ಬೊಮ್ಮನಹಳ್ಳಿ: ರಾಜ್ಯ ಸರ್ಕಾರದ ‘ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ನಡೆಸಲಾಗುತ್ತಿದೆ. ಜನಪರ ಯೋಜನೆಗಳನ್ನು ಹಿಂಪಡೆಯುವ ಪ್ರಶ್ನೆ ಉದ್ಭವಿಸದು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಬುಧವಾರ ಬೊಮ್ಮನಹಳ್ಳಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.
‘ಗ್ಯಾರಂಟಿ ಯೋಜನೆಗಳು ಸಮಾಜದ ಕಟ್ಟಕಡೆಯ ಜನರನ್ನು ಮುಟ್ಟಿವೆ. ರಾಜ್ಯ ಪ್ರವಾಸದ ವೇಳೆ ಇದು ನಮ್ಮ ಅನುಭವಕ್ಕೆ ಬಂದಿದೆ. ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಅನುದಾನವನ್ನು ನೀಡಿದ್ದಲ್ಲಿ ಇದು ನಮ್ಮ ಸರ್ಕಾರಕ್ಕೆ ಹೊರೆಯಾಗಿ ಪರಿಣಮಿಸುತ್ತಿರಲಿಲ್ಲ. ಬಿಜೆಪಿಯವರ ಪಾದಯಾತ್ರೆ ಈ ವಿಷಯ ಆಧರಿಸಿ ದಿಲ್ಲಿ ಕಡೆಗೆ ಹೊರಡಬೇಕಿತ್ತು’ ಎಂದು ಬಿಜೆಪಿಯನ್ನು ಕುಟುಕಿದರು.
‘ಹಿಂಡೆನ್‌ಬರ್ಗ್ ವರದಿಯು ಮೋದಿ ಸರ್ಕಾರದ ಅಸಲಿಯತ್ತನ್ನು ಬಯಲು ಮಾಡಿದೆ. ತನ್ನ ಗೆಳೆಯ ಅದಾನಿಗಾಗಿ ದೇಶವನ್ನು ಒತ್ತೆ ಇಡಲು ಮೋದಿ ಸಜ್ಜಾಗಿದ್ದಾರೆ. ಈ ಬಗ್ಗೆ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರೂ, ತನಿಖೆ ಮಾಡದೇ, ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ದೂರಿದರು.
‘ಈ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ದೂರುಗಳು ಇದ್ದಲ್ಲಿ ಸಾರ್ವಜನಿಕರು ಈ ಕಚೇರಿಗೆ ಬಂದು ದೂರು ಸಲ್ಲಿಸಬಹುದು’ ಎಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಟಿ.ವಾಸುದೇವರೆಡ್ಡಿ ಹೇಳಿದರು.
ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾರೆಡ್ಡಿ, ಕಾಂಗ್ರೆಸ್ ಮುಖಂಡ ಎಚ್.ಎಂ.ರೇವಣ್ಣ, ಯುವ ಕಾಂಗ್ರೆಸ್ ಮುಖಂಡ ಅನಿಲ್ ರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.