ADVERTISEMENT

ಶುಭಾಶಯದ ಫ್ಲೆಕ್ಸ್: ತೆರವಿಗೆ ಬಿಬಿಎಂಪಿ ಹಿಂದೇಟು

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 15:39 IST
Last Updated 28 ಮಾರ್ಚ್ 2025, 15:39 IST
ವಿಜಯನಗರ– ಹೊಸಹಳ್ಳಿಯಲ್ಲಿ ಅಳವಡಿಸಲಾಗಿರುವ ಶುಭಾಶಯದ ಫ್ಲೆಕ್ಸ್‌
ವಿಜಯನಗರ– ಹೊಸಹಳ್ಳಿಯಲ್ಲಿ ಅಳವಡಿಸಲಾಗಿರುವ ಶುಭಾಶಯದ ಫ್ಲೆಕ್ಸ್‌   

ಬೆಂಗಳೂರು: ನಗರದ ಹಲವೆಡೆ ಯುಗಾದಿ ಹಾಗೂ ರಂಜಾನ್‌ಗೆ ಶುಭಕೋರುವ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಸಚಿವರು, ಶಾಸಕರ ಹೆಸರಿನಲ್ಲಿರುವ ಈ ಫ್ಲೆಕ್ಸ್‌ಗಳನ್ನು ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳು ಹಿಂಜರಿಯುತ್ತಿದ್ದಾರೆ.

ಅರಮನೆ ಮೈದಾನದಲ್ಲಿ ಯುವ ಕಾಂಗ್ರೆಸ್‌ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆದ ಸಂದರ್ಭದಲ್ಲಿ ಬಳ್ಳಾರಿ ರಸ್ತೆಯುದ್ದಕ್ಕೂ ಫ್ಲೆಕ್ಸ್, ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಅದನ್ನು ಕಂಡಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಎಲ್ಲವನ್ನೂ ತೆರವುಗೊಳಿಸಿ, ದಂಡ ಹಾಕಿ ಎಫ್‌ಐಆರ್‌ ದಾಖಲಿಸಲು ಸೂಚಿಸಿದ್ದರು. ಅದರಂತೆ 12 ಎಫ್‌ಐಆರ್‌ ದಾಖಲಿಸುವುದರ ಜೊತೆಗೆ ₹12 ಲಕ್ಷ ದಂಡವನ್ನೂ ಬಿಬಿಎಂಪಿ ಅಧಿಕಾರಿಗಳು ವಿಧಿಸಿದ್ದರು.

ಇದೀಗ ನಗರದ ಹಲವು ರಸ್ತೆ, ಜಂಕ್ಷನ್‌, ಪ್ರದೇಶಗಳಲ್ಲಿ ಯುಗಾದಿ ಹಾಗೂ ರಂಜಾನ್‌ ಹಬ್ಬಕ್ಕೆ ಶುಭ ಕೋರಿ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ನಾಗರಿಕರು ಈ ಬಗ್ಗೆ ದೂರು ನೀಡಿದ್ದರೂ, ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಲು ಮುಂದಾಗುತ್ತಿಲ್ಲ. ‘ಸಚಿವರು ಹೇಳಿದಾಗ ಮಾತ್ರ ಫ್ಲೆಕ್ಸ್‌ ತೆರವು ಎಂಬ ಕಾರ್ಯಾಚರಣೆಯನ್ನು ಕಣ್ಣೊರೆಸುವ ತಂತ್ರವಾಗಿ ಒಂದೆರಡು ದಿನ ಬಿಬಿಎಂಪಿ ಅಧಿಕಾರಿಗಳು ನಡೆಸುತ್ತಾರೆ. ನಂತರ ಫ್ಲೆಕ್ಸ್‌ಗಳು ರಾರಾಜಿಸುತ್ತಲೇ ಇರುತ್ತವೆ’ ಎಂದು ವಿಜಯನಗರ ವಿಶ್ವನಾಥ ದೂರಿದರು.

ADVERTISEMENT

‘ಸಚಿವರು ಹಾಗೂ ಶಾಸಕರ ಹೆಸರಿನಲ್ಲೇ ಹಲವು ಫ್ಲೆಕ್ಸ್‌ಗಳಿವೆ. ಅವುಗಳನ್ನು ತೆರವುಗೊಳಿಸಲು ಮುಂದಾದರೆ ಹಿರಿಯ ಅಧಿಕಾರಿಗಳಿಂದ ನಮಗೆ ಒತ್ತಡಹಾಕಿ, ತೆರವುಗೊಳಿಸದಂತೆ ತಡೆಯಲಾಗುತ್ತದೆ. ಕೆಲವು ಬಾರಿ ಅವರೇ ಕರೆ ಮಾಡಿ ಬೈಯ್ಯುತ್ತಾರೆ. ಇನ್ನು ಅವರ ಮೇಲೆ ದಂಡ ವಿಧಿಸುವುದು, ಕ್ರಮ ತೆಗೆಕೊಳ್ಳುವುದು ಕಷ್ಟಸಾಧ್ಯ. ಅವರ ಆಪ್ತರಿಗೆ ನೋಟಿಸ್‌ ಕೊಟ್ಟರೂ ಅದು ಪ್ರಯೋಜನಕ್ಕೆ ಬರುವುದಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಬಿಬಿಎಂಪಿಯ ಅಧಿಕಾರಿಗಳು ಅಳಲು ತೋಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.