
ಬೆಂಗಳೂರು: ‘ಗೃಹಲಕ್ಷ್ಮಿ ಫಲಾನುಭವಿಗಳಿಗೆ ಲಾಭ ತಂದುಕೊಡಲು ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘವನ್ನು ಆರಂಭಿಸಲಾಗುವುದು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನ.19ರಂದು ನಡೆಯಲಿರುವ ಐಸಿಡಿಎಸ್ ಯೋಜನೆಯ ಅಂಗನವಾಡಿ ಸುವರ್ಣ ಮಹೋತ್ಸವ, ಅಕ್ಕಾ ಪಡೆ ಲೋಕಾರ್ಪಣೆ, ಗೃಹಲಕ್ಷ್ಮಿ ಬ್ಯಾಂಕ್ ಉದ್ಘಾಟನೆ ಕುರಿತು ಬುಧವಾರ ನಡೆದ ರಾಜ್ಯಮಟ್ಟದ ಪೂರ್ವ ಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘2000 ಫಲಾನುಭವಿಗಳಿಂದ ಹಣ ಸಂಗ್ರಹಿಸಲಾಗಿದೆ. ಗೃಹಲಕ್ಷ್ಮಿ ಯೋಜನೆಯ ಮಾದರಿಯಲ್ಲೆ ಗೃಹಲಕ್ಷ್ಮಿ ಬ್ಯಾಂಕ್ ಕೂಡ ಜನಮನ್ನಣೆ ಗಳಿಸಲು ಅಧಿಕಾರಿಗಳು ಶ್ರಮಿಸಬೇಕು. ಮೂರು ತಿಂಗಳಲ್ಲಿ ಜಿಲ್ಲಾ ಮಟ್ಟಕ್ಕೂ ಗೃಹಲಕ್ಷ್ಮಿ ಸೊಸೈಟಿಯನ್ನು ವಿಸ್ತರಣೆ ಮಾಡಲಾಗುವುದು’ ಎಂದು ಸಚಿವರು ಹೇಳಿದರು.
‘ಗೃಹಲಕ್ಷ್ಮಿ ಸೊಸೈಟಿ ಮೂಲಕ ಮೂರು ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ಫಲಾನುಭವಿಗಳಿಗೆ ಸಾಲ ನೀಡಲಾಗುವುದು. ಸೊಸೈಟಿ ಯಶಸ್ಸಿಗೆ ಎಲ್ಲರ ಸಹಕಾರ, ಜವಾಬ್ದಾರಿ ಇರಬೇಕು. ನಾವು ಯಾರಿಂದಲೂ ಹಣ ಪಡೆಯುವುದಿಲ್ಲ, ಫಲಾನುಭವಿಗಳಿಂದ ಫೋನ್ ಪೇ ಮೂಲಕ ಹಣ ಸಂಗ್ರಹಿಸಲಾಗುವುದು’ ಎಂದು ವಿವರ ನೀಡಿದರು.
ಮಹಿಳೆಯರಿಗೆ ಹೆಚ್ಚು ಸುರಕ್ಷತೆ ನೀಡಲು ಅಕ್ಕಾಪಡೆಯನ್ನು ರಾಜ್ಯದಾದ್ಯಂತ ಆರಂಭಿಸಲಾಗುತ್ತಿದೆ. ಇದಕ್ಕೆ ಇಲಾಖೆಯ ಅಧಿಕಾರಿಗಳು ಪೊಲೀಸ್ ಇಲಾಖೆಯೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅಕ್ಕಾ ಪಡೆ ಮನೆ ಮಾತಾಗುವಂತೆ ನೋಡಿಕೊಳ್ಳಬೇಕು ಎಂದರು.
ಹೋಮ್ ಗಾರ್ಡ್ಸ್, ಎನ್‌ಸಿಸಿ ವಿದ್ಯಾರ್ಥಿಗಳು ಅಕ್ಕಾ ಪಡೆಯಲ್ಲಿ ಕಾರ್ಯನಿರ್ವಹಿಸಲಿದ್ದು, ಬೆಳಿಗ್ಗೆ 8 ರಿಂದ ರಾತ್ರಿ 8ರವರೆಗೆ ಅಕ್ಕಾ ಪಡೆ ಶಾಲಾ ಕಾಲೇಜು, ಪಾರ್ಕ್, ಶಾಪಿಂಗ್ ಮಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಗಸ್ತು ತಿರುಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ತುಮಕೂರು, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಿಂದ ಹೆಚ್ಚು ಮಹಿಳೆಯರು ಭಾಗವಹಿಸಲಿದ್ದಾರೆ. ಈ ಜಿಲ್ಲೆಗಳ ಉಪ ನಿರ್ದೇಶಕರು ಹೆಚ್ಚಿನ ನಿಗಾ ವಹಿಸಬೇಕು ಎಂದು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.