ಬೆಂಗಳೂರು: ‘ಆರೋಗ್ಯ ವಿಮೆಗಳಿಗೆ ಶೇ 18 ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಿರುವುದರಿಂದ ಜನಸಾಮಾನ್ಯರು ಈ ವಿಮೆಗಳಿಂದ ದೂರ ಉಳಿಯುತ್ತಿದ್ದಾರೆ. ಆದ್ದರಿಂದ ಆರೋಗ್ಯ ವಿಮೆಗಳ ಮೇಲಿನ ಜಿಎಸ್‌ಟಿ ಬಗ್ಗೆ ಮರು ಪರಿಶೀಲಿಸಬೇಕು’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಅವರು ಪ್ರಧಾನಿಗೆ ಪತ್ರ ಬರೆದಿದ್ದು, ‘ಆರೋಗ್ಯ ವಿಮೆ ಮೇಲೂ ಶೇ 18 ರಷ್ಟು ಜಿಎಸ್‌ಟಿ ವಿಧಿಸುತ್ತಿರುವುದರಿಂದ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೆಚ್ಚಿನ ತೆರಿಗೆಯಿಂದಾಗಿ ಆರೋಗ್ಯ ವಿಮೆಯ ಪ್ರೀಮಿಯಂ ದುಬಾರಿಯಾಗಿದ್ದು, ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಸಿಗುತ್ತಿಲ್ಲ. ಬಹುತೇಕ ಮಧ್ಯಮ ವರ್ಗದವರು ಆರೋಗ್ಯ ವಿಮೆಗಳಿಂದ ದೂರವೇ ಉಳಿಯುತ್ತಿದ್ದಾರೆ. ಇದರಿಂದಾಗಿ ವೈದ್ಯಕೀಯ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಆರೋಗ್ಯ ವಿಮೆಯ ರಕ್ಷಣೆ ಸಿಗದೆ, ಇಡೀ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದನ್ನು ನಾವು ಕಾಣುತ್ತಿದ್ದೇವೆ. ಆದ್ದರಿಂದ ಆರೋಗ್ಯ ವಿಮೆಯ ಮೇಲಿನ ಜಿಎಸ್‌ಟಿ ಮರು ಪರಿಶೀಲಿಸುವಂತೆ ಸೋಮವಾರ (ಸೆಪ್ಟೆಂಬರ್ 9) ನಡೆಯಲಿರುವ ಜಿಎಸ್‌ಟಿ ಮಂಡಳಿಯ ಸಭೆಗೆ ಶಿಫಾರಸು ಮಾಡಬೇಕು’ ಎಂದು ತಿಳಿಸಿದ್ದಾರೆ.
‘ಆರೋಗ್ಯ ವಿಚಾರಗಳಲ್ಲಿ ತೆರಿಗೆ ನೀತಿಗಳು ಜನಪರವಾಗಿರಬೇಕು. ತೆರಿಗೆ ಪ್ರಮಾಣವನ್ನು ಕಡಿತಗೊಳಿಸುವುದರಿಂದ ಹೆಚ್ಚಿನ ಜನರು ಆರೋಗ್ಯ ವಿಮೆಯ ರಕ್ಷಣೆ ಪಡೆಯುವಂತೆ ಪ್ರೋತ್ಸಾಹಿಸಬಹುದು. ಇದರಿಂದ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗಗಳ ಆರ್ಥಿಕ ಸ್ಥಿತಿ ಕಾಪಾಡಬಹುದಾಗಿದೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.