ADVERTISEMENT

ಹಡಪದ ಅಪ್ಪಣ್ಣರ ವಚನ, ಚಿಂತನೆ ದಾರಿದೀಪ: ಸಚಿವ ಶಿವರಾಜ ತಂಗಡಗಿ

ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 16:33 IST
Last Updated 10 ಜುಲೈ 2025, 16:33 IST
ಸಮಾರಂಭದಲ್ಲಿ ಕೆ.ಎಂ. ಗಾಯತ್ರಿ, ಶಿವರಾಜ ತಂಗಡಗಿ, ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಮಾನಸ, ಸಿದ್ದಪ್ಪ ಹಡಪದ ಹಾಗೂ ನಾಗರಾಜ್ ಹಡಪದ ಅವರು ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು
ಪ್ರಜಾವಾಣಿ ಚಿತ್ರ
ಸಮಾರಂಭದಲ್ಲಿ ಕೆ.ಎಂ. ಗಾಯತ್ರಿ, ಶಿವರಾಜ ತಂಗಡಗಿ, ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ, ಮಾನಸ, ಸಿದ್ದಪ್ಪ ಹಡಪದ ಹಾಗೂ ನಾಗರಾಜ್ ಹಡಪದ ಅವರು ಹಡಪದ ಅಪ್ಪಣ್ಣ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಶಿವಶರಣ ಹಡಪದ ಅಪ್ಪಣ್ಣ ಅವರ ವಚನಗಳು ಹಾಗೂ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿದೀಪಗಳಾಗಿವೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಸಮಾರಂಭ ಉದ್ಘಾಟಿಸಿ, ಮಾತನಾಡಿದರು. 

‘ವಚನ ಸಾಹಿತ್ಯ ಚಳವಳಿಯು ಕರ್ನಾಟಕದ ಇತಿಹಾಸದಲ್ಲಿ ಮರೆಯಲಾರದ ಮತ್ತು ಮರೆಯಬಾರದ ಪ್ರಮುಖ ಚಳವಳಿಯಾಗಿದೆ. ಸಮಾಜದಲ್ಲಿನ ತಾರತಮ್ಯಗಳನ್ನು ನಿವಾರಿಸಲು ತಮ್ಮದೇ ಆದ ಕೊಡುಗೆಯನ್ನು ನೀಡಿದ ಬಸವಾದಿ ಶರಣರು, ಸಮಾಜದಲ್ಲಿ ಹರಡಿದ್ದ ಅಜ್ಞಾನ, ಮೂಢನಂಬಿಕೆಗಳನ್ನು ಕಿತ್ತೊಗೆಯಲು ಶ್ರಮಿಸಿದರು. ಬಸವಣ್ಣನವರ ಅನುಯಾಯಿಯಾಗಿದ್ದ ಹಡಪದ ಅಪ್ಪಣ್ಣ ಅವರು, ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಮಹಾನ್ ಶರಣರಾಗಿದ್ದಾರೆ’ ಎಂದರು. 

ADVERTISEMENT

‘ಬಸವಣ್ಣನವರ ಕ್ರಾಂತಿಕಾರಿ ಆಲೋಚನೆಗಳನ್ನು ಅತ್ಯಂತ ಸ್ಪಷ್ಟವಾಗಿ ಅರ್ಥೈಸಿಕೊಂಡು, ಅಂತೆಯೇ ನಡೆಯುತ್ತಿದ್ದ ಅಪ್ಪಣ್ಣನವರು ಬಸವಣ್ಣ ಅವರ ಆಪ್ತ ಕಾರ್ಯದರ್ಶಿಯಾಗಿದ್ದರು’ ಎಂದು ಅಭಿಪ್ರಾಯಪಟ್ಟ ಅವರು, ‘ಹಡಪದ ಅಪ್ಪಣ್ಣ ಅವರ ಸುಕ್ಷೇತ್ರ ತಂಗಡಗಿಯ ಅಭಿವೃದ್ಧಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅನುದಾನ ಒದಗಿಸಲಾಗುವುದು’ ಎಂದು ಭರವಸೆ ನೀಡಿದರು.

ಇದೇ ವೇಳೆ ತಂಗಡಗಿ ಹಡಪದ ಅಪ್ಪಣ್ಣ ದೇವರ ಮಹಾಸಂಸ್ಥಾನ ಮಠದ ಅನ್ನದಾನಿ ಭಾರತಿ ಅಪ್ಪಣ್ಣ ಸ್ವಾಮೀಜಿ ಅವರು, ‘ಹಡಪದ ಸಮುದಾಯವನ್ನು 2ಎ ಪಟ್ಟಿಗೆ ಸೇರಿಸಬೇಕು’ ಎಂದು ಮನವಿ ಮಾಡಿದರು.

ಈ ಮನವಿಗೆ ಪ್ರತಿಕ್ರಿಯಿಸಿದ ಸಚಿವರು, ‘ಯಾವುದೇ ಸಮುದಾಯವನ್ನು 2ಎ ಪಟ್ಟಿಗೆ ಸೇರಿಸಲು ಕೆಲವೊಂದು ನಿಯಮಗಳಿರುತ್ತವೆ. ಅದರಂತೆ ನಡೆಯಬೇಕಾಗುತ್ತದೆ. ರಾಜಕೀಯವಾಗಿ ಮಾತನಾಡಿದರೆ ಅದು ಭರವಸೆಯಾಗಿಯೇ ಉಳಿಯುತ್ತದೆ’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ. ಗಾಯತ್ರಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಅಖಿಲ ಕರ್ನಾಟಕ ಅಪ್ಪಣ್ಣ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಸಿದ್ದಪ್ಪ ಹಡಪದ, ಸಂಘದ ಜಿಲ್ಲಾಧ್ಯಕ್ಷ ನಾಗರಾಜ್ ಹಡಪದ ಉಪಸ್ಥಿತರಿದ್ದರು.

‘ವಾಸ್ತವ ಅರಿಯದೆ ವರದಿಗೆ ವಿರೋಧ’

‘ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಬಗ್ಗೆ ವಾಸ್ತವ ಅರಿಯದೆ ವರದಿಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಹಡಪದ ಸಮುದಾಯದಲ್ಲಿ 21 ಉಪ ಜಾತಿಗಳ ಹೆಸರುಗಳನ್ನು ಸಮೀಕ್ಷೆ ವೇಳೆ ಬರೆಸಲಾಗಿದೆ. ಇದನ್ನು ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಅಥವಾ ನಾನು ಹೇಳಿ ಬರೆಸಿಲ್ಲ. ಸಮೀಕ್ಷೆ ವೇಳೆ ನೀವೇ ಉಪ ಜಾತಿಗಳನ್ನು ಬರೆಸಿದ್ದೀರಿ. ನಾವು ಯಾವುದೇ ಸಮುದಾಯ 10 ಲಕ್ಷ 20 ಲಕ್ಷ ಇದ್ದರೂ ಪರಿಗಣಿಸುತ್ತೇವೆ. ಎಂದಿಗೂ ಸಮುದಾಯದ ಜನಸಂಖ್ಯೆಯ ಬಗ್ಗೆ ಚಿಂತಿಸಿಲ್ಲ. ಕಷ್ಟದಲ್ಲಿರುವ ಸಮುದಾಯವನ್ನು ಮೇಲಕ್ಕೆತ್ತುವ ಸಲುವಾಗಿ ಸಮೀಕ್ಷೆ ಮಾಡಿಸಲಾಗಿತ್ತು’ ಎಂದು ಶಿವರಾಜ ತಂಗಡಗಿ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.