
ಬೆಂಗಳೂರು: ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಇಟ್ಟುಕೊಂಡು ತನ್ನ ವಿರೋಧಿಗಳನ್ನು ಬೆದರಿಸುತ್ತಿದ್ದ ಆರೋಪಿಯನ್ನು ಸಿಸಿಬಿಯ ಸಂಘಟಿತ ಅಪರಾಧ ದಳದ (ಪೂರ್ವ) ಸಿಬ್ಬಂದಿ ಸೋಮವಾರ ಬಂಧಿಸಿದ್ದಾರೆ.
ರೋಷನ್ ಅಹಮದ್ ಅಲಿಯಾಸ್ ಬಾಬನ್ ಬಂಧಿತ.
ಆರೋಪಿಯಿಂದ ಪಿಸ್ತೂಲ್ ಹಾಗೂ ನಾಲ್ಕು ಜೀವಂತ ಗುಂಡು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಹಿತಿ ನೀಡಿದರು.
ಆರೋಪಿ ಪಿಸ್ತೂಲ್ ಇಟ್ಟುಕೊಂಡು ದುಷ್ಕೃತ್ಯ ಎಸಗಲು ಸಂಚು ರೂಪಿಸಿದ್ದ ಬಗ್ಗೆ ಪೊಲೀಸ್ ಬಾತ್ಮೀದಾರರಿಂದ ಖಚಿತ ಮಾಹಿತಿ ಬಂದಿತ್ತು. ಆ ಮಾಹಿತಿ ಆಧರಿಸಿ ಸುದ್ದಗುಂಟೆಪಾಳ್ಯದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿಯಿರುವ ಖಾಲಿ ಜಾಗದಲ್ಲಿ ಆರೋಪಿ ಇರುವುದು ಗೊತ್ತಾಗಿತ್ತು. ಆ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡು ಆರೋಪಿಯನ್ನು ಬಂಧಿಸಲಾಯಿತು ಎಂದು ಅವರು ಹೇಳಿದರು.
‘ಮಧ್ಯಪ್ರದೇಶದಲ್ಲಿ ಪರಿಚಯವಿದ್ದ ವ್ಯಕ್ತಿಯಿಂದ ಪಿಸ್ತೂಲ್ ತರಿಸಿಕೊಂಡಿದ್ದೆ. ಪಿಸ್ತೂಲ್ ಇಟ್ಟುಕೊಂಡು ತನ್ನ ವಿರೋಧಿಗಳನ್ನು ಹೆದರಿಸುತ್ತಿದ್ದೆ. ಅಲ್ಲದೇ ಅಪರಾಧ ಕೃತ್ಯ ಎಸಗಲು ಪಿಸ್ತೂಲ್ ಬಳಕೆ ಮಾಡಿಕೊಳ್ಳುತ್ತಿದ್ದೆ ಎಂಬುದಾಗಿ ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ’ ಎಂದು ಅವರು ಮಾಹಿತಿ ನೀಡಿದರು.
‘ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಈ ಹಿಂದೆ ಆರೋಪಿಯನ್ನು ಮೈಕೊ ಲೇಔಟ್ ಠಾಣೆಯ ಪೊಲೀಸರು ಬಂಧಿಸಿದ್ದರು’ ಎಂದು ಮೂಲಗಳು ಹೇಳಿವೆ.
ಆರೋಪಿಯ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.