ADVERTISEMENT

ಭಕ್ತರಿಂದ ಹನುಮ ನಾಮ ಜಪ

ತಳಿರು–ತೋರಣಗಳಿಂದ ಕಂಗೊಳಿಸಿದ ಆಂಜನೇಯ ದೇಗುಲಗಳು l ದಿನವಿಡೀ ನಡೆದ ಹೋಮ–ಹವನ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2019, 20:30 IST
Last Updated 9 ಡಿಸೆಂಬರ್ 2019, 20:30 IST
ನಗರದ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿದರು (ಎಡಚಿತ್ರ) ರಾಗಿಗುಡ್ಡದ ಶ್ರೀಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ ಸೋಮವಾರ ದೇವರ ದರ್ಶನಕ್ಕೆ ಸಾಲಾಗಿ ನಿಂತಿದ್ದ ಭಕ್ತರು                      ಪ್ರಜಾವಾಣಿ ಚಿತ್ರಗಳು
ನಗರದ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಭಕ್ತಾದಿಗಳು ವಿಶೇಷ ಪೂಜೆ ಸಲ್ಲಿಸಿದರು (ಎಡಚಿತ್ರ) ರಾಗಿಗುಡ್ಡದ ಶ್ರೀಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ ಸೋಮವಾರ ದೇವರ ದರ್ಶನಕ್ಕೆ ಸಾಲಾಗಿ ನಿಂತಿದ್ದ ಭಕ್ತರು                      ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ನಗರದಾದ್ಯಂತ ಸೋಮವಾರ ಹನುಮ ಜಯಂತಿ ಸಂಭ್ರಮ ಮನೆ ಮಾಡಿತ್ತು. ಚುನಾವಣಾ ಫಲಿತಾಂಶದ ಚರ್ಚೆಯ ನಡುವೆಯೂ ಜನ ಹನುಮ ನಾಮ ಜಪಿಸುವ ಮೂಲಕ ರಾಮನ ಬಂಟನ ಕೃಪೆಗೆ ಪಾತ್ರರಾದರು. ಆಂಜನೇಯ ದೇಗುಲಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

ದೇವಾಲಯಗಳ ಪ್ರವೇಶ ದ್ವಾರ ಗಳನ್ನುಹಸಿರು ತೋರಣ ಕಟ್ಟಿ, ಚಪ್ಪರ ಹಾಕಿ ಹೂಮಾಲೆಗಳಿಂದ ಅಲಂಕರಿಸಲಾಗಿತ್ತು. ರಂಗು ರಂಗಿನ ರಂಗೋಲಿಗಳು ದೇಗುಲದ ಅಂಗಳಗಳನ್ನು ಅಲಂಕರಿ ಸಿದ್ದವು. ದೇಗುಲಗಳಲ್ಲಿ ದಿನವಿಡೀ ಮಂತ್ರಘೋಷಗಳು ಮೊಳಗಿದವು.

ಮಾರುತಿ ದೇವರಿಗೆ ಅಭಿಷೇಕಗಳು ನಡೆದವು. ಹೋಮ–ಹವನಗಳ ಜತೆಗೆ ವಿಶೇಷ ಪೂಜೆಯನ್ನೂ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ಮತ್ತು ಸಂಜೆ ಭಜನೆ, ದಾಸವಾಣಿ, ದೇವರ ನಾಮಗಳ ಗೀತಗಾಯನ ಏರ್ಪಡಿಸಲಾಗಿತ್ತು.

ADVERTISEMENT

ಹನುಮಂತನಗರದ ಗುಟ್ಟೆ ಆಂಜನೇಯ, ಗಿರಿನಗರದ ಕಾರ್ಯಸಿದ್ಧಿ ಆಂಜನೇಯ, ಮೈಸೂರು ರಸ್ತೆಯ ಗಾಳಿ ಆಂಜನೇಯ, ಬನಶಂಕರಿಯ ಆಂಜನೇಯ ಸ್ವಾಮಿ ದೇವಾಲಯ, ಸಾರಕ್ಕಿಯ ಪ್ರಸನ್ನ ಅಂಜನೇಯ, ಯಡಿಯೂರಿನ ಆಂಜನೇಯ ಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಭಕ್ತರು ಬೆಳಿಗ್ಗೆಯಿಂದಲೇ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು.

