ADVERTISEMENT

Greater Bengaluru | ಪಾಲಿಕೆ: ಮತದಾರರ ಪಟ್ಟಿ ತಯಾರಿಸುವ ಅವಧಿ ವಿಸ್ತರಣೆ

ರಾಜ್ಯ ಚುನಾವಣಾ ಆಯೋಗದಿಂದ ವೇಳಾಪಟ್ಟಿ ಪರಿಷ್ಕರಣೆ; ಮಾರ್ಚ್‌ 16ಕ್ಕೆ ಮತದಾರರ ಪಟ್ಟಿ ಅಂತಿಮ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 23:48 IST
Last Updated 18 ಡಿಸೆಂಬರ್ 2025, 23:48 IST
<div class="paragraphs"><p>ಗ್ರೇಟರ್ ಬೆಂಗಳೂರು</p></div>

ಗ್ರೇಟರ್ ಬೆಂಗಳೂರು

   

ಬೆಂಗಳೂರು: ಐದು ನಗರ ಪಾಲಿಕೆಗಳ ಸಾರ್ವತ್ರಿಕ ಚುನಾವಣೆಗೆ ವಾರ್ಡ್‌ವಾರು ಮತದಾರರ ಪಟ್ಟಿ ತಯಾರಿಸುವ ವೇಳಾಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಒಂದೂವರೆ ತಿಂಗಳು ವಿಸ್ತರಿಸಿದೆ.

ರಾಜ್ಯ ಚುನಾವಣಾ ಆಯೋಗ 2025ರ ಅಕ್ಟೋಬರ್‌ 27ರಂದು ಪ್ರಕಟಿಸಿದ್ದ ವೇಳಾಪಟ್ಟಿ ಪ್ರಕಾರ, 2026ರ ಜನವರಿ 29ರಂದು ವಾರ್ಡ್‌ವಾರು ಮತದಾರರ ಅಂತಿಮ ಪಟ್ಟಿ ಪ್ರಕಟವಾಗಬೇಕಿತ್ತು. ಇದರ ಪ್ರಕ್ರಿಯೆಗಳ ನಡೆಯುತ್ತಿದ ಸಂದರ್ಭದಲ್ಲೇ, ವೇಳಾಪಟ್ಟಿಯನ್ನು ಪರಿಷ್ಕರಿಸಿರುವ ಆಯೋಗ, 2026ರ ಮಾರ್ಚ್‌ 16ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಹೇಳಿದೆ.

ADVERTISEMENT

369 ವಾರ್ಡ್‌ಗಳ ಮತದಾರರ ಪಟ್ಟಿ ಹಿಂದಿನ ವೇಳಾಪಟ್ಟಿಯಂತೆಯೇ ಅಂತಿಮವಾಗಿದ್ದರೆ, ಫೆಬ್ರುವರಿ ಅಥವಾ ಮಾರ್ಚ್‌ನಲ್ಲಿ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಯುತ್ತಿತ್ತು. ವೇಳಾಪಟ್ಟಿ ಒಂದೂವರೆ ತಿಂಗಳು ವಿಸ್ತರಣೆಯಾಗಿರುವುದರಿಂದ, ಏಪ್ರಿಲ್‌ ಅಂತ್ಯ ಅಥವಾ ಮೇ ಮೊದಲ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಯಾವುದಾದರೂ ಪ್ರಮುಖ ಪರೀಕ್ಷೆಗಳು ಈ ಸಂದರ್ಭದಲ್ಲಿದ್ದರೆ ಚುನಾವಣೆ ಮತ್ತೆ ಮುಂದೆ ಹೋಗುವ ಸಾಧ್ಯತೆ ಇದೆ.

ವಾರ್ಡ್‌ಗಳ ಮತದಾರರ ಅಂತಮ ಪಟ್ಟಿ ಸಿದ್ಧಗೊಂಡು, ವಾರ್ಡ್‌ವಾರು ಮೀಸಲಾತಿಯೂ ಅಂತಿಮಗೊಳಿಸಿ ಸರ್ಕಾರ ನೀಡಿದರೆ, ಒಂದು ವಾರದ ನಂತರ ಚುನಾವಣೆಯ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ. ಅದಾದ 45 ದಿನಗಳಲ್ಲಿ ಚುನಾವಣೆ ಪ್ರಕ್ರಿಯೆ ಮುಗಿಯಲಿವೆ ಎಂದು ಚುನಾವಣೆ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದರು.

ವಾರ್ಡ್ ಹೆಸರು ಬದಲು

ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವಾರ್ಡ್‌ 19ರ ಹೆಸರನ್ನು ಬಿಟಿಎಂ ಲೇಔಟ್‌ನಿಂದ ತಾವರೆಕೆರೆ ಎಂದು ಬದಲಾಯಿಸಿ ನಗರಾಭಿವೃದ್ಧಿ ಇಲಾಖೆ ಡಿ.18ರಂದು ಅಧಿಸೂಚನೆ ಹೊರಡಿಸಿದೆ.

ಐದು ನಗರ ಪಾಲಿಕೆಗಳಲ್ಲಿ 369 ವಾರ್ಡ್‌ಗಳನ್ನು ಅಂತಿಮಗೊಳಿಸಿ ನವೆಂಬರ್‌ 19ರಂದು ನಗರಾಭಿವೃದ್ಧಿ ಇಲಾಖೆ ಅಂತಿಮ ಅಧಿಸೂಚನೆ ಹೊರಡಿಸಿತ್ತು. 20 ವಾರ್ಡ್‌ಗಳ ಗಡಿ ಮತ್ತು ಹೆಸರು ಬದಲಾಯಿಸಿ ಡಿ.3ರಂದು ಅಧಿಸೂಚಿಸಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.