
ಬೆಂಗಳೂರು: ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದೆ ಇರುವುದರಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ, ಬಿಎಂಟಿಸಿ, ಬಿಎಂಆರ್‌ಸಿಎಲ್, ಪೊಲೀಸ್ ಇಲಾಖೆಯ ಆಸ್ತಿಗಳನ್ನು ಹರಾಜು ಹಾಕಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸಜ್ಜಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಇಲಾಖೆಗಳು ಕೋಟ್ಯಂತರ ರೂಪಾಯಿ ಆಸ್ತಿ ತೆರಿಗೆಯನ್ನು ಬಾಕಿ ಉಳಿಸಿಕೊಂಡಿದ್ದು, ಅವುಗಳ ಹರಾಜಿಗೆ ಮೊದಲ ಬಾರಿಗೆ ಜಿಬಿಎ ನೋಟಿಸ್ ಜಾರಿ ಮಾಡಿದೆ. ಇವುಗಳ ಜೊತೆಗೆ, ರಿಯಲ್ ಎಸ್ಟೇಟ್, ಶಾಲಾ–ಕಾಲೇಜು, ಹೋಟೆಲ್, ಐಟಿ–ಬಿಟಿ ಕಂಪನಿಗಳು ಸೇರಿದಂತೆ ನಾಗರಿಕರ ಆಸ್ತಿಗಳನ್ನೂ ಹರಾಜು ಮಾಡಲಿದೆ.
ಜಿಬಿಎ ವ್ಯಾಪ್ತಿಯಲ್ಲಿ ಏಳು ಸಾವಿರಕ್ಕೂ ಹೆಚ್ಚು ಆಸ್ತಿಗಳಿಂದ ₹437 ಕೋಟಿ ತೆರಿಗೆ ಹಲವು ವರ್ಷಗಳಿಂದ ಬಾಕಿ ಇದೆ. ಇದನ್ನು ವಸೂಲಿ ಮಾಡಲು ಆ ಆಸ್ತಿಗಳನ್ನು ಹರಾಜು ಮಾಡಲು ನಿರ್ಧರಿಸಲಾಗಿದೆ. ಎಲ್ಲ ಸುಸ್ತಿದಾರರಿಗೆ ಹರಾಜು ನೋಟಿಸ್ ಜಾರಿ ಮಾಡಿದ್ದು, ಆಯಾ ನಗರ ಪಾಲಿಕೆಗಳ ಕಂದಾಯ ಅಧಿಕಾರಿ, ಜಂಟಿ ಆಯುಕ್ತ, ವಲಯ ಉಪ ಆಯುಕ್ತರಿಗೆ ಫೆ.17ರಂದು ಹರಾಜು ಪ್ರಕ್ರಿಯೆ ನಡೆಸುವಂತೆ ಸೂಚಿಸಲಾಗಿದೆ.
ಕಳೆದ ವರ್ಷವೂ ಪ್ರಕ್ರಿಯೆ: ತೆರಿಗೆ ಬಾಕಿ ಉಳಿಸಿಕೊಂಡ ಆಸ್ತಿಗಳನ್ನು ಹರಾಜು ಮಾಡುವ ಪ್ರಕ್ರಿಯೆ 2025ರ ಫೆಬ್ರುವರಿಯಲ್ಲೂ ನಡೆದಿತ್ತು. ಆಗಿನ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ 608 ಆಸ್ತಿಗಳನ್ನು ಹರಾಜು ಮಾಡಿ ₹30 ಕೋಟಿ ತೆರಿಗೆಯನ್ನು ಸಂಗ್ರಹಿಸುವ ಗುರಿ ಹೊಂದಲಾಗಿತ್ತು. ಆ ಸಂದರ್ಭದಲ್ಲಿ ಬಹುತೇಕರು ಆಸ್ತಿ ತೆರಿಗೆಯನ್ನು ಪಾವತಿಸಿದ್ದರಿಂದ ಹರಾಜು ಪ್ರಕ್ರಿಯೆ ನಿಲ್ಲಿಸಲಾಗಿತ್ತು.
