ADVERTISEMENT

ಮುಖ್ಯ ಶಿಕ್ಷಕ ಅಮಾನತು | ಶಾಲೆಗೆ ಕೊಠಡಿ ಕೇಳುವುದು ಅಪರಾಧವೇ?: ಕರ್ನಾಟಕ ಸಂಘಟನೆ

​ಪ್ರಜಾವಾಣಿ ವಾರ್ತೆ
Published 30 ಮೇ 2025, 20:26 IST
Last Updated 30 ಮೇ 2025, 20:26 IST
   

ಬೆಂಗಳೂರು: ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕೊಠಡಿ ಕಟ್ಟಿಸಿಕೊಡಿ ಎಂದು ಹೋರಾಟ ಮಾಡಿದ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳ ಅವರನ್ನು ಅಮಾನತು ಮಾಡಲಾಗಿದೆ. ಕೊಠಡಿ ಕೇಳುವುದು ಮಹಾಪರಾಧವೇ ಎಂದು ಜಾಗೃತ ನಾಗರಿಕರು, ಕರ್ನಾಟಕ ಸಂಘಟನೆ ಪ್ರಶ್ನಿಸಿದೆ.

ಕೆ.ಮರುಳಸಿದ್ದಪ್ಪ, ಜಿ.ರಾಮಕೃಷ್ಣ, ವಿಜಯಾ, ಎಸ್.ಜಿ.ಸಿದ್ದರಾಮಯ್ಯ, ವಿಮಲಾ.ಕೆ.ಎಸ್, ಮೀನಾಕ್ಷಿ ಬಾಳಿ, ವಸುಂಧರಾ ಭೂಪತಿ, ಬಿ. ಶ್ರೀಪಾದ ಭಟ್, ಬಂಜಗೆರೆ ಜಯಪ್ರಕಾಶ್, ಮಾವಳ್ಳಿ ಶಂಕರ್‌, ಟಿ.ಸುರೇಂದ್ರ ರಾವ್, ಎನ್.ಗಾಯತ್ರಿ, ವಿ.ಪಿ.ನಿರಂಜನಾರಾಧ್ಯ, ಜಾಣಗೆರೆ ವೆಂಕಟರಾಮಯ್ಯ,  ಎನ್.ಕೆ.ವಸಂತ ರಾಜ್, ವಾಸುದೇವ ಉಚ್ಚಿಲ, ಕೆ.ನೀಲಾ, ಬಿ.ಆರ್.ಮಂಜುನಾಥ್, ಎಚ್.ಜಿ.ಜಯಲಕ್ಷ್ಮಿ ಈ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದು, ‘ಅಮಾನತು ವಾಪಸ್ ಪಡೆಯಬೇಕು. ಅಮಾನತು ಮಾಡಿರುವ ಶಿಕ್ಷಣಾಧಿಕಾರಿಯ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ವೀರಣ್ಣ ಮಡಿವಾಳ ಅವರು ತಮ್ಮ ಶಾಲೆಯ ಬಗ್ಗೆ ಅನನ್ಯ ಪ್ರೀತಿ ಇಟ್ಟುಕೊಂಡು 10 ವರ್ಷಗಳಿಂದ ಶಾಲೆಯ ಅಭಿವೃದ್ಧಿಗಾಗಿ ನಿರಂತರ ಶ್ರಮಿಸುತ್ತಿದ್ದಾರೆ. ಈ ಶಾಲೆಗೆ ಹಲವು ಪ್ರಶಸ್ತಿ ಬರಲು ಕಾರಣರಾಗಿದ್ದಾರೆ. ಕೆಲವು ವರ್ಷಗಳ ಹಿಂದೆ 70 ವಿದ್ಯಾರ್ಥಿಗಳಿದ್ದಾಗ ಎರಡು ಕೊಠಡಿಯಲ್ಲಿ ತರಗತಿ ನಡೆಸಲಾಗುತ್ತಿತ್ತು. ಈಗ ವಿದ್ಯಾರ್ಥಿಗಳ ಸಂಖ್ಯೆ ಅದರ ಎರಡು ಪಟ್ಟಿಗಿಂತಲೂ ಅಧಿಕವಾಗಿದೆ. ಅದಕ್ಕಾಗಿ ನಾಲ್ಕು ಕೊಠಡಿಗಳನ್ಗು ಕಟ್ಟಿಸಿಕೊಡುವಂತೆ ವೀರಣ್ಣ ಅವರು ಕೇಳಿದ್ದರು. ಇದನ್ನು ನಿಯಮ ಉಲ್ಲಂಘನೆ ಎಂದು ಪರಿಗಣಿಸಿ ಅವರನ್ನು ಶಿಕ್ಷಣಾಧಿಕಾರಿ ಅಮಾನತು ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ಶಿಕ್ಷಣಾಧಿಕಾರಿಯ ಸರ್ವಾಧಿಕಾರಿ ಧೋರಣೆಯು ಸರ್ಕಾರಕ್ಕೆ ಕೆಟ್ಟು ಹೆಸರು ತರಲಿದೆ. 24 ತಾಸುಗಳ ಒಳಗೆ ಅಮಾನತು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಅಮಾನತು ವಾಪಸ್‌ಗೆ ಒತ್ತಾಯ
ಬೆಳಗಾವಿ: ‘ರಾಯಬಾಗ ತಾಲ್ಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ವೀರಣ್ಣ ಮಡಿವಾಳರ ಅವರನ್ನು ಸೇವೆಯಿಂದ ಅಮಾನತು ಮಾಡಿದ್ದು ಸರಿಯಲ್ಲ. ಅಮಾನತು ಆದೇಶ ಹಿಂಪಡೆಯದಿ ದ್ದರೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಚಿಕ್ಕೋಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ಆಯೋಗದ ಸದಸ್ಯ ಶಶಿಧರ ಕೋಸಂಬೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.