ADVERTISEMENT

ಸಮಾಜದಲ್ಲಿ ಬದಲಾವಣೆ ಬಯಸಿದ ಸಾಹಿತಿ ಹಂಪನಾ: ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 16:08 IST
Last Updated 11 ಅಕ್ಟೋಬರ್ 2025, 16:08 IST
<div class="paragraphs"><p>ಸಿದ್ದರಾಮಯ್ಯ ಅವರು&nbsp;ಹಂಪ ನಾಗರಾಜಯ್ಯ ಅವರಿಗೆ ಚಿನ್ನದ ಕಡಗ ಹಾಕಿ ಶುಭಹಾರೈಸಿದರು. ಹಂಪ ನಾಗರಾಜಯ್ಯ ಅವರ ಪುತ್ರ ಹರ್ಷ ಮತ್ತು ಪುತ್ರಿ ಎಚ್.ಎನ್. ಆರತಿ ಉಪಸ್ಥಿತರಿದ್ದರು </p></div>

ಸಿದ್ದರಾಮಯ್ಯ ಅವರು ಹಂಪ ನಾಗರಾಜಯ್ಯ ಅವರಿಗೆ ಚಿನ್ನದ ಕಡಗ ಹಾಕಿ ಶುಭಹಾರೈಸಿದರು. ಹಂಪ ನಾಗರಾಜಯ್ಯ ಅವರ ಪುತ್ರ ಹರ್ಷ ಮತ್ತು ಪುತ್ರಿ ಎಚ್.ಎನ್. ಆರತಿ ಉಪಸ್ಥಿತರಿದ್ದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಜೀವನದುದ್ದಕ್ಕೂ ಸಾಹಿತ್ಯ ಸೃಷ್ಟಿಸಿದ ಹಂಪ ನಾಗರಾಜಯ್ಯ ಅವರು, ಸಮಾಜದಲ್ಲಿ ಬದಲಾವಣೆ ಬಯಸಿದ ಸಾಹಿತಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು. 

ADVERTISEMENT

ವೀರಲೋಕ ಸಂಸ್ಥೆ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಂಪನಾ @90 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಹಂಪನಾ ಅವರು ಸಮಾಜಮುಖಿ ಆಗುವ ಮೂಲಕ ತಮ್ಮ ಬದುಕನ್ನು ಸಾರ್ಥಕಗೊಳಿಸಿಕೊಂಡಿದ್ದಾರೆ.‌ ಅವರು ಕನ್ನಡಿಗರ ಹೆಮ್ಮೆಯಾಗಿದ್ದು, ಅವರ ಬದುಕು, ಬರಹ ಹಾಗೂ ಸಾರ್ಥಕತೆ ಇಡೀ ಸಮಾಜಕ್ಕೆ ಮಾರ್ಗದರ್ಶನ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಭಾಷಾ ಶಾಸ್ತ್ರ, ಸಂಶೋಧನೆ, ಮಕ್ಕಳ ಸಾಹಿತ್ಯ, ವಿಮರ್ಶೆ ಸೇರಿ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಬೆರಗು ಮೂಡಿಸುವ ಕೆಲಸ ಮಾಡಿದ್ದಾರೆ. ಗ್ರಾಮೀಣ ಭಾಗದಿಂದ ಬಂದ ಅವರು ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆ ಸಾಮಾನ್ಯದ್ದಲ್ಲ. ನಾನು ಸಾಹಿತ್ಯ ವಿದ್ಯಾರ್ಥಿಯಲ್ಲವಾದರೂ ಸಾಹಿತ್ಯ ವಲಯದ ಒಡನಾಟ ಹೊಂದಿದ್ದೇನೆ. ಅವರ ಅಪಾರ ಅಭಿಮಾನಿಗಳಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ’ ಎಂದು ಹೇಳಿದರು.

ವೀರಲೋಕ ಸಂಸ್ಥೆಯ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ, ‘ಕನ್ನಡ ಪುಸ್ತಕಗಳಿಗೆ ಅಪಾರ ಓದುಗರಿದ್ದಾರೆ. ಆದರೆ, ಪುಸ್ತಕಗಳನ್ನು ತಲುಪಿಸುವ ಕೆಲಸವಾಗುತ್ತಿಲ್ಲ. ಆದ್ದರಿಂದ ಕನ್ನಡಿಗರು ಇರುವ ಕಡೆ ಪುಸ್ತಕ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಜಯನಗರದಲ್ಲಿ ನಡೆದ ಎರಡನೇ ಪುಸ್ತಕ ಸಂತೆಗೆ 2 ಲಕ್ಷ ಜನ ಭೇಟಿ ನೀಡಿದ್ದರು. ಮೂರು ಕೋಟಿ ರೂಪಾಯಿ ವಹಿವಾಟು ನಡೆದಿತ್ತು. ನ.14ರಿಂದ ಮೂರನೇ ಪುಸ್ತಕ ಸಂತೆ ನಡೆಯಲಿದೆ’ ಎಂದರು. 

ಸಾಹಿತ್ಯ ಕ್ಷೇತ್ರದ ಪ್ರಮುಖರಾದ ಜಿ.ಎನ್. ಮೋಹನ್, ಪ್ರತಿಭಾ ನಂದಕುಮಾರ್, ಅಗ್ರಹಾರ ಕೃಷ್ಣಮೂರ್ತಿ, ಎಂ.ಎಸ್. ಆಶಾದೇವಿ ಹಾಗೂ ಆರತಿ ಎಚ್‌.ಎನ್. ಅವರು ಹಂಪ ನಾಗರಾಜಯ್ಯ ಅವರ ಸಾಹಿತ್ಯದ ಬಗ್ಗೆ ಅವಲೋಕನ ಮಾಡಿದರು. ಇದಕ್ಕೂ ಮೊದಲು ಜರ್ಮನ್ ಕನ್ನಡ ತಂಡದಿಂದ ಸಾಕ್ಷ್ಯಚಿತ್ರ ಪ್ರದರ್ಶನ ಕಂಡಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.