ಹೊಂಬೇಗೌಡನಗರದ ಶ್ರೀ ರಾಮಸೇವಾ ಮಂಡಲಿ ಮತ್ತು ಟ್ರಸ್ಟ್, ಪದ್ಮನಾಭನಗರದ ವರಪ್ರದ ಆಂಜನೇಯಸ್ವಾಮಿ ದೇವಸ್ಥಾನ ಟ್ರಸ್ಟ್, ಯಲಹಂಕ ಬಸ್ ನಿಲ್ದಾಣದಲ್ಲಿರುವ ಆಂಜನೇಯಸ್ವಾಮಿ ದೇವಸ್ಥಾನ, ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನ, ಮಿಂಟೊ ಆಸ್ಪತ್ರೆ ಬಳಿಯಿರುವ ಮಿಂಟೊ ಆಂಜನೇಯ ಸ್ವಾಮಿ ದೇವಸ್ಥಾನ, ಯಶವಂತಪುರದ ಬಳಿಯಿರುವ ಆಂಜನೇಯ ದೇವಸ್ಥಾನ ಸೇರಿದಂತೆ ನಗರದ ನಾನಾ ಹನುಮಂತನ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು.

ವೀಳ್ಯೆದೆಲೆ ಅಲಂಕಾರ: ಹಲವು ದೇಗುಲಗಳಲ್ಲಿ ಆಂಜನೇಯ ಸ್ವಾಮಿಗೆ ವೀಳ್ಯೆದೆಲೆಗಳ ಅಲಂಕಾರ ಮಾಡಲಾಗಿತ್ತು.

ವಿವಿಧ ಬಗೆಯ ಹೂವು, ಸಿಂಧೂರವು ಕೂಡ ಅಂಜನಾಸುತನ ಅಂದವನ್ನು ಹೆಚ್ಚಿಸಿತ್ತು. ದೇವಸ್ಥಾನಗಳಲ್ಲಿ ಪುಳಿಯೋಗರೆ, ಕೇಸರಿಬಾತ್ ನೈವೇದ್ಯವನ್ನು ಭಕ್ತರಿಗೆ ಪ್ರಸಾದವಾಗಿ ಹಂಚಿದರು.

ಎಚ್.ಬಿ. ಸಮಾಜ ರಸ್ತೆಯ ಆಂಜನೇಯ ಸ್ವಾಮಿ ದೇಗುಲದಲ್ಲಿ 108 ಲೀಟರ್ ಪಂಚಾಮೃತ ಅಭಿಷೇಕ ಮಾಡಿ, ಭಕ್ತರಿಗೆ ವಿತರಿಸಲಾಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಅನಂತ ಕುಲಕರ್ಣಿ ಗಾಯನ ಪ್ರಸ್ತುತ ಪಡಿಸಿದರು.

ಗಿರಿನಗರದ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬೆಳಿಗ್ಗೆ ಮೂಲ ವಿಗ್ರಹಕ್ಕೆ ಮೊದಲು ಅರ್ಚಕರಿಂದ ಅಭಿಷೇಕ ನಡೆಯಿತು. ಬಳಿಕ ದೇವಸ್ಥಾನದ ಹೊರಾಂಗಣದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಭಕ್ತರೇ ಅಭಿಷೇಕ ಮಾಡಲು ವ್ಯವಸ್ಥೆ ಕಲ್ಪಿಸಲಾಯಿತು. ವಿವಿಧೆಡೆ ರಥೋತ್ಸವಗಳೂ ನೆರವೇರಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.