‘ಬಿಬಿಎಂಪಿ ವ್ಯಾಪ್ತಿಯಲ್ಲಿ ₹2 ಲಕ್ಷಕ್ಕಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಂದ ಸುಮಾರು ₹390 ಕೋಟಿ ಪಾವತಿಯಾಗಬೇಕಿದೆ. ಹರಾಜಿನಂತಹ ಬಲವಂತದ ವಸೂಲಾತಿ ಕ್ರಮವನ್ನು ತಪ್ಪಿಸಲು ಆಸ್ತಿ ತೆರಿಗೆದಾರರು ಬಾಕಿ ಪಾವತಿಸಬೇಕು’ ಎಂದು ಮುನೀಶ್ ಮೌದ್ಗಿಲ್ ಆಗ ಹೇಳಿದ್ದರು. ಈಗ, ಏಳು ಸಾವಿರ ಆಸ್ತಿಗಳನ್ನು ಗುರುತಿಸಿ ಹರಾಜು ಪ್ರಕ್ರಿಯೆ ನಡೆಸಲು ಮುನೀಶ್ ಮೌದ್ಗಿಲ್ ಅವರೇ ಸೂಚಿಸಿದ್ದಾರೆ.
ಬಾಕಿ ಉಳಿಸಿಕೊಂಡಿರುವ ಪ್ರಮುಖ ಸಂಸ್ಥೆಗಳು
* ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)
* ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್)
* ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿ
* ಪೊಲೀಸ್ ಕ್ವಾಟ್ರಸ್, ಶಾಂತಿನಗರ
* ಉಪ ಪೊಲೀಸ್ ಆಯುಕ್ತರ ಕಚೇರಿ– ಉತ್ತರ, ಯಲಹಂಕ
* ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಇಲಾಖೆ, ರಾಜರಾಜೇಶ್ವರಿನಗರ
* ಅಗ್ನಿಶಾಮಕ ಮತ್ತು ಗೃಹರಕ್ಷಕ ಇಲಾಖೆ, ಮಲ್ಲೇಶ್ವರ
* ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಅಪಾರ್ಟ್‌ಮೆಂಟ್, ಯಲಹಂಕ
* ಕಿರ್ಲೊಸ್ಕರ್ ಸಿಸ್ಟಮ್ಸ್, ಬ್ಯಾಟರಾಯನಪುರ
* ಕರ್ನಾಟಕ ವಕ್ಫ್ ಮಂಡಳಿ, ಎಸ್‌ಆರ್‌ಟಿ ರಸ್ತೆ, ಗಾಂಧಿನಗರ
* ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಶೇಷಾದ್ರಿ ರಸ್ತೆ
* ಪಿಯು ಬೋರ್ಡ್, ಮಲ್ಲೇಶ್ವರ
* ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್, 4ನೇ ಬ್ಲಾಕ್, ಜಯನಗರ
* ಗುಂಡಾಂಜನೇಯ ಸ್ವಾಮಿ ದೇವಸ್ಥಾನ, ಬ್ಯಾಟರಾಯನಪುರ
ರಾಷ್ಟ್ರಪತಿ, ರಾಜ್ಯಪಾಲರ ಹೆಸರಿನಲ್ಲಿರುವ ಆಸ್ತಿಗಳ ಹರಾಜಿಗೂ ನಿರ್ಧಾರ
ಮಲ್ಲೇಶ್ವರದ 11ನೇ ಅಡ್ಡರಸ್ತೆಯಲ್ಲಿರುವ ಬಾಹ್ಯಾಕಾಶ ಇಲಾಖೆ ಆಸ್ತಿಯ ₹11.38 ಲಕ್ಷ ತೆರಿಗೆ ಬಾಕಿ ಇದೆ. ಈ ಆಸ್ತಿ ರಾಷ್ಟ್ರಪತಿಯವರ ಹೆಸರಿನಲ್ಲಿದ್ದು, ಇದನ್ನು ಹರಾಜು ಹಾಕಲು ಅವರ ಹೆಸರಿನಲ್ಲೇ ನೋಟಿಸ್ ಜಾರಿ ಮಾಡಲಾಗಿದೆ. ಈ ಆಸ್ತಿಯ ಸರ್ಕಾರಿ ಮೌಲ್ಯ ₹16.96 ಕೋಟಿ.
