಾವಣೆ ನಡೆಸಿದರೆ ಸಂಕಷ್ಟದ ಸರಮಾಲೆ ಎದುರಾಗಲಿದೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಅದನ್ನೆಲ್ಲ ಮುಚ್ಚಿಟ್ಟು, ಕಾರ್ಪೊರೇಟರ್ ಸ್ಥಾನದ ಆಕಾಂಕ್ಷಿಗಳು, ನಾಗರಿಕರಿಗೆ ಪಾಲಿಕೆ ಚುನಾವಣೆ ನಡೆಸುತ್ತೇವೆ ಎಂದು ಸರ್ಕಾರ ಹೇಳುತ್ತಿರುವುದು ಸರಿಯಲ್ಲ. ವಾಸ್ತವ ಚಿತ್ರಣವನ್ನು ಸರ್ಕಾರ, ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.