ಜಿಬಿಎ
ಬೆಂಗಳೂರು: ಐದು ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆಗೆ ವಾರ್ಡ್‌ವಾರು ಮತದಾರರ ಪಟ್ಟಿ ತಯಾರಿಸುವ ವೇಳಾಪಟ್ಟಿಯನ್ನು ಮತ್ತೆ ಪರಿಷ್ಕರಿಸಿರುವ ರಾಜ್ಯ ಚುನಾವಣಾ ಆಯೋಗ, ಮಾರ್ಚ್ 15ರ ಬದಲು ಮಾರ್ಚ್ 30ರಂದು ಮತದಾರ ಅಂತಿಮ ಪಟ್ಟಿ ಪ್ರಕಟಿಸಲು ನಿರ್ಧರಿಸಿದೆ.
ಈಗಾಗಲೇ ಚಾಲ್ತಿಯಲ್ಲಿರುವ ವಿಧಾನಸಭೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತೆಗೆದುಹಾಕಲು ಹಾಗೂ ಆಕ್ಷೇಪಣೆಗೆ ನಮೂನೆಗಳಿದ್ದು, ಗ್ರೇಟರ್ ಬೆಂಗಳೂರು ಆಡಳಿತ ಮತದಾರರ ನೋಂದಣಿ ನಿಯಮಗಳಿಗಿಂತ ಭಿನ್ನವಾಗಿವೆ. ಹೀಗಾಗಿ, ತತ್ಕಾಲದಲ್ಲಿ ಲಭ್ಯವಿರುವ ವಿಧಾನಸಭೆ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು, ನಗರ ಪಾಲಿಕೆಗಳಿಗೆ ವಾರ್ಡ್‌ವಾರು ಮತದಾರರ ಪಟ್ಟಿ ತಯಾರಿಸುವುದು ಸೂಕ್ತ ಎಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ (ಜ.19) ನಂತರ ನಡೆದ ಜಿಲ್ಲಾ ಚುನಾವಣಾಧಿಕಾರಿಗಳ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ರಾಜಕೀಯ ಪಕ್ಷಗಳ ಪ್ರತಿನಿಧಿಗಳೂ, ಜಿಬಿಎ ಅಧಿಕಾರಿಗಳ ಅಭಿಪ್ರಾಯದಂತೆ ‘ಗ್ರೇಟರ್ ಬೆಂಗಳೂರು ಆಡಳಿತ ನಿಯಮ– 2025ರ ನಿಯಮ 30 ಅನ್ನು ಯಥಾವತ್ತಾಗಿ ಅಳವಡಿಸಿಕೊಂಡು ವಾರ್ಡ್‌ವಾರು ಮತದಾರರ ಪಟ್ಟಿ ತಯಾರಿಸಲು ಪರಿಷ್ಕೃತ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ ಎಂದು ಚುನಾವಣಾ ಆಯೋಗದ ಸುತ್ತೋಲೆ ತಿಳಿಸಿದೆ.
ವೇಳಾಪಟ್ಟಿ: ಮತದಾರರ ಕರಡು ಪಟ್ಟಿಯಲ್ಲಿರುವ ಮತದಾರರನ್ನು ಜ.22ರಿಂದ 31ರವರೆಗೆ ಮತಗಟ್ಟೆ ಅಧಿಕಾರಿಗಳು ಗುರುತಿಸುವುದು. ಪುನರಾವರ್ತನೆ ಮತ್ತು ವಿಧಾನಸಭೆವಾರು ಮತದಾರರ ಪಟ್ಟಿಯೊಂದಿಗೆ ವಾರ್ಡ್‌ವಾರು ಮತದಾರರ ಪಟ್ಟಿಯನ್ನು ಫೆಬ್ರುವರಿ 1ರಿಂದ 9ರವರೆಗೆ ತಾಳೆ ಮಾಡುವುದು. ಫೆ.10ರಿಂದ 17ರವರೆಗೆ ಪೂರಕ ಪಟ್ಟಿ–1 ಸಿದ್ಧಪಡಿಸುವುದು, ಫೆಬ್ರುವರಿ 18ರಿಂದ 22ರವರೆಗೆ ಇ–ರೋಲ್ ತಯಾರಿಕೆ, ಫೆ.23ರಿಂದ ಫೆ.27ರವರೆಗೆ ಅಂತಿಮ ಚೆಕ್‌ಲಿಸ್ಟ್ ಮುದ್ರಣ, ಫೆ.28ರಿಂದ ಮಾರ್ಚ್ 4ರವರೆಗೆ ಚೆಕ್‌ಲಿಸ್ಟ್ ಪರಿಶೀಲನೆ, ಮಾರ್ಚ್ 5ರಿಂದ 9ರವರೆಗೆ ಸಾಫ್ಟ್‌ವೇರ್‌ನಲ್ಲಿ ಮ್ಯಾಟ್ರಿಕ್ಸ್ ಅಳವಡಿಕೆ, ಮಾರ್ಚ್ 12ರಿಂದ 16ರವರೆಗೆ ಇ–ರೋಲ್ ಮುದ್ರಣ, ಮಾರ್ಚ್ 17ರಿಂದ 29ರವರೆಗೆ ಅಂತಿಮ ಮತದಾರರ ಪಟ್ಟಿಯನ್ನು ಮುದ್ರಕರಿಂದ ಪಡೆಯುವುದು, ಮಾರ್ಚ್ 30ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸುವುದು.