ADVERTISEMENT

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ: ಮತದಾರರ ಪಟ್ಟಿ ತಯಾರಿಗೆ ವೇಳಾಪಟ್ಟಿ

ಐದು ನಗರ ಪಾಲಿಕೆಗಳ ವಾರ್ಡ್‌ವಾರು ಮತಪಟ್ಟಿ ತಯಾರಿಸಲು ಚುನಾವಣಾ ಆಯೋಗ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 23:30 IST
Last Updated 27 ಅಕ್ಟೋಬರ್ 2025, 23:30 IST
   

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆಗೆ ವಾರ್ಡ್‌ವಾರು ಮತದಾರರ ಪಟ್ಟಿ ತಯಾರಿಸುವ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ.

ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆ–2024ರ ಸೆಕ್ಷನ್‌ 35ರಂತೆ ಐದು ನಗರ ಪಾಲಿಕೆಗಳ ಮತದಾರರ ಪಟ್ಟಿ ತಯಾರಿಸಲು ಸೋಮವಾರ ಆದೇಶ ಹೊರಡಿಸಲಾಗಿದೆ.

ನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದ ಎಲ್ಲ ಕರ್ತವ್ಯಗಳನ್ನು ನಿರ್ವಹಿಸಲು ಜಿಬಿಎ ಮುಖ್ಯ ಆಯುಕ್ತರನ್ನು ಜಿಲ್ಲಾ ಚುನಾವಣಾಧಿಕಾರಿಯಾಗಿ ಹಾಗೂ ನಗರ ಪಾಲಿಕೆಗಳ ಆಯುಕ್ತರನ್ನು ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಗಳನ್ನಾಗಿ ನೇಮಿಸಿ ಅ.13ರಂದು ಅಧಿಸೂಚಿಸಲಾಗಿತ್ತು.

ADVERTISEMENT

ವಾರ್ಡ್‌ವಾರು ಮತದಾರರ ಪಟ್ಟಿ ತಯಾರಿಸಲು ಮತದಾರರ ನೋಂದಣಾಧಿಕಾರಿ (ಎಆರ್‌ಒ), ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು(ಎಇಆರ್‌ಒ) ನೇಮಕ ಮಾಡಬೇಕಿದ್ದು, ಅದನ್ನು ಜಿಲ್ಲಾ ಚುನಾವಣಾಧಿಕಾರಿಗಳು ನಿರ್ವಹಿಸಬೇಕು ಎಂದು ತಿಳಿಸಲಾಗಿದೆ.

ಬೆಂಗಳೂರು ಕೇಂದ್ರ, ದಕ್ಷಿಣ, ಉತ್ತರ, ಪೂರ್ವ ಮತ್ತು ಪಶ್ಚಿಮ ನಗರ ಪಾಲಿಕೆಗಳ ಒಟ್ಟು 368 ವಾರ್ಡ್‌ವಾರು ಮತದಾರರ ಪಟ್ಟಿಯನ್ನು ಜಿಬಿಎ ನಿಯಮ–2025ರಂತೆ ವಿಧಾನಸಭೆ ಕ್ಷೇತ್ರದ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ತಯಾರಿಸಬೇಕು.

2025ರ ಜನವರಿ 1ರಂದು ಪ್ರಕಟವಾಗಿರುವ ವಿಧಾನಸಭೆ ಕ್ಷೇತ್ರಗಳ ಮೂಲ ಮತದಾರರ ಪಟ್ಟಿ, ನಂತರ ಪ್ರಕಟವಾಗಿರುವ ಪೂರಕ ಪಟ್ಟಿಯನ್ನು ಅಳವಡಿಸಿಕೊಂಡು, ವಾರ್ಡ್‌ವಾರು ಮತದಾರರ ಕರಡು ಪಟ್ಟಿ ತಯಾರಿಸಬೇಕು. ವಾರ್ಡ್‌ ವ್ಯಾಪ್ತಿಯಲ್ಲಿ ವಿಭಜನೆಯಾಗಿರುವ ವಿಧಾನಸಭೆ ಕ್ಷೇತ್ರದ ಮತದಾರರ ಪಟ್ಟಿಯ ಭಾಗಗಳನ್ನು ಹಾಗೆಯೇ ಉಳಿಸಿಕೊಂಡು ವಾರ್ಡಿನ ಮತದಾರರ ಪಟ್ಟಿಯನ್ನು ತಯಾರಿಸಬೇಕು.

ಮತದಾರರ ಪಟ್ಟಿಯ ಪ್ರತಿ ಭಾಗದಲ್ಲಿ, ಅಂದರೆ ಪ್ರತಿ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆ ಗರಿಷ್ಠ 1,500 ಮೀರದಂತೆ ಎಚ್ಚರ ವಹಿಸಬೇಕು. ಮತದಾರರ ಪಟ್ಟಿಗೆ ಬರುವ ಆಕ್ಷೇಪಣೆಗಳನ್ನು ನಿಯಮಾನುಸಾರ ಇತ್ಯರ್ಥಪಡಿಸಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಫೆಬ್ರುವರಿಯಲ್ಲಿ ಚುನಾವಣೆ: ಜಿಬಿಎ ಐದು ನಗರ ಪಾಲಿಕೆಗಳ ಚುನಾವಣೆಗೆ ಮತದಾರರ ಪಟ್ಟಿಗಳನ್ನು ಸಿದ್ಧಪಡಿಸಲು ವಾರ್ಡ್‌ ಮರುವಿಂಗಡಣೆ ಅಂತಿಮಗೊಳಿಸಲು ಸಮಯ ನಿಗದಿ ಮಾಡಿರುವ ಕಾರ್ಯಸೂಚಿಗೆ ಅ.10ರಂದು ನಡೆದಿದ್ದ ಜಿಬಿಎ ಮೊದಲ ಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ಅದರಂತೆ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ನವೆಂಬರ್‌ ಆರಂಭದೊಳಗೆ ನಗರ ಪಾಲಿಕೆಗಳ ವಾರ್ಡ್‌ ಮರು ವಿಂಗಡಣೆ ಅಂತಿಮ ಅಧಿಸೂಚನೆಯಾಗಲಿದೆ. ನವೆಂಬರ್‌ 30ರಂದು ರಾಜ್ಯ ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ತಯಾರಿಕೆಯನ್ನು ಆರಂಭಿಸುತ್ತದೆ.

2026ರ ಫೆಬ್ರುವರಿ ಮಧ್ಯಭಾಗದಲ್ಲಿ ರಾಜ್ಯ ಚುನಾವಣಾ ಆಯೋಗ ನಗರ ಪಾಲಿಕೆಗಳ ಚುನಾವಣೆಗೆ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ ಎಂದು ಜಿಬಿಎ ಮೊದಲ ಸಭೆಯ ಕಾರ್ಯಸೂಚಿಯಲ್ಲಿ ನಮೂದಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.