ADVERTISEMENT

ಗ್ರೇಟರ್ ಬೆಂಗಳೂರು ಪ್ರಾಧಿಕಾರ: ನಿರೀಕ್ಷೆ, ಅನುಮಾನದ ನಡುವೆ ಚುನಾವಣಾ ತಯಾರಿ

ಆರ್. ಮಂಜುನಾಥ್
Published 13 ಜನವರಿ 2026, 0:12 IST
Last Updated 13 ಜನವರಿ 2026, 0:12 IST
<div class="paragraphs"><p>ಜಿಬಿಎ</p></div>

ಜಿಬಿಎ

   

ಬೆಂಗಳೂರು: ‘ಸುಪ್ರೀಂ ಕೋರ್ಟ್‌ ಗಡುವು ನೀಡಿರುವುದರಿಂದ ಈ ಬಾರಿ ಚುನಾವಣೆ ನಡೆದೇ ನಡೆಯುತ್ತದೆ.  ಐದು ವರ್ಷದ ಅಜ್ಞಾತವಾಸಕ್ಕೆ ತೆರೆ ಬೀಳಲಿದೆ’ ಎಂಬ ನಿರೀಕ್ಷೆ ಒಂದೆಡೆಯಾದರೆ,  ‘ವಾರ್ಡ್‌ ಗಡಿ– ಮೀಸಲಾತಿ ಸರಿ ಇದೆಯೇ? ಮತ್ತೇನಾದರೂ ತಡೆಯಾಗುತ್ತದೆಯೇ? ಎಂಬ ಅನುಮಾನ ಇನ್ನೊಂದೆಡೆ. ಇದೆಲ್ಲರ ನಡುವೆ ರಾಜಕೀಯ ಪಕ್ಷಗಳ ಕಾರ್ಯಕರ್ತರಲ್ಲಿ ಕಾರ್ಪೊರೇಟರ್‌ಗಳಾಗುವ ಕನಸು ಚಿಗುರೊಡೆಯುತ್ತಿದೆ.

ಐದು ವರ್ಷದಿಂದ ಚುನಾವಣೆಗಾಗಿ ಹಾತೊರೆಯುತ್ತಿರುವ ಬೆಂಗಳೂರಿನ ಸ್ಥಳೀಯ ಮಟ್ಟದ ಮುಖಂಡರಿಗೆ ಸುಪ್ರೀಂ ಕೋರ್ಟ್‌ ಆದೇಶ ಹೊಸ ಹುರುಪು ನೀಡಿದೆ. ಆದರೆ, ಇದೇ ಸಮಯದಲ್ಲಿ ಹಲವು ಅನುಮಾನ, ಗೊಂದಲಗಳೂ ಸೃಷ್ಟಿಯಾಗಿವೆ.

ADVERTISEMENT

2020ರ ಸೆಪ್ಟೆಂಬರ್ 10ರಂದು ಜನಪ್ರತಿನಿಧಿಗಳನ್ನು ಒಳಗೊಂಡ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೌನ್ಸಿಲ್‌ ಅವಧಿ ಮುಕ್ತಾಯಗೊಂಡಿತು. ಅಂದಿನಿಂದಲೂ, 198 ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತದೆ, 243 ವಾರ್ಡ್‌ಗಳಿಗೆ ಚುನಾವಣೆ ನಡೆಯುತ್ತದೆ, 225 ವಾರ್ಡ್‌‌ಗಳಿಗೆ ಚುನಾವಣೆ ನಡೆಯುತ್ತದೆ ಎಂಬ ನಿರೀಕ್ಷೆಯಲ್ಲೇ ಸ್ಥಳೀಯ ಮುಖಂಡರು ತಯಾರಿ ನಡೆಸುತ್ತಲೇ ಬಂದಿದ್ದರು. ಅಂತಹ ಸಮಯದಲ್ಲೇ, ಬಿಬಿಎಂಪಿಯೇ ಅಸ್ತಿತ್ವ ಕಳೆದುಕೊಂಡಿತು. ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ರಚನೆಯಾಗಿ ಅದರಡಿ, ಐದು ನಗರ ಪಾಲಿಕೆಗಳು ನಾಲ್ಕು ತಿಂಗಳ ಹಿಂದೆ ರಚನೆಯಾದವು.

