ADVERTISEMENT

ಎಚ್‌ಬಿಆರ್‌ ಬಡಾವಣೆಯೂ ನಿಯಂತ್ರಿತ ಪ್ರದೇಶ

ಕಂಟೈನ್‌ಮೆಂಟ್‌ ಪ್ರದೇಶಗಳಿರುವ ವಾರ್ಡ್‌ಗಳ ಸಂಖ್ಯೆ 19ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 10 ಮೇ 2020, 19:57 IST
Last Updated 10 ಮೇ 2020, 19:57 IST
   
""

ಬೆಂಗಳೂರು: ಎಚ್‌ಬಿಆರ್‌ ಬಡಾವಣೆಯ ಮಹಿಳೆಯೊಬ್ಬರು ಕೋವಿಡ್‌ 19ನಿಂದ ಮೃತಪಟ್ಟಿದ್ದರಿಂದ ಭಾನುವಾರದಿಂದ ಈ ವಾರ್ಡ್ ಅನ್ನು ಕೂಡಾ ನಿಯಂತ್ರಿತ ಪ್ರದೇಶಗಳಿರುವ (ಕಂಟೈನ್‌ಮೆಂಟ್‌) ವಾರ್ಡ್‌ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದರೊಂದಿಗೆ ಇಂತಹ ವಾರ್ಡ್‌ಗಳ ಸಂಖ್ಯೆ 19ಕ್ಕೆ ಹೆಚ್ಚಳವಾಗಿದೆ.

ಆರ್.ಆರ್‌.ನಗರ ವಾರ್ಡ್‌ನಲ್ಲಿ ನಿರ್ಬಂಧ ಭಾನುವಾರ ಕೊನೆಗೊಳ್ಳಲಿದೆ. ಯಾವುದೇ ಹೊಸ ಪ್ರಕರಣ ಕಾಣಿಸಿಕೊಳ್ಳದಿದ್ದಲ್ಲಿ ಸೋಮವಾರದಿಂದ ಈ ವಾರ್ಡ್‌ ಕಂಟೈನ್‌ಮೆಂಟ್‌ ಪ್ರದೇಶಗಳಿರುವ ವಾರ್ಡ್‌ಗಳ ಪಟ್ಟಿಯಿಂದ ಹೊರಗೆ ಉಳಿಯಲಿದೆ.

ಬಿಬಿಎಂಪಿ 149 ವಾರ್ಡ್‌ಗಳಲ್ಲಿ ಕೋವಿಡ್‌ 19 ಸೋಂಕು ಪತ್ತೆಯಾದ ಒಂದೇ ಒಂದು ಪ್ರಕರಣವೂ ವರದಿಯಾಗಿಲ್ಲ. ಪಾದರಾಯನಪುರ ವಾರ್ಡ್‌ನಲ್ಲಿ (47 ಪ್ರಕರಣ) ಹಾಗೂ ಹೊಂಗಸಂದ್ರ ವಾರ್ಡ್‌ನಲ್ಲಿ (38) ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.

ADVERTISEMENT

200ರ ಸನಿಹ ಸೋಂಕಿತರು: ನಗರದಲ್ಲಿ ಸೋಂಕಿತರ ಪ್ರಮಾಣ 200ರ ಸನಿಹಕ್ಕೆ ತಲುಪಿದೆ. ಇದುವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 65 ಮಹಿಳೆಯರೂ ಸೇರಿದಂತೆ ಒಟ್ಟು 182 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿನಿಂದಾಗಿ ಏಳು ಮಂದಿ ಮೃತಪಟ್ಟಿದ್ದಾರೆ. ಸೋಂಕಿತ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. 86 ಮಂದಿ ಗುಣಮುಖರಾಗಿದ್ದು, 88 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಬ್ಲಿಘಿ ಜಮಾತ್‌ ಸಂಪರ್ಕ: ನಾಲ್ವರಿಗೆ ಮಾತ್ರ

ನಗರದಲ್ಲಿ ಇದುವರೆಗೆ ತಬ್ಲಿಘಿ ಜಮಾತ್‌ ಸಂಪರ್ಕದಿಂದ ಕೋವಿಡ್‌ 19 ಸೋಂಕು ಕಾಣಿಸಿಕೊಂಡಿದ್ದು ನಾಲ್ವರಲ್ಲಿ ಮಾತ್ರ ಎಂದು ಬಿಬಿಎಂಪಿ ವಾರ್‌ರೂಮ್‌ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಹೇಳಲಾಗಿದೆ.

116 ಮಂದಿಗೆ ಕೋವಿಡ್‌ 19 ರೋಗಿಗಳ ನೇರ ಸಂಪರ್ಕದಿಂದಾಗಿ ಸೋಂಕು ತಗುಲಿದೆ. ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿದ್ದ ಪ್ರದೇಶದ ಸಂಪರ್ಕದಿಂದ 34 ಮಂದಿಯಲ್ಲಿ ಈ ರೋಗ ಕಾಣಿಸಿಕೊಂಡಿದೆ. ಕಂಟೈನ್‌ಮೆಂಟ್‌ ಪ್ರದೇಶದಲ್ಲಿ ಅಡ್ಡಾಡಿದ್ದರಿಂದ ಒಬ್ಬರಿಗೆ ಸೋಂಕು ತಗುಲಿದೆ. ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ ಗಂಟಲ ದ್ರವ ತಪಾಸಣೆಗೆ ಒಳಪಡಿಸಿದ್ದ 19 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಶೀತ ಜ್ವರದ ಲಕ್ಷಣ ಹೊಂದಿದ್ದ ಐವರ ಗಂಟಲ ದ್ರವ ಪರೀಕ್ಷೆ ನಡೆಸಿದಾಗ ಸೋಂಕು ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.