ಮಲ್ಲೇಶ್ವರದ 3ನೇ ಅಡ್ಡರಸ್ತೆಯಲ್ಲಿರುವ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕಚೇರಿಯಿರುವ ಆಸ್ತಿಯ ತೆರಿಗೆ ₹44.55 ಲಕ್ಷ ಬಾಕಿ ಇದ್ದು, ₹32.66 ಕೋಟಿ ಮೌಲ್ಯದ ಆ ಆಸ್ತಿಯನ್ನು ಹರಾಜು ಮಾಡಲಾಗುತ್ತಿದೆ. ಇದು ಕರ್ನಾಟಕದ ರಾಜ್ಯಪಾಲರ ಹೆಸರಿನಲ್ಲಿದ್ದು, ಅವರ ಹೆಸರಿಗೇ ಹರಾಜು ನೋಟಿಸ್ ಜಾರಿಯಾಗಿದೆ. ಬೊಮ್ಮನಹಳ್ಳಿಯಲ್ಲಿರುವ ಸರ್ವೆ ಆಫ್ ಇಂಡಿಯಾದ ಆಸ್ತಿಯ ತೆರಿಗೆ ₹23.51 ಲಕ್ಷ ಬಾಕಿ ಇದ್ದು, ಆಸ್ತಿಯನ್ನು ಹರಾಜು ಹಾಕಲು ಜಿಬಿಎ ನಿರ್ಧರಿಸಿದೆ.
ಹರಾಜು ಅಂತಿಮ ಹೆಜ್ಜೆ: ಮೌದ್ಗಿಲ್
‘ಆಸ್ತಿ ತೆರಿಗೆ ಪಾವತಿಸಲು ಆಸ್ತಿ ಮಾಲೀಕರಿಗೆ ಸಾಕಷ್ಟು ಎಚ್ಚರಿಕೆ ನೀಡಲಾಗಿದೆ. ಡಿಮ್ಯಾಂಡ್ ನೋಟಿಸ್, ಜಪ್ತಿ ಆದೇಶ, ಹಲವು ತಿಂಗಳಿಂದ ಪ್ರತಿದಿನ ಎಸ್‌ಎಂಎಸ್ ಕಳುಹಿಸಲಾಗಿದೆ. ಈ ನೋಟಿಸ್‌ಗಳ ವಿರುದ್ಧ ಆನ್‌ಲೈನ್‌ನಲ್ಲಿ (BBMP e-Nyaya) ಮೇಲ್ಮನವಿ ಸಲ್ಲಿಸಲೂ ಅವಕಾಶ ನೀಡಲಾಗಿತ್ತು. ಅದಕ್ಕೆ ಸ್ಪಂದಿಸದ ಮಾಲೀಕರ ಆಸ್ತಿಗಳನ್ನು ಹರಾಜು ಮಾಡಲು ಅಂತಿಮ ಹೆಜ್ಜೆ ಇರಿಸಲಾಗಿದೆ’ ಎಂದು ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು.
ಹರಾಜು ಪ್ರಕ್ರಿಯೆಯನ್ನು ತಪ್ಪಿಸಿಕೊಳ್ಳಬೇಕಾದರೆ, ಮಾಲೀಕರು ಕೂಡಲೇ ತೆರಿಗೆ ಪಾವತಿಸಿ, ಅದರ ಪ್ರತಿಯನ್ನು ಸ್ಥಳೀಯ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ತಲುಪಿಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.