ಬೆಂಗಳೂರು ನಗರ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ನಗರ ಪಾಲಿಕೆಗಳಿಗೆ ಐಎಎಸ್, ಕೆಎಎಸ್ ಮತ್ತು ಐಪಿಎಸ್, ಕೆಎಸ್‌ಪಿಎಸ್ ಹುದ್ದೆಗಳನ್ನು ಹಂಚಿಕೆ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಮುಖ್ಯ ಆಯುಕ್ತರ ಒಂದು ಹುದ್ದೆ ಇರಲಿದ್ದು ಪ್ರಧಾನ ಕಾರ್ಯದರ್ಶಿ ಅಥವಾ ಅದಕ್ಕಿಂತ ಉನ್ನತ ಶ್ರೇಣಿ ಹೊಂದಿದವರಾಗಿರಬೇಕು. ಆಡಳಿತ, ಕಂದಾಯ ಮತ್ತು ಮಾಹಿತಿ ತಂತ್ರಜ್ಞಾನ ವಿಶೇಷ ಆಯುಕ್ತ, ಆರೋಗ್ಯ ಮತ್ತು ಶಿಕ್ಷಣ ವಿಶೇಷ ಆಯುಕ್ತ, ಚುನಾವಣೆ, ವಿಪತ್ತು ನಿರ್ವಹಣೆ, ಸಾರ್ವಜನಿಕ ಸಂಪರ್ಕ ವಿಶೇಷ ಆಯುಕ್ತ, ಹಣಕಾಸು ಮುಖ್ಯ ಆಯುಕ್ತ ಹುದ್ದೆಗೆ ಐಎಎಸ್ ಅಧಿಕಾರಿಗಳು ಇರಲಿದ್ದಾರೆ. ಒಂದು ಎಡಿಜಿಪಿ, ಒಂದು ಎಸ್‌ಪಿ ಹುದ್ದೆ ಇರಲಿದೆ.
ಬೆಂಗಳೂರು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ನಗರ ಪಾಲಿಕೆಗಳಿಗೆ ಕಾರ್ಯದರ್ಶಿ ಶ್ರೇಣಿಯ ಐಎಎಸ್ ಅಧಿಕಾರಿಗಳು ಆಯುಕ್ತರಾಗಲಿದ್ದಾರೆ. ಹಿರಿಯ ಐಎಎಸ್ ಅಧಿಕಾರಿಗಳು ಹೆಚ್ಚುವರಿ ಆಯುಕ್ತರಾಗಲಿದ್ದಾರೆ.
ಈ ಐದು ನಗರಪಾಲಿಕೆಗಳಿಗೆ ಕೆಎಎಸ್ ಶ್ರೇಣಿಯ ಹೆಚ್ಚುವರಿ ಆಯುಕ್ತರು ತಲಾ ಒಬ್ಬರಂತೆ ಇರುವರು. ಹಿರಿಯ ಶ್ರೇಣಿಯ ಅಧಿಕಾರಿಗಳು ತಲಾ ಇಬ್ಬರಂತೆ ವಲಯ ಜಂಟಿ ಆಯುಕ್ತರಾಗಿರುವರು. ಒಂದು ಡಿವೈಎಸ್‌ಪಿ ಹುದ್ದೆ ಇರಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹಾಲಿ ವಾರ್ಡ್‌ಗಳ ಮುಂದುವರಿಕೆ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 198 ವಾರ್ಡ್‌ಗಳ ಆಧಾರದಲ್ಲಿಯೇ ಕಾರ್ಯನಿರ್ವಹಿಸುತ್ತಿವೆ. ಗ್ರೇಟರ್ ಬೆಂಗಳೂರು ಪ್ರದೇಶದಲ್ಲಿ ಹೊಸದಾಗಿ 5 ನಗರ ಪಾಲಿಕೆಗಳನ್ನು ಸರ್ಕಾರ ಅಧಿಸೂಚಿಸಿದರೂ, ಹಾಲಿ ಇರುವ ವಾರ್ಡ್‌ಗಳೇ ಮುಂದುವರಿಯಲಿವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ.
ಹೊಸ ನಗರ ಪಾಲಿಕೆಗಳ ಕಾರ್ಯಾಚರಣೆಗೆ ಅಗತ್ಯವಿರುವ ಸಿಬ್ಬಂದಿ ಹಾಗೂ ಆಡಳಿತ ವೆಚ್ಚವನ್ನು ಗುರುತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆಯಡಿಯಲ್ಲಿ, 5 ನಗರ ಪಾಲಿಕೆಗಳ ಅಧಿಸೂಚನೆಯ ನಂತರ ಸರ್ಕಾರವು ವಾರ್ಡ್‌ಗಳ ಮರುವಿಂಗಡಣೆ ಆಯೋಗವನ್ನು ರಚಿಸಲಿದೆ. ಆ ಆಯೋಗವು ಪ್ರತಿ ನಗರ ಪಾಲಿಕೆಯ ವಾರ್ಡ್‌ಗಳ ಸಂಖ್ಯೆ, ಗಡಿಗಳನ್ನು ನಿರ್ಧರಿಸಲಿದೆ. ಅಲ್ಲಿಯವರೆಗೆ ಈಗಿರುವ ವಾರ್ಡ್‌ಗಳೇ ಮುಂದುವರಿಯಲಿವೆ. ಸಾರ್ವಜನಿಕರು ಊಹಾಪೋಹಕ್ಕೆ ಕಿವಿಕೊಡಬಾರದು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.