
ಬೆಂಗಳೂರು: ಹಣ ವಿನಿಮಯ ಏಜೆನ್ಸಿಗಳ ಸರ್ವರ್ ಹಾಗೂ ವಿವಿಧ ಜಾಲತಾಣಗಳನ್ನು ಹ್ಯಾಕ್ ಮಾಡಿ ದೋಚಿಟ್ಟುಕೊಂಡಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಬಿಟ್ ಕಾಯಿನ್‌ಗಳನ್ನು (ಬಿಟಿಸಿ) ಕಿತ್ತುಕೊಳ್ಳಲು ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣನನ್ನೇ ಅಪಹರಿಸಿದ್ದ ಸಂಗತಿ ಸಿಸಿಬಿ ಪೊಲೀಸರ ತನಿಖೆಯಿಂದ ಬಯಲಾಗಿದೆ.
‘ಬಿಟ್ ಕಾಯಿನ್ ಹಗರಣದ ಮೂಲ ಸೂತ್ರಧಾರ ಎನ್ನಲಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26), ದಿನದ ಬಹುಪಾಲು ಸಮಯವನ್ನು ಹ್ಯಾಕಿಂಗ್‌ಗೆ ಮೀಸಲಿರಿಸುತ್ತಿದ್ದ. ಜೊತೆಗಿದ್ದ ಸ್ನೇಹಿತರೇ, ಆತನನ್ನು ಅಪಹರಿಸಿ ಬಿಟ್ ಕಾಯಿನ್‌ಗಳನ್ನು ತಮ್ಮದಾಗಿಸಿಕೊಳ್ಳಲು ಮುಂದಾಗಿದ್ದರು’ ಎಂಬ ಅಂಶವನ್ನು ಸಿಸಿಬಿ ಪೊಲೀಸರ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿರುವ ಸಿಸಿಬಿ ಪೊಲೀಸರು, ಶ್ರೀಕೃಷ್ಣನನ್ನು ಅಪಹರಿಸಿದ್ದ ಹಾಗೂ ಅಕ್ರಮ ಬಂಧನದಲ್ಲಿಟ್ಟಿದ್ದ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
‘ಶ್ರೀಕೃಷ್ಣನಿಂದ ಬಿಟ್ ಕಾಯಿನ್‌ಗಳನ್ನು ಪಡೆದು ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ‘ರಾಬಿನ್ ಆನ್‌ಲೈನ್ ಸರ್ವೀಸ್’ ಮಾಲೀಕ ರಾಬಿನ್ ಖಂಡೇಲ್‌ವಾಲಾ, ಶ್ರೀಕೃಷ್ಣನ ಅಪಹರಣದ ಬಗ್ಗೆ ಹೇಳಿಕೆ ನೀಡಿದ್ದಾನೆ. ಜೊತೆಗೆ, ಸ್ನೇಹಿತರಿಂದ ತಪ್ಪಿಸಿಕೊಂಡ ಬಗೆಯನ್ನೂ ವಿವರಿಸಿದ್ದಾನೆ’ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.
'ಶ್ರೀಕೃಷ್ಣನ ಜೊತೆ ಬಿಟ್ ಕಾಯಿನ್ ವ್ಯವಹಾರ ಇಟ್ಟುಕೊಂಡಿದ್ದ ರಾಬಿನ್, 2020ರ ಆಗಸ್ಟ್ 13ರಂದು ಬೆಂಗಳೂರಿಗೆ ಬಂದಿದ್ದ. ಹೋಟೆಲ್ ಶೆರಟಾನ್‌ನಲ್ಲಿ ಎರಡು ದಿನ, ಗೋಕುಲಂ ಹೋಟೆಲ್‌ನಲ್ಲಿ 2 ದಿನ ಹಾಗೂ ಪ್ರೆಸ್ಟೀಜ್ ಗಾಲ್ಪ್ ಶೇರ್‌ನಲ್ಲಿ 30 ದಿನ ವಾಸವಿದ್ದ. ಇದೇ ಸಮಯದಲ್ಲೇ ಶ್ರೀಕೃಷ್ಣ, ಜಾಲತಾಣಗಳನ್ನು ಹ್ಯಾಕ್ ಮಾಡಿ ಬಿಟ್ ಕಾಯಿನ್ ದೋಚುತ್ತಿದ್ದ. ಅದೇ ಕಾಯಿನ್‌ಗಳನ್ನು ರಾಬಿನ್ ಮೂಲಕ ಮಾರಾಟ ಮಾಡಿಸಿ, ವಿವಿಧ ಖಾತೆಗಳಿಗೆ ಹವಾಲಾ ಮೂಲಕ ಹಣ ಹಾಕಿಸಿಕೊಳ್ಳುತ್ತಿದ್ದ’ ಎಂಬ ಸಂಗತಿ ಪಟ್ಟಿಯಲ್ಲಿದೆ.