ಐದು ನಗರ ಪಾಲಿಕೆಗಳಾದ್ದರಿಂದ, ಹಿಂದಿಗಿಂತ ಹೆಚ್ಚು ಜನರಿಗೆ ಕಾರ್ಪೊರೇಟರ್‌ಗಳಾಗುವ ಅವಕಾಶ ತೆರೆದುಕೊಂಡಿದೆ. 198ರ ಬದಲು 369 ಕಾರ್ಪೊರೇಟರ್‌ಗಳು ಆಯ್ಕೆಯಾಗಬಹುದಾದರೂ, ನಗರ ಪಾಲಿಕೆಗಳು ಬೇರೆಬೇರೆಯದ್ದಾಗಿರುತ್ತವೆ. ಆದರೂ ಸ್ಥಳೀಯ ಜನರ ಆಶೋತ್ತರಗಳಿಗೆ ಸ್ಪಂದಿಸಲು ಕಾರ್ಪೊರೇಟರ್‌ ಆಗಬೇಕೆಂಬ ಬಯಕೆಯಿಂದ ಎಲ್ಲ ಪಕ್ಷಗಳ ಮುಖಂಡರು ಸಜ್ಜಾಗಿದ್ದಾರೆ. 

198 ವಾರ್ಡ್‌ ಇದ್ದಾಗ ಅದಕ್ಕೆ ಅನುಗುಣವಾಗಿ ತಮ್ಮ ಕಾರ್ಯಕ್ಷೇತ್ರವನ್ನು ನಿಗದಿಪಡಿಸಿಕೊಂಡಿದ್ದ ಮುಖಂಡರು, ಆಗಾಗ್ಗೆ ಬದಲಾದ ವಾರ್ಡ್‌ಗಳ ಗಡಿಗೆ ಅನುಗುಣವಾಗಿ ತಮ್ಮ ಕೆಲಸದ ವ್ಯಾಪ್ತಿಯನ್ನೂ ಬದಲಿಸಿಕೊಂಡಿದ್ದಾರೆ. ಅಂತಿಮವಾಗಿ, ಐದು ನಗರ ಪಾಲಿಕೆಗಳ 369 ವಾರ್ಡ್‌ಗಳಲ್ಲಿ ಚುನಾವಣೆಗೆ ತಯಾರಿ ನಡೆಯುತ್ತಿದೆ. ವಾರ್ಡ್‌ಗಳ ಕರಡು ಮೀಸಲಾತಿ ಪ್ರಕಟವಾಗಿದ್ದು, ಜೂನ್‌ ಒಳಗೆ ಚುನಾವಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ಸೂಚಿಸಿದ ನಂತರವಂತೂ ನಿರೀಕ್ಷೆ, ಹುಮ್ಮಸ್ಸು ಹೆಚ್ಚಾಗಿದೆ. 

‘ವಾರ್ಡ್‌ ಮೀಡಲಾತಿಯಲ್ಲಿ ಹೆಚ್ಚು ಸಮಸ್ಯೆ ಎದುರಾಗಲಿದೆ’ ಎಂಬ ಅನುಮಾನ ಕಾಡುತ್ತಿದೆ ಎಂದು ಹಲವು ಮುಖಂಡರು ಹೇಳುತ್ತಿದ್ದಾರೆ. ‘ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆಗೆ (ಜಿಬಿಜಿಎ) ವಿರುದ್ಧವಾಗಿಯೇ ಮೀಸಲಾತಿ ಕರಡು ಹೊರಬಂದಿದೆ. ಇದು ಚುನಾವಣೆಗೆ ಅಡ್ಡಿಯಾಗಬಹುದು’ ಎಂದೂ ಆಂತಕ ವ್ಯಕ್ತಪಡಿಸುತ್ತಿದ್ದಾರೆ.

