ADVERTISEMENT

ಆಯುಷ್‌ ಚಿಕಿತ್ಸಾ ಪದ್ಧತಿಗೆ ಆದ್ಯತೆ: ಜೆ.ಪಿ.ನಡ್ಡಾ

​ಪ್ರಜಾವಾಣಿ ವಾರ್ತೆ
Published 3 ಜನವರಿ 2025, 16:18 IST
Last Updated 3 ಜನವರಿ 2025, 16:18 IST
ಜೆ.ಪಿ.ನಡ್ಡಾ  
ಜೆ.ಪಿ.ನಡ್ಡಾ     

ಬೆಂಗಳೂರು: ದೇಶದಲ್ಲಿ ಆಯುಷ್‌ ಚಿಕಿತ್ಸಾ ಪದ್ಧತಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾನ್ಯತೆ ಪಡೆದ ಗುಜರಾತ್‌ನ ಜಾಮ್ ನಗರದಲ್ಲಿರುವ ಜಾಗತಿಕ ಸಾಂಪ್ರದಾಯಿಕ ಔಷಧ ಕೇಂದ್ರವು ವೈದ್ಯಕೀಯ ಅಧ್ಯಯನ ಮತ್ತು ಆವಿಷ್ಕಾರಗಳ ವಿಶ್ವದ ಕೇಂದ್ರವಾಗಲಿದೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ತಿಳಿಸಿದರು.

ನಗರದಲ್ಲಿ ಶುಕ್ರವಾರ ಎಸ್.ವ್ಯಾಸ ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್‌ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಆಯುಷ್ ಈಗ ಸಾಂಪ್ರದಾಯಿಕ ಔಷಧಕ್ಕೆ ಮಾತ್ರ ಸೀಮಿತವಾಗಿಲ್ಲ.  ಆಧುನಿಕ ವಿಜ್ಞಾನದ ಜೊತೆಗೆ ಮುಂದುವರಿಯುತ್ತಿದೆ. ಆಯುಷ್ ಚಿಕಿತ್ಸಾ ಪದ್ಧತಿಗೆ ಸಂಬಂಧಿಸಿದ ಸಂಶೋಧನೆಗಳಿಗೆ ಹೆಚ್ಚು ಆದ್ಯತೆ ನೀಡಲಾಗಿದೆ. ಆಯುಷ್ ಸಚಿವಾಲಯವು 103 ದೇಶಗಳ ಜತೆ ಸಹಭಾಗಿತ್ವ ಹೊಂದಿದೆ’ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆರೋಗ್ಯ ಕ್ಷೇತ್ರದ ನೀತಿಗಳಲ್ಲಿ ಬದಲಾವಣೆ ತಂದಿದ್ದು, ಆರೋಗ್ಯ ಸೇವೆಯು ಸಮಗ್ರವಾಗಿ ದೊರೆಯುವಂತಾಗಬೇಕು. ಆಯುಷ್‌ ಚಿಕಿತ್ಸಾ ಪದ್ಧತಿಯನ್ನು ಮುಖ್ಯವಾಹಿನಿಗೆ ತರುವ ಉದ್ದೇಶದಿಂದ 22 ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಗಳಲ್ಲಿ ಆಯುಷ್‌ ಬ್ಲಾಕ್‌ ಅಥವಾ ಆಯುರ್ವೇದ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹೇಳಿದರು.

ADVERTISEMENT

ದೇಶದಲ್ಲಿ ಹೊಸ ಆರೋಗ್ಯ ನೀತಿ ಜಾರಿಗೆ ತರಲಾಗಿದೆ. 600 ಹಾಸಿಗೆ ಆರೋಗ್ಯ ಧಾಮ್  ಮತ್ತು ದೇಶದ ವಿವಿಧೆಡೆ ಯೋಗ ಮತ್ತು ನ್ಯಾಚುರೋಪಥಿ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿದೆ. ಮನುಷ್ಯನ ಮನಸ್ಸು, ದೇಹ ಆರೋಗ್ಯದಿಂದ ಇರಬೇಕು. ಒತ್ತಡ ನಿವಾರಣೆಗೆ ಯೋಗ ಸಹಕಾರಿ. ವಿದ್ಯಾರ್ಥಿಗಳಿಗೆ ಯೋಗ ಮುಖ್ಯ. ಕ್ರೀಡೆ, ಶಿಕ್ಷಣ ಅಥವಾ ಯಾವುದೇ ಕ್ಷೇತ್ರದಲ್ಲಿ ಮನುಷ್ಯನ ಯಶಸ್ಸಿನಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.

ಎಸ್‌–ವ್ಯಾಸ ವಿಶ್ವವಿದ್ಯಾಲಯದ ಕುಲಪತಿ ಎಚ್‌.ಆರ್.ನಾಗೇಂದ್ರ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಎಸ್‌–ವ್ಯಾಸ ಕುಲಪತಿ ಎಚ್.ಆರ್.ನಾಗೇಂದ್ರ ಮಾತನಾಡಿದರು.

ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಎಐಸಿಟಿಇ ಮುಖ್ಯಸ್ಥ ಟಿ.ಜಿ.ಸೀತಾರಾಮ್, ಸಂಸದರಾದ ಡಾ. ಸಿ.ಎನ್. ಮಂಜುನಾಥ್‌, ತೇಜಸ್ವಿ ಸೂರ್ಯ, ಕೈಗಾರಿಕೋದ್ಯಮಿ ಕ್ರಿಸ್ ಗೋಪಾಲಕೃಷ್ಣ, ಸತ್ವ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ವಿಜಯ್‌ ಅಗರವಾಲ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.