ADVERTISEMENT

ಪ್ರಕರಣವೊಂದರ ಹೇಳಿಕೆ ನೀಡಲು ಬಂದಿದ್ದ ಮಹಿಳೆಗೆ ಕಿರುಕುಳ: ಪಿಎಸ್‌ಐ ಅಮಾನತು

ಸಂತ್ರಸ್ತೆಯಿಂದ ಟ್ವೀಟ್‌: ಮಂಜುನಾಥ್‌ ಸ್ವಾಮಿ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2023, 4:57 IST
Last Updated 14 ಏಪ್ರಿಲ್ 2023, 4:57 IST
   

ಬೆಂಗಳೂರು: ಪ್ರಕರಣವೊಂದರ ಸಂಬಂಧ ಹೇಳಿಕೆ ನೀಡಲು ಠಾಣೆಗೆ ಬಂದಿದ್ದ ಮಹಿಳೆ ಜತೆಗೆ ಅನುಚಿತವಾಗಿ ವರ್ತಿಸಿದ್ದ ಸದ್ದುಗುಂಟೆಪಾಳ್ಯ ಪೊಲೀಸ್‌ ಠಾಣೆಯ ಪಿಎಸ್‌ಐ ಮಂಜುನಾಥ್‌ ಸ್ವಾಮಿ ಅವರನ್ನು ಅಮಾನತು ಮಾಡಲಾಗಿದೆ.

ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಬುಧವಾರ ಅಮಾನತು ಮಾಡಿ ಆದೇಶಿಸಿದ್ದಾರೆ. ‘ಮಂಜುನಾಥ್‌ ವಿರುದ್ಧ ಕಲಂ 354ಎ ಹಾಗೂ 354ಡಿ ಐಪಿಸಿ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಬಾಬಾ ತಿಳಿಸಿದ್ದಾರೆ.

‘ಏಪ್ರಿಲ್ 10ರಂದು ಮಹಿಳೆಯೊಬ್ಬರು ತನ್ನ ಸಹೋದರನ ಸ್ನೇಹಿತನ ಪ್ರಕರಣ ಸಂಬಂಧ ಹೇಳಿಕೆ ನೀಡಲು ಬಂದಿದ್ದರು. ಅಂದು ಪಿಎಸ್‌ಐ ಆಕೆಯ ಮೈಕೈ ಮುಟ್ಟಿ ಅನುಚಿತವಾಗಿ ವರ್ತಿಸಿದ್ದರು’ ಎಂದು ಸರಣಿ ಟ್ವೀಟ್‌ ಮಾಡಿ ಅದನ್ನು ಡಿಸಿಪಿ ಅವರಿಗೆ ಟ್ಯಾಗ್‌ ಮಾಡಿದ್ದರು. ಅದನ್ನು ಗಮನಿಸಿದ ಡಿಸಿಪಿ ಯುವತಿ ಪತ್ತೆ ಮಾಡಿ ಆಕೆಯಿಂದ ಏಪ್ರಿಲ್‌ 11ರಂದು ಲಿಖಿತ ದೂರು ಸ್ವೀಕರಿಸಿ ತನಿಖೆ ನಡೆಸಿದ್ದರು.

ADVERTISEMENT

‘ಮೇಲ್ನೋಟಕ್ಕೆ ಆರೋಪ ಸಾಬೀತಾಗಿದ್ದರಿಂದ ಅಮಾನತು ಮಾಡಲಾಗಿದೆ. ತನಿಖೆ ನಡೆಸಲಾಗುತ್ತಿದೆ‘ ಎಂದು ಡಿಸಿಪಿ ತಿಳಿಸಿದ್ದಾರೆ.

ಟ್ವೀಟ್‌ನಲ್ಲಿ ಏನಿತ್ತು?
‘ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಸದ್ದುಗುಂಟೆಪಾಳ್ಯ ಪೊಲೀಸ್‌ ಠಾಣೆಗೆ ತೆರಳಿದ್ದೆ. ಪಿಎಸ್‌ಐ ಕ್ಯಾಬಿನ್‌ನಲ್ಲಿ ಚರ್ಚಿಸುತ್ತಿದ್ದೆ. ಆರಂಭದಲ್ಲಿ ಅವರು ಸ್ನೇಹಿಯಾಗಿಯೇ ಮಾತನಾಡಿದ್ದರು. ನಂತರ, ಅವರ ಉದ್ದೇಶ ಅರ್ಥವಾಯಿತು. ನನ್ನ ಜತೆಗೆ ಕೆಟ್ಟದಾಗಿ ನಡೆದುಕೊಂಡರು. ಹೇಳಿಕೆ ಪಡೆಯುವಾಗ ನನ್ನ ಕೈಹಿಡಿದು ಎಳೆದರು ಹಾಗೂ ದೇಹವನ್ನು ಸ್ಪರ್ಶಿಸಿದರು. ಆಗ ಭಯಪಟ್ಟುಕೊಂಡೆ. ಬಳಿಕ, ಮೊಬೈಲ್‌ ನಂಬರ್ ತೆಗೆದುಕೊಂಡು ಕರೆ ಮಾಡಲು ಹೇಳಿದರು’ ಎಂದು ಟ್ವೀಟ್‌ನಲ್ಲಿ ಆಕೆ ಅಳಲು ತೋಡಿಕೊಂಡಿದ್ದರು.

‘ಅದೇ ವೇಳೆಗೆ ನನ್ನ ಮೊಬೈಲ್‌ಗೆ ಕರೆ ಬಂದಾಗ ಮಾತನಾಡಲು ಹೊರಗೆ ತೆರಳಲು ಮುಂದಾದೆ. ಆಗ ನನ್ನ ಸೊಂಟ ಹಿಡಿದರು. ಮತ್ತಷ್ಟು ಆಘಾತಕ್ಕೆ ಒಳಗಾದೆ. ಇನ್‌ಸ್ಪೆಕ್ಟರ್‌ ಕೊಠಡಿಗೆ ತೆರಳಿ ದೂರು ನೀಡಲು ಸಾಧ್ಯವಾಗಿರಲಿಲ್ಲ. ಅಲ್ಲದೇ ಮನೆಗೆ ತೆರಳಿದ ಮೇಲೆ ಪೋಟೊ ಕಳುಹಿಸುವಂತೆಯೂ ಒತ್ತಾಯಿಸಿದ್ದರು. ಜತೆಗೆ ವಾಟ್ಸ್ಆ್ಯಪ್‌ನಲ್ಲಿ ಸಂದೇಶ ಕಳುಹಿಸಿ ಕಿರುಕುಳ ನೀಡಿದ್ದರು’ ಎಂದು ನೋವು ತೋಡಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.