ಮಹಿಳೆ ಮೀಸಲಾತಿ: ಶೇ 50ಕ್ಕೆ, 6 ವಾರ್ಡ್‌ ಕಡಿಮೆ

ಐದು ನಗರ ಪಾಲಿಕೆಗಳ ಒಟ್ಟು ವಾರ್ಡ್‌ಗಳ ಸಂಖ್ಯೆ 369. ಇದರಲ್ಲಿ ಶೇ 50ರಷ್ಟು ಎಂದರೆ 184.5. ಅರ್ಧ ವಾರ್ಡ್‌ ಅನ್ನು ನೀಡಲು ಸಾಧ್ಯವಿಲ್ಲ. ಆದರೆ 184 ವಾರ್ಡ್‌ಗಳನ್ನು ಮಹಿಳೆಯರಿಗೆ ಮೀಸಲಿಡಬಹುದಾಗಿತ್ತು. 176 ವಾರ್ಡ್‌ಗಳನ್ನು ಮಾತ್ರ ಮಹಿಳೆಯರಿಗೆ ಮೀಸಲಿಟ್ಟು ವಂಚನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಐದು ನಗರ ಪಾಲಿಕೆಗಳಿಗೆ ಒಟ್ಟಾರೆ ಶೇ 50ರಷ್ಟು ಲೆಕ್ಕಾಚಾರ ಮಾಡಲು ಸಾಧ್ಯವಿಲ್ಲ. ಐದೂ ನಗರ ಪಾಲಿಕೆಗಳೂ ಬೇರೆ ಬೇರೆಯೇ ಎಂದು ಹೇಳಿದರೂ ಆಯಾ ನಗರ ಪಾಲಿಕೆಗಳಲ್ಲೂ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಸಿಕ್ಕಿಲ್ಲ ಎಂದು ಅಂಕಿ–ಅಂಶಗಳೇ ಹೇಳುತ್ತವೆ. ಕೇಂದ್ರ ನಗರ ಪಾಲಿಕೆಯಲ್ಲಿ ಮೂರು ಹಾಗೂ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ನಗರ ಪಾಲಿಕೆಗಳಲ್ಲಿ ತಲಾ ಎರಡು ವಾರ್ಡ್‌ಗಳಲ್ಲಿ ಮಹಿಳಾ ಮೀಸಲಾತಿ ಕಡಿಮೆಯಾಗಿದೆ. ಇದಲ್ಲದೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಬೇಕಾದ ವಾರ್ಡ್‌ಗಳ ಸಂಖ್ಯೆ ಕಡಿಮೆಯಾಗಿದೆ. ಹಿಂದುಳಿದ ವರ್ಗದಲ್ಲೂ ಅವರಿಗೆ ನಿಗದಿಯಾಗಿರುವ ಪ್ರಮಾಣ ಕಡಿಮೆಯಾಗಿದೆ ಎನ್ನಲಾಗಿದೆ.

‘ಮಹಿಳೆಯರಿಗೆ ಏಕೆ ವಂಚನೆ?’

