
ಬೆಂಗಳೂರು: ಪ್ರೀತಿಸಿದ ಯುವತಿ ಬೇರೊಬ್ಬನ ಜತೆ ಮದುವೆ ನಿಶ್ಚಯಮಾಡಿಕೊಂಡ ಕಾರಣ ಮನನೊಂದ ಜಿಮ್ ತರಬೇತುದಾರ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗೆಳೆಯರ ಬಳಗ ಬಡಾವಣೆಯ ನಿವಾಸಿ ಶ್ರೀಧರ್ ಅವರ ಮಗ ಕಿರಣ್ (26) ಆತ್ಮಹತ್ಯೆ ಮಾಡಿಕೊಂಡವರು.
ಜಿಮ್ ತರಬೇತುದಾರರಾಗಿದ್ದ ಕಿರಣ್, ರಾಜ್ಯಮಟ್ಟದ ದೇಹದಾರ್ಢ್ಯ ಪಟುವಾಗಿದ್ದರು. ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ಆ ಯುವತಿ ಏಳೆಂಟು ತಿಂಗಳ ಹಿಂದೆ ಕಿರಣ್ ಮನೆಗೆ ಬಂದು ಪೋಷಕರಿಗೆ ತಮ್ಮ ಪ್ರೀತಿ ವಿಚಾರ ತಿಳಿಸಿ ಮದುವೆ ಮಾಡಿಸುವಂತೆ ಕೇಳಿದ್ದರು. ಅದಕ್ಕೆ ಒಪ್ಪಿದ್ದ ಪೋಷಕರು, ಕಿರಣ್ ಅವರ ಅಣ್ಣನ ಮದುವೆಯ ನಂತರ ಮದುವೆ ಮಾಡಿಸುವುದಾಗಿ ಹೇಳಿ ಕಳುಹಿಸಿದ್ದರು ಎಂದು ಪೊಲೀಸರು ಹೇಳಿದರು.
ಈ ನಡುವೆ ಬೇರೊಬ್ಬನ ಜತೆ ತನ್ನ ಮದುವೆ ನಿಶ್ಚಯ ಮಾಡಿಕೊಂಡ ಯುವತಿ, ಕಿರಣ್‍ಗೆ ವಿವಾಹದ ಆಮಂತ್ರಣ ಪತ್ರಿಕೆ ಕೊಟ್ಟಿದ್ದರು. ಅಲ್ಲದೆ, ವರನ ಕಡೆಯವರು ಮದುವೆಗೆ ಕೊಡಿಸಿದ್ದ ಸೀರೆಯನ್ನು ತೋರಿಸಿದ್ದರು. ಈ ಘಟನೆ ಬಳಿಕ ಆತ ಕುಟುಂಬದ ಸದಸ್ಯರ ಜತೆ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ತಿಳಿಸಿದರು.
ಸಾವಿಗೆ ಪ್ರೇಯಸಿಯೇ ಕಾರಣ: ‘ಪ್ರೇಯಸಿ ಬೇರೊಬ್ಬರನ್ನು ಮದುವೆಯಾಗುತ್ತಿರುವ ವಿಚಾರ ತಿಳಿದು ಮಾನಸಿಕವಾಗಿ ಕಿರಣ್ ಕುಗ್ಗಿಹೋಗಿದ್ದರು. ತನ್ನ ಸಾವಿಗೆ ಪ್ರೇಯಸಿ ಹಾಗೂ ಆಕೆಯ ತಾಯಿಯೇ ಕಾರಣ ಎಂದು ಆತ್ಮಹತ್ಯೆಗೂ ಮುನ್ನ ಪತ್ರ ಬರೆದಿಟ್ಟಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಗನ ಸಾವಿಗೆ ಆತನ ಪ್ರೇಯಸಿಯೇ ಕಾರಣ ಎಂದು ಕಿರಣ್ ಪೋಷಕರು ದೂರು ಕೊಟ್ಟಿದ್ದಾರೆ. ಪ್ರೇಯಸಿ ಹಾಗೂ ಆಕೆಯ ತಾಯಿಯ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
₹40 ಲಕ್ಷ ಸಾಲ ತೀರಿಸಿದ್ದ...
‘ಮೂಟೆ ಹೊತ್ತು ಮಕ್ಕಳನ್ನು ಸಾಕಿದ್ದೆ. ಎಡಗೈ ತುಂಡಾಗಿದ್ದರೂ ಮಕ್ಕಳನ್ನು ಚೆನ್ನಾಗಿ ಸಾಕಿದ್ದೆ. ಇದೆಲ್ಲಾ ಗೊತ್ತಿದ್ದರೂ ಮಗ ಕಿರಣ್ ಪ್ರೀತಿಸಿದ ಹುಡುಗಿಗಾಗಿ ಪ್ರಾಣ ಕಳೆದುಕೊಂಡಿದ್ದಾನೆ. ಪ್ರೇಯಸಿಯ ಕುಟುಂಬದವರ ಸುಮಾರು ₹40 ಲಕ್ಷ ಸಾಲ ತೀರಿಸಿದ್ದ. ಆದರೆ ಆಕೆ ಪ್ರೀತಿಯ ನಾಟಕವಾಡಿ ಮಗನಿಗೆ ಮೋಸ ಮಾಡಿದ್ದಾಳೆ. ಆಕೆಗೆ ಶಿಕ್ಷೆಯಾಗಬೇಕು’ ಎಂದು ಶ್ರೀಧರ್ ಅವರು ಮಾಧ್ಯಮ ಪ್ರತಿನಿಧಿಗಳ ಎದುರು ಕಣ್ಣೀರಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.