ಬಿಟ್ ಕಾಯಿನ್ ನೀಡದಿದ್ದಕ್ಕೆ ಜಗಳ: ‘ಹ್ಯಾಕ್‌ನಿಂದ ದೋಚಿದ್ದ ಬಿಟ್ ಕಾಯಿನ್‌ಗಳನ್ನು ಶ್ರೀಕೃಷ್ಣ, ಸ್ನೇಹಿತರಿಗೆ ಕೊಟ್ಟಿರಲಿಲ್ಲ. ಪ್ರಕರಣದ ಆರೋಪಿಗಳಾದ ಸುನೀಶ್ ಹೆಗ್ಡೆ, ಸುಜಯ್ ಹಾಗೂ ಇತರರು ಶ್ರೀಕೃಷ್ಣನ ಮೇಲೆ ಸಿಟ್ಟಾಗಿದ್ದರು. ಬಿಟ್ ಕಾಯಿನ್ ನೀಡದಿದ್ದನ್ನು ಪ್ರಶ್ನಿಸಿ ಜಗಳ ಮಾಡಿ ಪರಸ್ಪರ ಕೈ ಕೈ ಮಿಲಾಯಿಸಿದ್ದರು’ ಎಂಬ ಮಾಹಿತಿಯನ್ನು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
‘ರಾಬಿನ್ ಮುಂದಿಟ್ಟುಕೊಂಡು ಶ್ರೀಕೃಷ್ಣನನ್ನು ಹೆದರಿಸಿ ಬಿಟ್ ಕಾಯಿನ್‌ಗಳನ್ನು ತಮ್ಮದಾಗಿಸಿಕೊಳ್ಳಲು ಆರೋಪಿಗಳು ಸಂಚು ರೂಪಿಸಿದ್ದರು. ರಾಬಿನ್ ಕಾಲಿಗೆ ಬ್ಯಾಂಡೇಜ್ ಸುತ್ತಿ, ಆತನಿಗೆ ಹೊಡೆದಿರುವುದಾಗಿ ಶ್ರೀಕೃಷ್ಣನಿಗೆ ತೋರಿಸಿದ್ದರು. ಬಿಟ್ ಕಾಯಿನ್ ನೀಡದಿದ್ದರೆ ಜೀವಂತ ಬಿಡುವುದಿಲ್ಲವೆಂದು ಶ್ರೀಕೃಷ್ಣನನ್ನು ಬೆದರಿಸಿದ್ದರು. ಅದಕ್ಕೆ ಸೊಪ್ಪು ಹಾಕದ ಶ್ರೀಕೃಷ್ಣ, ಹೋಟೆಲ್‌ನಿಂದ ಪರಾರಿಯಾಗಿದ್ದ.’
‘ಶ್ರೀಕೃಷ್ಣನಿಗಾಗಿ ಆರೋಪಿಗಳು ಹಲವೆಡೆ ಹುಡುಕಾಟ ಆರಂಭಿಸಿದ್ದರು. ಸ್ನೇಹಿತರ ಮನೆಯಲ್ಲೂ ಶೋಧ ನಡೆಸಿದ್ದರು. ಶ್ರೀಕೃಷ್ಣನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇದೇ ಸಂದರ್ಭದಲ್ಲೇ ರಾಬಿನ್‌ಗೆ ಕರೆ ಮಾಡಿದ್ದ ಶ್ರೀಕೃಷ್ಣ, ಬಿಡದಿ ಬಳಿಯ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ಫ್ಲ್ಯಾಟ್‌ವೊಂದರಲ್ಲಿ ಇರುವುದಾಗಿ ಹೇಳಿದ್ದ. ರಾಬಿನ್ ಹಾಗೂ ಇತರೆ ಆರೋಪಿಗಳು ಸ್ಥಳಕ್ಕೆ ಹೋಗಿದ್ದರು. ಅವಾಗಲೂ ಶ್ರೀಕೃಷ್ಣ, ಜಾಲತಾಣವೊಂದನ್ನು ಹ್ಯಾಕ್ ಮಾಡುತ್ತಿದ್ದದ್ದನ್ನು ಕಂಡಿದ್ದರು’ ಎಂಬ ಮಾಹಿತಿಯೂ ಪಟ್ಟಿಯಲ್ಲಿದೆ.
‘ಶ್ರೀಕೃಷ್ಣನನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದಿದ್ದ ಆರೋಪಿಗಳು, ಸುನೀಶ್‌ಗೆ ಸೇರಿದ್ದ ಫ್ಲ್ಯಾಟ್‌ನಲ್ಲಿ ಅಕ್ರಮ ಬಂಧನದಲ್ಲಿರಿಸಿದ್ದರು. ಬಿಟ್ ಕಾಯಿನ್‌ಗಳನ್ನು ತಮಗೆ ಹಸ್ತಾಂತರ ಮಾಡುವಂತೆ ಒತ್ತಾಯಿಸಿದ್ದರು. ಅದಕ್ಕೆ ಶ್ರೀಕೃಷ್ಣ ಒಪ್ಪಿರಲಿಲ್ಲ. ರಾಬಿನ್‌ನನ್ನೂ ಆತನ ಜೊತೆಯಲ್ಲೇ ಕೊಠಡಿಯಲ್ಲಿ ಕೂಡಿ ಹಾಕಿದ್ದರು.’
‘ಯಾರಿಗೂ ಬಿಟ್ ಕಾಯಿನ್ ಕೊಡುವುದಿಲ್ಲವೆಂದು ಹೇಳಿದ್ದ ಶ್ರೀಕೃಷ್ಣ, ರಾಬಿನ್ ಜೊತೆಯಲ್ಲಿ ತಡರಾತ್ರಿ ಫ್ಲ್ಯಾಟ್‌ನಿಂದ ತಪ್ಪಿಸಿಕೊಂಡಿದ್ದ. ಬಾಣಸವಾಡಿಯ ವಸತಿಗೃಹವೊಂದರ ಕೊಠಡಿಯಲ್ಲಿ ಉಳಿದುಕೊಂಡಿದ್ದ. ಮರುದಿನ ಬೇರೊಬ್ಬ ಸ್ನೇಹಿತನ ಜೊತೆ ಶ್ರೀಕೃಷ್ಣ ಹೊರಟುಹೋಗಿದ್ದ. ರಾಬಿನ್ ವಾಪಸು ತಮ್ಮೂರಿಗೆ ಹೋಗಿದ್ದ’ ಎಂಬ ಅಂಶವನ್ನು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.