‘ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿಯವರ ಆಶಯದಂತೆ ಮಹಿಳೆಯರಿಗೆ ಶೇ 50ರಷ್ಟು ಅಧಿಕಾರ ನೀಡುತ್ತೇವೆ ಎನ್ನುವ ಕಾಂಗ್ರೆಸ್‌ ಸರ್ಕಾರ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಮಾತು ತಪ್ಪಿದೆ. ಶೇ 50ರಷ್ಟು ವಾರ್ಡ್‌ಗಳನ್ನು ಮಹಿಳೆಯರಿಗೆ ಮೀಸಲಿಡದೆ ವಂಚನೆ ಮಾಡಿದೆ’ ಎಂದು ಬಿಬಿಎಂಪಿಯ ಮಾಜಿ ಆಡಳಿತ ಪಕ್ಷದ ನಾಯಕ ಬಿಜೆಪಿಯ ಪದ್ಮನಾಭರೆಡ್ಡಿ ದೂರಿದರು. ‘ಜಿಬಿಜಿಎಯ ಪ್ರಕರಣ 29ರ ಅಂಶ ನಾಲ್ಕರ ಪ್ರಕಾರ ಎಲ್ಲ ವರ್ಗಗಳಲ್ಲೂ ಮಹಿಳೆಯರಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸಿ ನಗರ ಪಾಲಿಕೆಗಳಿಗೆ ನೇರವಾಗಿ ಆಯ್ಕೆಯಾಗಬೇಕು’ ಎಂದು ಹೇಳಲಾಗಿದೆ. ಆದರೆ ಅದನ್ನು ಮೀರಿ ಮೀಸಲಾತಿ ಕರಡು ಹೊರಡಿಸಲಾಗಿದೆ’ ಎಂದರು. ‘ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ 99 ವಾರ್ಡ್‌ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಇತ್ತು. ಅಲ್ಲದೆ ಸಾಮಾನ್ಯ ವಾರ್ಡ್‌ಗಳಲ್ಲೂ ಮಹಿಳೆಯರು ಗೆಲುವು ಸಾಧಿಸಿದ್ದರು’ ಎಂದು ತಿಳಿಸಿದರು.

‘ಎಲ್ಲವನ್ನೂ ಸರಿಪಡಿಸಿ ಚುನಾವಣೆ ಮಾಡಿ’

‘ಕಾರ್ಪೊರೇಟರ್‌ಗಳಿಲ್ಲದೆ ಐದು ವರ್ಷ ಮುಗಿದಿದೆ. ಎಲ್ಲ ಸರ್ಕಾರಗಳಿಂದಲೂ ತೀವ್ರ ವಿಳಂಬವಾಗಿದೆ. ಈಗಲಾದರೂ ನಗರ ಪಾಲಿಕೆಗಳಿಗೆ ಚುನಾವಣೆ ನಡೆಸಬೇಕು. ಸ್ಥಳೀಯವಾಗಿ ಜನರ ಸಮಸ್ಯೆಗಳನ್ನು ಪರಿಹರಿಸಲು ಮುಖಂಡರೆಲ್ಲ ಸಾಕಷ್ಟು ಕೆಲಸ ಮಾಡಿದ್ಧಾರೆ. ಆದರೆ ಅವರಿಗೆ ಅಧಿಕಾರ ಇಲ್ಲ. ಅಧಿಕಾರಿಗಳು ಮಾತು ಕೇಳುವುದಿಲ್ಲ. ಕಾರ್ಪೊರೇಟರ್‌ ಆದವರ ಮನೆಗೆ ಜನರು ನಿತ್ಯವೂ ಬಂದು ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ನಾವೂ ಸಾಧ್ಯವಾದಷ್ಟು ಪರಿಹಾರ ನೀಡುತ್ತಿದ್ದೇವೆ. ಜನಪ್ರತಿನಿಧಿಗಳ ಕೌನ್ಸಿಲ್‌ ಇದ್ದರೆ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬಹುದು. ಏನೆಲ್ಲ ಸಮಸ್ಯೆ ಗೊಂದಲಗಳಿವೆಯೋ ಅವೆಲ್ಲವನ್ನೂ ಈಗಲಾದರೂ ಸರ್ಕಾರ ಪರಿಹರಿಸಿ ಚುನಾವಣೆ ನಡೆಸಲಿ’ ಎಂದು  ಬಿಬಿಎಂಪಿಯ ಮಾಜಿ ಆಡಳಿತ ಪಕ್ಷದ ನಾಯಕ ಕಾಂಗ್ರೆಸ್‌ನ ಎನ್‌. ನಾಗರಾಜು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.